ಜಿಪಂನಲ್ಲಿ ಮತ್ತೆ ಆಪರೇಷನ್ ಕಮಲ?
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 20
ಜಿಲ್ಲಾ ಪಂಚಾಯ್ತಿ ಅಧಿಕಾರವನ್ನು ಮರಳಿ ಪಡೆಯಲು ಶ್ರೀರಾಮುಲು ಹಾಗೂ ರೆಡ್ಡಿ ಪಾಳಯ ಕಸರತ್ತು ಶುರು ಮಾಡಿದೆ.
ಮೇ 24ರಂದು ಮೂರನೇ ಅವಧಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯೆ ಸರಸ್ವತಿ ಅವರನ್ನು ತನ್ನತ್ತ ಸೆಳೆಯುತ್ತಿದ್ದು, ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಸಾಧಿಸಲಿದ್ದು, ಇನ್ನೊಬ್ಬರನ್ನು ಬಿಜೆಪಿ ಸೆಳೆದಿದ್ದೆಯಾದಲ್ಲಿ ಕಾಂಗ್ರೆಸ್‌ನಿಂದ ಅಧಿಕಾರವನ್ನು ಕಿತ್ತುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆ.
36 ಸದಸ್ಯಬಲವುಳ್ಳ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ 18 ಸ್ಥಾನ, ಕಾಂಗ್ರೆಸ್ 17 ಸ್ಥಾನ ಹಾಗೂ ಜೆಡಿಎಸ್(ಹಚ್ಚೊಳ್ಳಿ) ಒಂದು ಸ್ಥಾನದಲ್ಲಿ ಗೆಲವು ಸಾಧಿಸಿತ್ತು. ಮೊದಲನೆ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್‌ನ ಹಳೆಕೋಟೆ ಕ್ಷೇತ್ರದ ನಾಗರತ್ನಮ್ಮ ಅವರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೆಳೆದು ಜಿಪಂ ಅಧಿಕಾರ ಹಿಡಿದಿತ್ತು. ನಂತರದಲ್ಲಿ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯಿಂದ ಶ್ರೀರಾಮುಲು ಪಡೆ ಬಿಎಸ್‌ಆರ್ ಆಗಿ ಬೇರ್ಪಟ್ಟಿತ್ತು. ಈ ಸಂದರ್ಭದಲ್ಲಿಯೂ ಬಿಜೆಪಿ ಬೆಂಬಲ ಹಾಗೂ ಕೆಲ ಕಾಂಗ್ರೆಸ್ ಸದಸ್ಯರ ಬೆಂಬಲದಿಂದಲೇ ಬಿಎಸ್‌ಆರ್ ಅರ್ಥಾತ್ ಬಿಜೆಪಿಯವರು ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಕಾಂಗ್ರೆಸ್ ಮಮತಾ ಸುರೇಶ್ ಉಪಾಧ್ಯಕ್ಷರಾಗಿದ್ದರು.
ನಂತರದಲ್ಲಿ ಕಾಂಗ್ರೆಸ್‌ನ ಹಳೆಕೋಟೆ ಸದಸ್ಯೆ ನಾಗರತ್ನಮ್ಮನವರು ಕಾಂಗ್ರೆಸ್‌ಗೆ ಮರಳಿದ್ದರಿಂದ, ಇನ್ನು ಜೆಡಿಎಸ್ ಸದಸ್ಯ ಸರಸ್ವತಿ ಕಾಂಗ್ರೆಸ್ ಬೆಂಬಲ ಕೊಟ್ಟಿದ್ದು, ಇನ್ನು ಬಿಜೆಪಿಯ ಕೋಗಳಿ ಕ್ಷೇತ್ರದ ಕರಿಬಸವನಗೌಡ ರತ್ನಮ್ಮ ಅವರು ಕಾಂಗ್ರೆಸ್‌ಗೆ ಹೋಗಿದ್ದರಿಂದ ಕಾಂಗ್ರೆಸ್ ಬಲ ಹೆಚ್ಚಾಗಿ, ಬಿಜೆಪಿಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿ, ಕಾಂಗ್ರೆಸ್ ಶೋಭಾ ಬೆಂಡಿಗೇರಿ ಅಧ್ಯಕ್ಷರಾಗಿದ್ದರು. ಇದೀಗ ಮೂರನೇ ಅಥವಾ ಕೊನೆ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಮೇ 24ರಂದು ನಡೆಯಲಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ತೀವ್ರ ಪೈಪೋಟಿ ನಡೆದಿದೆ.
ಇತ್ತ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೇವಲ ಸದಸ್ಯರ ಪೈಪೋಟಿ ಮಾತ್ರ ನಡೆದಿಲ್ಲ, ಆಂತರಿಕವಾಗಿ ಕಾಂಗ್ರೆಸ್ ಮುಖಂಡರು ತಮ್ಮ ಹಿಂಬಾಲಕ ಸದಸ್ಯರಿಗೆ ಪೈಪೋಟಿ ಇದಾಗಿರುವುದರಿಂದ ಪಕ್ಷದಲ್ಲಿ ಗೊಂದಲ ಏರ್ಪಡಲು ಕಾರಣವಾಗಿದೆ. ಈಗಾಗಲೇ ಬಿಜೆಪಿ ಲೋಕಸಭೆಯಲ್ಲಿ ಗೆಲ್ಲುವ ಮೂಲಕ ಹುಮ್ಮಸ್ಸಿನಲ್ಲಿದೆ. ಕಳೆದ ಹೋಗಿರುವ ಜಿಲ್ಲಾ ಪಂಚಾಯ್ತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಪಡೆಯಲು ತೆರೆಮರೆಯಲ್ಲಿಯೇ ತೀವ್ರತರದ ಕಸರತ್ತು ನಡೆಸುತ್ತಿದೆ. ಈಗಾಗಲೇ ಮೀಸಲಾತಿ ಸಮಸ್ಯೆಯಿಂದಾಗಿ ಕೆಲ ಸದಸ್ಯರು ನ್ಯಾಯಾಲಯ ಮೆಟ್ಟಿಲು ಹತ್ತಿರುವ ಮಧ್ಯೆಯೇ ಚುನಾವಣೆ ಸಿದ್ಧತೆ ಜೋರಾಗಿ ನಡೆದಿದೆ.
ಮತ್ತೆ ಆಪರೇಷನ್ ಕಮಲ ?
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯರ ಆಪರೇಷನ್ ಕಮಲಕ್ಕೆ ಕೈ ಮುಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈವರೆಗೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಸಿರುಗುಪ್ಪ ತಾಲೂಕಿನ ಜೆಡಿಎಸ್ ಹಚ್ಚೊಳ್ಳಿ ಕ್ಷೇತ್ರದ ಸದಸ್ಯೆ ಸರಸ್ವತಿ ಅವರ ಬಿಜೆಪಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದ್ದು, ಇನ್ನು ಕೆಲ ಸದಸ್ಯರನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಇಷ್ಟರ ಮಧ್ಯೆ ಯಾರು ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರಿ ಚುಕ್ಕಾಣಿ ಹಿಡಿಯುತ್ತಾರೋ ಎಂಬುದು ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಸದಸ್ಯರ ಹಾಗೂ ಮುಖಂಡರಲ್ಲಿನ ಭಿನ್ನತೆ ಮುಂದುವರಿದಲ್ಲಿ ಬಿಜೆಪಿಯು ಇದನ್ನು ದಾಳವಾಗಿ ಬಳಸಿಕೊಂಡು, ಜಿಲ್ಲಾ ಪಂಚಾಯ್ತಿಯ ಚುಕ್ಕಾಣಿ ಹಿಡಿದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿರೇಹಡಗಲಿ ಕ್ಷೇತ್ರದ ವಸಂತ(ವಾಸು) ಹಾಗೂ ದೇವಗಿರಿ ಕ್ಷೇತ್ರದ ಎಚ್. ಲಕ್ಷ್ಮಣ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಸ್ಪರ್ಧೆಯಲ್ಲಿ ಲತಾ, ರೋಗಾಣಿ ಹುಲುಗಪ್ಪ ಇದ್ದಾರೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

