ಪಶ್ಚಿಮ ಬಂಗಾಳದಲ್ಲಿ ಪ್ರಚಾರದ ಅವಧಿ 1 ದಿನ ಕಡಿತ, ಇಂದೇ ಬಹಿರಂಗ ಪ್ರಚಾರ ಅಂತ್ಯ!

ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಇನ್ನೂ ಮೂರು ದಿನ ಬಾಕಿ ಉಳಿದಿರುವಂತೆಯೇ ಕೇಂದ್ರ ಚುನಾವಣಾ ಆಯೋಗ ಅನಿರೀಕ್ಷಿತ ನಿರ್ಧಾರ ಕೈಗೊಂಡಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಅವಧಿಯನ್ನು 1 ದಿನ ಕಡಿತಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಇನ್ನೂ ಮೂರು ದಿನ ಬಾಕಿ ಉಳಿದಿರುವಂತೆಯೇ ಕೇಂದ್ರ ಚುನಾವಣಾ ಆಯೋಗ ಅನಿರೀಕ್ಷಿತ ನಿರ್ಧಾರ ಕೈಗೊಂಡಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಅವಧಿಯನ್ನು 1 ದಿನ ಕಡಿತಗೊಳಿಸಿದೆ.
ಆ ಮೂಲಕ ಇಂದೇ ಎಲ್ಲ ರೀತಿಯ ಬಹಿರಂಗ ಪ್ರಚಾರವನ್ನು ಅಂತ್ಯಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಹಾಲಿ ಲೋಕಸಭಾ ಚುನಾವಣೆಯ ನಿಮಿತ್ತ ಇದೇ ಭಾನುವಾರ 7ನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದ್ದು, ಕೊನೆಯ ಹಂತದಲ್ಲಿ ಮತದಾನ ನಡೆಯಲಿರುವ ಒಂಬತ್ತು ಲೋಕಸಬಾ ಕ್ಷೇತ್ರಗಳ ಬಹಿರಂಗ ಪ್ರಚಾರವನ್ನು ಗುರುವಾರ ರಾತ್ರಿ 10 ಗಂಟೆಗೆ ಕೊನೆಗೊಳಿಸಬೇಕು ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ಆ ಮೂಲಕ ಬಹಿರಂಗ ಪ್ರಚಾರದ ಅವಧಿಯನ್ನು ಒಂದು ದಿನ ಕಡಿತಗೊಳಿಸಲಾಗಿದೆ. 
ಆಯೋಗದ ಅನಿರೀಕ್ಷಿತ ನಿರ್ಧಾರಕ್ಕೆ ಬಿಜೆಪಿ-ಟಿಎಂಸಿ ಘರ್ಷಣೆ ಕಾರಣ
ಇನ್ನು ಕೇಂದ್ರ ಚುನಾವಣಾ ಆಯೋಗದ ಈ ದಿಢೀರ್ ನಿರ್ಧಾರಕ್ಕೆ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆ ಕಾರಣ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕೋಲ್ಕತ್ತಾದಲ್ಲಿ ಮಂಗಳವಾರ ರೋಡ್‌ ಷೋ ನಡೆಸಿದ್ದರು. ಆ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಹಲವರು ಗಾಯಗೊಂಡಿದ್ದರು. ಕೋಲ್ಕತ್ತದಲ್ಲಿ ಶಾ ಅವರ ರೋಡ್‌ ಷೋ ಸಂದರ್ಭದಲ್ಲಿ ಕಲ್ಲು ತೂರಾಟ ಹಾಗೂ ಆ ನಂತರ ಗಲಭೆ ನಡೆದು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿಯನ್ನೂ ಧ್ವಂಸಗೊಳಿಸಲಾಗಿತ್ತು. ಈ ಘಟನೆಗಳನ್ನು ಬಿಜೆಪಿ ಮತ್ತು ಟಿಎಂಸಿ ಖಂಡಿಸಿವೆ. ಪ್ರತಿಭಟನೆಯನ್ನೂ ನಡೆಸಿವೆ. ಪರಸ್ಪರರ ವಿರುದ್ಧ ಆರೋಪಗಳನ್ನೂ ಈ ಪಕ್ಷಗಳ ಮುಖಂಡರು ಮಾಡಿದ್ದಾರೆ. 
ಇದೇ ಕಾರಣಕ್ಕೆ ಆಯೋಗವು ತನ್ನ ಸಾಂವಿಧಾನಿಕ ವಿಶೇಷ ಹಕ್ಕನ್ನು ಪ್ರಯೋಗಿಸಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಮತದಾನಕ್ಕೆ 48 ಗಂಟೆ ಇರುವಂತೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ಅದರ ಪ್ರಕಾರ ಈ 9 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಶುಕ್ರವಾರ ಸಂಜೆ ಅಂತ್ಯವಾಗಬೇಕಿತ್ತು. ಆದರೆ ಗಲಭೆ ಸಂಭವಿಸಿದ ಕಾರಣಕ್ಕೆ ಗುರುವಾರ ರಾತ್ರಿ 10 ಗಂಟೆಯ ನಂತರ ಬಹಿರಂಗ ಪ್ರಚಾರ ನಡೆಸಬಾರದು ಎಂದು ಆಯೋಗ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com