ಪ್ರಚಾರ ಅವಧಿ ಕಡಿತ: ಬಿಜೆಪಿಗೆ ಆಯೋಗದ ಗಿಫ್ಟ್, ದೀದಿ ಆಕ್ರೋಶ

ಪ್ರಚಾರದ ಅವಧಿಯನ್ನು 1 ದಿನ ಕಡಿತಗೊಳಿಸಿದ ಚುನಾವಣಾ ಆಯೋಗದ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆ, ಹಿಂಸಾಚಾರ ತಾರಕಕ್ಕೇರಿದ ಬೆನ್ನಲ್ಲೇ ಪ್ರಚಾರದ ಅವಧಿಯನ್ನು 1 ದಿನ ಕಡಿತಗೊಳಿಸಿದ ಚುನಾವಣಾ ಆಯೋಗದ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖಂಡಿಸಿದ್ದು, ಇದು ಬಿಜೆಪಿಗೆ ಆಯೋಗದ ಗಿಫ್ಟ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕೋಲ್ಕತ್ತಾದಲ್ಲಿ ಮಂಗಳವಾರ ರೋಡ್‌ ಷೋ ನಡೆಸಿದ್ದರು. ಆ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಹಲವರು ಗಾಯಗೊಂಡಿದ್ದರು. ಕೋಲ್ಕತ್ತದಲ್ಲಿ ಶಾ ಅವರ ರೋಡ್‌ ಷೋ ಸಂದರ್ಭದಲ್ಲಿ ಕಲ್ಲು ತೂರಾಟ ಹಾಗೂ ಆ ನಂತರ ಗಲಭೆ ನಡೆದು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿಯನ್ನೂ ಧ್ವಂಸಗೊಳಿಸಲಾಗಿತ್ತು.

ಇದೇ ಕಾರಣಕ್ಕೆ ಆಯೋಗವು ತನ್ನ ಸಾಂವಿಧಾನಿಕ ವಿಶೇಷ ಹಕ್ಕನ್ನು ಪ್ರಯೋಗಿಸಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಮತದಾನಕ್ಕೆ 48 ಗಂಟೆ ಇರುವಂತೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ಅದರ ಪ್ರಕಾರ ಈ 9 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಶುಕ್ರವಾರ ಸಂಜೆ ಅಂತ್ಯವಾಗಬೇಕಿತ್ತು. ಆದರೆ ಗಲಭೆ ಸಂಭವಿಸಿದ ಕಾರಣಕ್ಕೆ ಗುರುವಾರ (ಮೇ 16) ರಾತ್ರಿ 10 ಗಂಟೆಯ ನಂತರ ಬಹಿರಂಗ ಪ್ರಚಾರ ನಡೆಸಬಾರದು ಎಂದು ಆಯೋಗ ಸೂಚಿಸಿದೆ.

ಚುನಾವಣಾ ಆಯೋಗದ ಈ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದು, ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಇಲ್ಲವೇ ಇಲ್ಲ. ಹಾಗಿದ್ದರೂ 324ನೇ ವಿಧಿಯ ಅನ್ವಯ ಆಯೋಗ ಕ್ರಮ ಕೈಗೊಂಡಿದೆ. ಆಯೋಗದ ಈ ಕ್ರಮ ಅಸಾಂವಿಧಾನಿಕ ಮತ್ತು ಅನೈತಿಕ. ಕೇವಲ ಬಿಜೆಪಿಗೆ ಅನುಕೂಲ ಮಾಡಿಕೊಡುವ ಕಾರಣದಿಂದಲೇ ಆಯೋಗ ಈ ಕ್ರಮ ಕೈಗೊಂಡಿದೆ. ಇದು ಬಿಜೆಪಿಗೆ ಆಯೋಗ ನೀಡಿರುವ ಉಡುಗೊರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com