ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ: ಉಮೇದುವಾರಿಕೆಗೆ ನಾಳೆ ಕೊನೆ ದಿನ

ಏಪ್ರಿಲ್ 18ರಂದು ನಡೆಯಲಿರುವ ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿತ್ತು....
ನಾಮಪತ್ರ ಸಲ್ಲಿಸುತ್ತಿರುವ ನಾಯಕರು
ನಾಮಪತ್ರ ಸಲ್ಲಿಸುತ್ತಿರುವ ನಾಯಕರು
ಬೆಂಗಳೂರು: ಏಪ್ರಿಲ್ 18ರಂದು ನಡೆಯಲಿರುವ ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿತ್ತು. ಮೈತ್ರಿ ಪಕ್ಷದ ಅಭ್ಯರ್ಥಿಗಳು ಹಾಗೂ ಬಿಜೆಪಿ ಹುರಿಯಾಳುಗಳು ತಮ್ಮ ಅಪಾರ ಬೆಂಬಲಿಗರ ಜೊತೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಬಹುತೇಕ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಶಕ್ತಿ ಪ್ರದರ್ಶನವೂ ನಡೆದದ್ದು ವಿಶೇಷ.
ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾದ ಹಿನ್ನಲೆಯಲ್ಲಿ ಬಹುತೇಕ ಘಟಾನುಘಟಿ ನಾಯಕರು ಇಂದೇ ತಮ್ಮ ನಾಮಪತ್ರ ಸಲ್ಲಿಸಿದರು.
ತುಮಕೂರಿನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬೆಂಗಳೂರು ಉತ್ತರದಿಂದ ಡಿ.ವಿ.ಸದಾನಂದಗೌಡ, ಹಾಸನದಿಂದ ಎ.ಮಂಜು, ಮೈಸೂರಿನಿಂದ ಸಿ.ಎಚ್.ವಿಜಯ್ ಶಂಕರ್ ಸೇರಿದಂತೆ ಪ್ರಮುಖ ನಾಯಕರು ಸ್ಪರ್ಧೆ ಬಯಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯ ಶಂಕರ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಾಥ್ ನೀಡಿದ್ದರು.
ಮೈಸೂರಿನ ಕೋಟೆ ಆಂಜನೇಯ ದೇವಾಲಯಕ್ಕೆ ಮೊದಲು ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಮೈಸೂರಿನ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮೈಸೂರು-ಕೊಡಗು ಅಭ್ಯರ್ಥಿಯಾಗಿ ಎರಡನೆ ಬಾರಿಗೆ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಇಂದು ಪ್ರತಾಪ್ ಸಿಂಹ ತಮ್ಮ ನಾಮಪತ್ರವನ್ನು ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸಿದರು.
ಪ್ರತಾಪ್ ಸಿಂಹ ಅವರಿಗೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಎ.ರಾಮದಾಸ್ ಹಾಗೂ ಕೆ.ಜಿ ಬೋಪಯ್ಯ ಸಾಥ್ ನೀಡಿದರು. ನಾಮಪತ್ರ ಸಲ್ಲಿಸುವ ಮುನ್ನ ಪ್ರತಾಪ್ ಸಿಂಗ್ ಮೈಸೂರಿನ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಬಳಿಕ ಸುತ್ತೂರು ಶ್ರೀಗಳ ಆರ್ಶೀವಾದ ಪಡೆದು ಬಳಿಕ ಮೆರವಣಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಚಾಮರಾಜನಗರದಲ್ಲಿ ಹಾಲಿ ಸಂಸದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಧ್ರುವನಾರಾಯಣ್ ನಾಮಪತ್ರ ಸಲ್ಲಿಸಿದರು. ಅವರಿಗೆ ಉಸ್ತುವಾರಿ ಸಚಿವರಾದ ಪುಟ್ಟರಂಗ ಶೆಟ್ಟಿ, ಶಾಸಕರಾದ ನರೇಂದ್ರ, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು ಜೊತೆಯಲ್ಲಿದ್ದರು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆಯಲ್ಲಿ ಸಾಗಿ ಡಿಸಿ ಕಚೇರಿಯಲ್ಲಿ ಧ್ರುವನಾರಾಯಣ್ ನಾಮಪತ್ರ ಸಲ್ಲಿಸಿದರು.
ವಿ.ಶ್ರೀನಿವಾಸ್ ಪ್ರಸಾದ್ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಎಚ್.ಡಿ.ರೇವಣ್ಣ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬೆಳಗ್ಗೆ ಚಾಮುಂಡೇಶ್ವರಿ ದೇವಾಲಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುತ್ತೂರು ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದು ಬಳಿಕ ಮಂಡ್ಯದ ಕಾಳಿಕಾಂಬ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಯಲ್ಲಿ ತೆರಳಿದರು. 
ಇತ್ತ ತುಮಕೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಬಂಡಾಯವೆದ್ದಿರುವ ಹಾಲಿ ಸಂಸದ ಮುದ್ದ ಹನುಮೇಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಮುದ್ದ ಹನುಮೇಗೌಡರೊಂದಿಗೆ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಹ ಭಾಗಿಯಾಗಿದ್ದರು,.
ಮತ್ತೊಂದೆಡೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರು.ಇದಕ್ಕೂ ಮೊದಲು ಮಾಜಿ ಪ್ರಧಾನಿ ದೇವೇಗೌಡರು ಮನೆ ದೇವರು ಹೊಳೆನರಸೀಪುರ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ನೇರವಾಗಿ ತುಮಕೂರಿಗೆ ಆಗಮಿಸಿದರು. ಬಳಿಕ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಮುಂದಾದರು.ಆದರೆ ಸಮಯಾವಕಾಶ ಮೀರಿದ ಹಿನ್ನಲೆಯಲ್ಲಿ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ತೆರಳಿ ನಾಮಪತ್ರ ಸಲ್ಲಿಸಿದರು.
ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎ.ಮಂಜು, ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಎಂ.ವೀರಪ್ಪ ಮೊಯಿಲಿ, ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ, ಕೋಲಾರದಿಂದ ಕೆ.ಎಚ್.ಮುನಿಯಪ್ಪ, ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ, ದಕ್ಷಿಣ ಕನ್ನಡದಿಂದ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಿಥುನ್ ರೈ, ಉಡುಪಿ ಚಿಕ್ಕಮಂಗಳೂರು ಜೆಡಿಎಸ್ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಿ.ವಿ.ಸದಾನಂದಗೌಡ, ಬೆಂಗಳೂರು ಕೇಂದ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್, ಚಿತ್ರದುರ್ಗದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ನಾಮಪತ್ರ ಸಲ್ಲಿಸಿದ ಪ್ರಮುಖರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com