ಫಿಫಾ ವಿಶ್ವಕಪ್ 2014

ಉರುಗ್ವೆ ಉರಿಗೆ ಆಂಗ್ಲರ ಕನಸು ಭಸ್ಮ

ಉರುಗ್ವೆ ಉರಿಗೆ ಆಂಗ್ಲರ ಕನಸು ಭಸ್ಮ
Published On :

ಸೌ ಪೌಲೊ: ಮಾಜಿ ಚಾಂಪಿಯನ್ಸ್ ಇಂಗ್ಲೆಂಡ್ ಕೂಡ 2014ರ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಗುಂಪು ಸುತ್ತಿನ ಪೈಪೋಟಿಯಿಂದಲೇ ಅಂಕಣ ತೊರೆಯುವುದು ಬಹುತೇಕ ಖಚಿತವಾಗಿದೆ.
ಎರೆನಾ ಕೋರಿಂಥಿಯನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 'ಡಿ' ಗುಂಪಿನ ಪಂದ್ಯದಲ್ಲಿ ಉರುಗ್ವೆ ತಂಡದ ಆಟಗಾರರು 2-1 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸಿದರು. ಇದರೊಂದಿಗೆ ನಾಲ್ಕು ತಂಡಗಳನ್ನು ಒಳಗೊಂಡ ತನ್ನ ಗುಂಪಿನಲ್ಲಿ ಇಂಗ್ಲೆಂಡ್ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ನಾಕೌಟ್ ಸುತ್ತಿನ ಆಸೆಯನ್ನು ಬಹುತೇಕ ಕೈಬಿಟ್ಟಾಗಿದೆ.
ಈ ಪಂದ್ಯ ಉರುಗ್ವೆ ಮತ್ತು ಇಂಗ್ಲೆಂಡ್ ತಂಡಗಳೆರಡಕ್ಕೂ ಮಾಡು ಇಲ್ಲವೇ ಮಡಿ ಕದನವಾಗಿತ್ತು. ಏಕೆಂದರೆ, ಉಭಯ ಪಡೆಗಳು ತಮ್ಮ ಮೊದಲ ಸುತ್ತಿನಲ್ಲಿ ಸೋಲು ಕಂಡಿದ್ದವು. ಹಾಗಾಗಿ, ಟೂರ್ನಿಯಲ್ಲಿ ಉಳಿದುಕೊಳ್ಳಬೇಕಾದರೆ, ತಮ್ಮ ಎರಡನೇ ಸುತ್ತಿನ ಪಂದ್ಯಗಳನ್ನು ಗೆದ್ದುಕೊಳ್ಳಲೇಬೇಕಾಗಿತ್ತು. ಆದರೆ, ಉರುಗ್ವೆ ಆಟಗಾರರು ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದರೆ, ಇಂಗ್ಲೆಂಡ್ ಮಾತ್ರ ಜೋಲು ಮೋರೆ ಹಾಕಬೇಕಾಯಿತು.
ಎರಡು ಬಾರಿಯ ಚಾಂಪಿಯನ್ ಉರುಗ್ವೆ ತಂಡದಲ್ಲಿ ಮಿಂಚಿನ ಕಾಲ್ಚಳಕ ತೋರಿದ ಮುನ್ಪಡೆ ಆಟಗಾರ ಲೂಯಿಸ್ ಸೂರೆಜ್ ತಂಡದ ಗೆಲವಿನ ರೂವಾರಿಯನಿಸಿದರು. ಅವರು ಒಟ್ಟು 2 ಗೋಲುಗಳನ್ನು ಬಾರಿಸಿ ಉರುಗ್ವೆ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು 39 ಮತ್ತು 85ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ಇಂಗ್ಲೆಂಡ್ ತಂಡಕ್ಕೆ ಹೊರದಾರಿ ತೋರಿಸಿದರು.
ಕಳೆದ ತಿಂಗಳು ಮಂಡಿ ನೋವಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಲೂಯಿಸ್ ಸೂರೆಜ್, ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಕೋಸ್ಟ ರಿಕಾ ವಿರುದ್ಧ ಸಮರಕ್ಕೆ ಇಳಿದಿರಲಿಲ್ಲ. ಈ ಪಂದ್ಯವನ್ನು ಕೋಸ್ಟ ರಿಕಾ 3-1 ಗೋಲುಗಳಿಂದ ಗೆದ್ದುಕೊಂಡಿತ್ತು. ಆದರೆ, ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕಾಗಿ ಉರುಗ್ವೆ ಪರ ಆಡಲು ಮೈದಾನಕ್ಕಿಳಿದ ಸೂರೆಜ್ ಮೇಲೆ ತಂಡ ಪೂರ್ಣ ಅವಲಂಬಿಸಿತ್ತು. ಎಲ್ಲರ ನಿರೀಕ್ಷೆಯಂತೆಯೇ ಮೈದಾನದ ತುಂಬೆಲ್ಲ ಛಲದಿಂದ ಹೋರಾಟ ನಡೆಸಿ ಒಂದೊಂದೇ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತ ಸಾಗಿದ ಸೂರೆಜ್ ತಮ್ಮ ತಂಡಕ್ಕೆ ಎರಡು ಗೋಲು ಗಳಿಸಿಕೊಟ್ಟು ಗೆಲವು ಖಚಿತಪಡಿಸಿದರು.
ಮತ್ತೊಂದೆಡೆ ವಿರಾಮದ ವೇಳೆ 0-1 ಗೋಲಿನಿಂದ ಹಿಂದೆ ಇದ್ದ ಇಂಗ್ಲೆಂಡ್ ತಂಡದ ಪಾಲಿಗೆ ಎರಡನೇ ಅವಧಿಯಲ್ಲಿ ವೇಯ್ನ್ ರೂನಿ ಅಪದ್ಭಾಂದವರಾದರು. ಪಂದ್ಯದ 75ನೇ ನಿಮಿಷದಲ್ಲಿ ಎದುರಾಳಿ ಕೋಟೊಯೊಳಗೆ ನುಗ್ಗಿಬಂದ ಅವರು ಸಹ ಆಟಗಾರರು ನೀಡಿದ ಪಾಸ್‌ನಲ್ಲಿ ಅದ್ಧುತ ಗೋಲು ದಾಖಲಿಸಿ ಇಂಗ್ಲೆಂಡ್ ಮತ್ತು ಉರುಗ್ವೆ ನಡುವಿನ ಹೋರಾಟವನ್ನು 1-1ರಿಂದ ಸಮಸ್ಥಿತಿಗೆ ತಂದು ನಿಲ್ಲಿಸಿದರು. ಇದು ರೂನಿಗೆ ಟೂರ್ನಿಯ ಮೂರನೇ ಪ್ರವೇಶದಲ್ಲಿ ಮತ್ತು ಒಟ್ಟಾರೆ 10ನೇ ವಿಶ್ವಕಪ್ ಪಂದ್ಯದಲ್ಲಿ ಮೊದಲ ಗೋಲು ದಾಖಲಿಸಿದ ತೃಪ್ತಿಗೊಳಗಾದರು. ಆ ಮೂಲಕ ವಿಶ್ವಕಪ್‌ನಲ್ಲಿನ ವೈಫಲ್ಯದಿಂದ ಅವರು ಹೊರಬಂದರು.  ಆದರೆ, ಇಂಗ್ಲೆಂಡ್ ತಂಡಕ್ಕೆ ಈ ಸಂಭ್ರಮ ಬಹಳ ಕಾಲ ಉಳಿಯಲಿಲ್ಲ. ಕೇವಲ ಹತ್ತು ನಿಮಿಷಗಳ ಅಂತರದಲ್ಲಿಯೇ ಇಂಗ್ಲೆಂಡ್ ಆಟಗಾರರು ಮತ್ತೆ ಹಿನ್ನಡೆಗೆ ಸಿಲುಕಿದರು.
ಜಯ ತಾರದ ರೂನಿ ಮೊದಲ ಗೋಲು
ಸಾವೊ ಪೊಲೊ:
ವಿಶ್ವಕಪ್‌ನಲ್ಲಿ ಗೋಲು ಗಳಿಸಿಲ್ಲ ಎಂಬ ಹಲವಾರು ವರ್ಷಗಳ ಟೀಕೆಯನ್ನು ಶುಕ್ರವಾರ ಉರುಗ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಅಂತ್ಯಗೊಳಿಸಿದ ಇಂಗ್ಲೆಂಡ್ ಸ್ಟ್ರೈಕರ್ ವೇಯ್ನ್ ರೂನಿ ಆ ಕ್ಷಣವನ್ನು ಹುಚ್ಚರಂತೆ ಸಂಭ್ರಮಿಸಿದ್ದರು. ಆದರೆ, ಪಂದ್ಯದ ಅಂತ್ಯದಲ್ಲಿ ಹತಾಸೆಯೊಂದಿಗೆ ತಲೆತಗ್ಗಿಸಿಕೊಂಡು ಕ್ರೀಡಾಂಗಣದಿಂದ ಹೊರಹೋಗಬೇಕಾಯಿತು.
ಪಂದ್ಯದ 75ನೇ ನಿಮಿಷದಲ್ಲಿ ರೂನಿ ಗೋಲು ದಾಖಲಿಸುವ ಮೂಲಕ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಆದರೆ, ನಂತರ ಉರುಗ್ವೆಯ ಲೂಯಿಸ್ ಸೂರೆಜ್ ತಮ್ಮ ಎರಡನೇ ಗೋಲು ದಾಖಲಿಸುವ ಮೂಲಕ ಇಂಗ್ಲೆಂಡ್ ಪಂದ್ಯಾವಳಿಯಿಂದ ಹೊರಬೀಳುವಂತೆ ಮಾಡಿದ್ದರು. ದ್ವಿತಿಯಾರ್ಧ ಪಂದ್ಯದ ಆರಂಭದಲ್ಲಿ ರೂನಿ ಗೋಲು ಗಳಿಸುವ ಮತ್ತೊಂದು ಅವಕಾಶವನ್ನು ಪಡೆದಿದ್ದರು. ಆದರೆ, ಉರುಗ್ವೆ ಗೋಲ್‌ಕೀಪರ್ ಫೆರ್ನಾಂಡೋ ಮುಸ್ಲೇರಾ ಅವರು ಅದಕ್ಕೆ ಅವಕಾಶ ನೀಡಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.