ಪಟ್ಟಿಯಿಂದ ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ರದ್ದು: ಕಂಗಾಲಾದ ಮತದಾರರು

ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಿಂದ ಲಕ್ಷಾಂತರ ಮತದಾರರ ಹೆಸರನ್ನು ಕೈ ಬಿಡಲಾಗಿದೆ...
ಹಕ್ಕು ಚಲಾಯಿಸಿದ ರಮೇಶ್ ಅರವಿಂದ್ ದಂಪತಿ
ಹಕ್ಕು ಚಲಾಯಿಸಿದ ರಮೇಶ್ ಅರವಿಂದ್ ದಂಪತಿ
ಬೆಂಗಳೂರು: ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಿಂದ ಲಕ್ಷಾಂತರ ಮತದಾರರ ಹೆಸರನ್ನು ಕೈ ಬಿಡಲಾಗಿದೆ ಎಂದು ಬಿಜೆಪಿ ಶಾಸಕರು ಗಂಭೀರ ಆರೋಪ ಮಾಡಿದ್ದು, ಮತದಾರರ ಪಟ್ಟಿಯಿಂದ ದಿಡೀರ್ ಹೆಸರುಗಳನ್ನು ತೆಗೆದುಹಾಕಿರುವದರಲ್ಲಿ ಕೈ ನಾಯಕರ ಕೈವಾಡವಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಶಾಂತಿನಗರದ ವ್ಯಾಪ್ತಿಯ 119 ಬೂತ್ ನಲ್ಲಿ 1000 ಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿವೆ. ಇಂದು ಮತಗಟ್ಟೆಗೆ ಆಗಮಿಸಿದ ಮತದಾರರಿಗೆ ನಿಜಕ್ಕೂ ಆಘಾತ ತಂದಿದೆ. ಕಳೆದ 20 ವರ್ಷಗಳಿಂದಲೂ ಮತದಾನ ಮಾಡುತ್ತಿದ್ದರೂ ದಿಡೀರ್ ಹೆಸರು ಕೈಬಿಟ್ಟಿರುವುದು ಸಂಶಯಕ್ಕೆ ಕಾರಣವಾಗಿದೆ. ವಿಪರ್ಯಾಸವೆಂದರು ಪಟ್ಟಿಯಲ್ಲಿ ಮೃತ ಸರ್ಕಾರಿ ನೌಕರರ ಹೆಸರುಗಳು ಸೇರ್ಪಡೆಯಾಗಿದೆ. ಆದರೆ ಬದುಕಿರುವವರ ಹೆಸರುಗಳು ನಾಪತ್ತೆಯಾಗಿರುವುದಕ್ಕೆ ಚುನಾವಣಾ ಆಯೋಗದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. 
ಮತಚಲಾಯಿಸಲು ಬಂದ ಸುಮಾರು 367 ಮತದಾರರು ತಮ್ಮ ಹೆಸರಿಲ್ಲದೇ ಕಂಗಾಲಾದ ಘಟನೆ ರಾಜಾಜಿ ನಗರದ ಕೆಎಲ್‍ಇ ಕಾಲೇಜಿನ ಮತಗಟ್ಟೆಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಂತರ ಲೋಕಸಭಾ ಕ್ಷೇತ್ರದ ವ್ತಾಪ್ತಿಗೆ ಬರುವ ಮತಗಟ್ಟೆಗೆ ತೆರಳಿದ 367 ಮಂದಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದನ್ನು ನೋಡಿ ಕಂಗಾಲಾಗಿದ್ದಾರೆ. ಮತದಾರರು ಮತಗಟ್ಟೆ ಮುಂದೆ ಜಮಾಯಿಸಿ ಚುನಾವಣೆ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿದರು. ಬೆಳಗ್ಗೆಯಿಂದಲೇ ಮತದಾರರು ಸಾಲುಗಟ್ಟಿ ಮತಗಟ್ಟೆಗೆ ಆಗಮಿಸಿದರು. ಆದರೆ ಮತ ಹಾಕಲು ಆಗದೇ ಮತದಾರರು ಅಸಹಾಯಕತೆ ವ್ಯಕ್ತಪಡಿಸಿದ ಅಲ್ಲಿಂದ ಮರಳಿದರು. ಮತದಾರರ ಪಟ್ಟಿ ಪರಿಶೀಲಿಸಿದಾಗ ಅದರಲ್ಲಿ ಹೆಸರು ರದ್ದುಪಡಿಸಿದೆ ಎಂದು ತೋರಿಸುತ್ತಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಎಂದು ಅಧಿಕಾರಿಗಳ ಬಳಿ ಮತದಾರರು ಮನವಿ ಮಾಡಿದರು. ಆದರೆ ಅಧಿಕಾರಿಗಳು ಪರಿಶೀಲಿಸುವುದಾಗಿ ಸಬೂಬು ಹೇಳುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಮತದಾರರು ಚುನಾವಣೆ ಪ್ರಕ್ರಿಯೆ ನಿಲ್ಲಿಸುವಂತೆ ಆಗ್ರಹಿಸಿದರು. ಪರಿಶೀಲನೆ ನಡೆಸಿದ ನಂತರ ಚುನಾವಣೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಪದ್ಮನಾಭ ನಗರದ ಮತಕೇಂದ್ರ 172 ರಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗಿದ್ದು, ಅದರಿಂದ 15ಕ್ಕೂ ಹೆಚ್ಚು ಮಂದಿ ಮತದಾನದಿಂದ ವಂಚಿತರಾಗಿದ್ದಾರೆ‌. ಕುಟುಂಬ ಸಮೇತರಾಗಿ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದ ಮತದಾರರು, ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಮತದಾರರ ಪಟ್ಟಿಯಿಂದ ಹೆಸರು ರದ್ದುಪಡಿಸಿದ್ದನ್ನು ಪ್ರಶ್ನಿಸಿದರು. ಮತಗಟ್ಟೆಯ ಅಧಿಕಾರಿಗಳು ಯಾರೂ ಉತ್ತರಿಸಲಿಲ್ಲ‌. ಮತಗಟ್ಟೆ ಬಿಟ್ಟು ಹೊರ ಹೋಗಿ ಎಂದು ಉಡಾಫೆ ಉತ್ತರ ನೀಡಿ ಕಳುಹಿಸಿದರು. ಕುಟುಂಬದ ಮಕ್ಕಳಿಗೆ ಮತದಾನದ ಅವಕಾಶ ಸಿಕ್ಕಿದೆ ಆದರೆ ತಂದೆ-ತಾಯಿಗೆ ಅವಕಾಶ ಇರಲಿಲ್ಲ. ಅವರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವೃದ್ಧೆ ವಿಜಯಲಕ್ಷ್ಮಿ, 'ಕುಟುಂಬದವರೆಲ್ಲ ಒಂದೇ ಮನೆಯಲ್ಲಿದ್ದೇವೆ. ಮಗನಿಗೆ ಮತ ಹಕ್ಕು ನನಗೆ ಇಲ್ಲ. ಯಾವುದೇ ಮಾಹಿತಿ ನೀಡದೇ ಮನೆಗೂ ಬಂದು ವಿಚಾರಿಸದೇ ಹೆಸರು ಅಳಿಸಿದ್ದಾರೆ.' ಎಂದು ಬೇಸರ ವ್ಯಕ್ತಪಡಿಸಿದರು.   
ಮತ್ತೊಂದೆಡೆ ಜಯನಗರ ನಿವಾಸಿಗಳಾದ ಅಮೃತ್ ಕುಮಾರ್ ಕುಟುಂಬದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ರದ್ದುಪಡಿಸಲಾಗಿದೆ. ವಿದ್ಯಾ ಹಾಗೂ ಅಮೃತ್ ಕುಮಾರ್ ಕುಟಂಬದವರಿಂದ ಚುನಾವಣಾ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. 25 ವರ್ಷಗಳಿಂದ ಜಯನಗರದಲ್ಲಿ ಮತದಾನ ಮಾಡುತ್ತಿದ್ದೇವೆ. ಈ ಬಾರಿ ಯಾವುದೇ ಮಾಹಿತಿ ನೀಡದೆ ನೀಡದೆ ರದ್ದುಗೊಳಿಸಿದ್ದಾರೆ. ಇದರ ಹಿಂದೆ ರಾಜಕೀಯ ವ್ಯಕ್ತಿಗಳ ಹುನ್ನಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತದಾರರ ಪಟ್ಟಿಯಿಂದ ಹೆಸರು ರದ್ದುಪಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದತೆ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಕಾಂಗ್ರೆಸ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ಬೆಂಗಳೂರಿನಲ್ಲಿ 1 ಲಕ್ಷ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರ ಒಂದರಲ್ಲೇ 60 ಸಾವಿರ ಮತದಾರರ ಹೆಸರು ರದ್ದಾಗಿವೆ. ಇದರಲ್ಲಿ 80 ರಷ್ಟು ಮತಗಳು ಬಿಜೆಪಿಯ ಮತಗಳಾಗಿದೆ. ಹೀಗೆ ಹೆಸರು ರದ್ದು ಮಾಡಿದಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು, ಅವರಿಗೆ ಮತದಾನದ ಹಕ್ಕನ್ನು ನೀಡಬೇಕೆಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
ಇದೇ ವೇಳೆ ಬೆಂಗಳೂರು ರಾಜಾರಾಜೇಶ್ವರಿ ನಗರದಲ್ಲೂ ಕೆಲವೆಡೆ ಮತದಾರರ ಪಟ್ಟಿಯಿಂದ ಹಲವಾರು ಕುಟುಂಬಗಳ ಹೆಸರನ್ನು ಕೈಬಿಡಲಾಗಿದೆ ಎಂದು ಮತಗಟ್ಟೆಗೆ ಆಗಮಿಸಿದ ಮತದಾರರ ಆರೋಪಿಸಿದ್ದಾರೆ. ಮತ್ತೊಂದೆಡೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಬ್ಬಾಳ ಪ್ರದೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ಈ ಎಲ್ಲಾ ಮತದಾರರ ನಕಲಿ ಮತದಾರರಾಗಿದ್ದು ಕಾಂಗ್ರೆಸ್ ನಾಯಕರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.   
ಬಿಜೆಪಿ ಶಾಸಕರ ಆರೋಪಕ್ಕೆ ಸ್ಪಷ್ಟೀಕರಣ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಎಂಟು ತಿಂಗಳಿನಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ರದ್ದುಗೊಳಿಸುವುದು, ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿದೆ. ಕೆಲವರು ಫಾರಂ ನಂಬರ್ 6 ಭರ್ತಿ ಮಾಡಿಕೊಟ್ಟಿಲ್ಲ, ಮಾರ್ಚ್ 15 ವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ, ರದ್ದುಗೊಳಿಸಲು ಅವಕಾಶವಿತ್ತು. ಚುನಾವಣೆಗೂ ಮುನ್ನವೇ ಕರಡು ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಬೋಗಸ್ ಮತದಾರರ ಹೆಸರು ಸೇರ್ಪಡೆ, ಅಥವಾ ರದ್ದತಿ ಬಗ್ಗೆ ಮಾಹಿತಿ ನೀಡಬೇಕಿತ್ತು. ಈಗ ಹೇಳಿದರೆ ಏನು ಪ್ರಯೋಜನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com