ಚೊಚ್ಚಲ ಬಾರಿ ಅಲ್ಜೀರಿಯಾ ನಾಕೌಟ್ಗೆ

ಕ್ಯುರಿಟಿಬಾ: ಒಂದು ಹಂತದಲ್ಲಿ ಸೋಲಿನ ಛಾಯೆ ಆವರಿಸಿ ವಿಶ್ವಕಪ್ ಫುಟ್ಬಾಲ್ ಟೂರ್ನಿಯಿಂದ ಹೊರಗುಳಿಯುವ ಆತಂಕದಲ್ಲಿ ಬಿದ್ದಿದ್ದರೂ ಸಹ ಕೆಚ್ಚೆದೆಯಿಂದ ಹೋರಾಟ ನಡೆಸಿದ ಅಲ್ಜೀರಿಯಾ ಆಟಗಾರರು ಕೊನೆಗೂ ಎಲ್ಲಾ ಅಡ್ಡಿ-ಆತಂಕಗಳನ್ನು ನಿವಾರಿಸಿಕೊಂಡು ನಾಕೌಟ್ ಸುತ್ತಿಗೆ ಲಗ್ಗೆ ಇಡುವ ಮೂಲಕ ಆತ್ಮವಿಶ್ವಾಸ ಇಮ್ಮಡಿಗೊಳಿಸಿಕೊಂಡಿದ್ದಾರೆ.
ಎರೆನಾ ಡ ಬೇಕ್ಸಾಡಾ ಕ್ರೀಡಾಂಗಣದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದ 'ಎಚ್' ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅಲ್ಜೀರಿಯಾ ತಂಡ 1-1 ಗೋಲಿನಿಂದ ರಷ್ಯಾ ತಂಡದ ವಿರುದ್ಧ ಡ್ರಾ ಫಲಿತಾಂಶಕ್ಕೆ ತೃಪ್ತಿ ಹೊಂದಿತು. ಇದರೊಂದಿಗೆ ಅಲ್ಜೀರಿಯಾ ಆಟಗಾರರು ಒಟ್ಟು 4 ಅಂಕಗಳ ಸಂಪಾದನೆಯೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಿಕ್ವಾರ್ಟರ್ಫೈನಲ್ ತಲುಪಿದ ಸಾಧನೆ ಮಾಡಿದರು.
ಪ್ರಥಮಾರ್ಧದ 6ನೇ ನಿಮಿಷದಲ್ಲಿಯೇ ಅಲೆಕ್ಸಾಂಡರ್ ಕೊಕೊರಿನ್ ಗೋಲು ಗಳಿಸಿ ರಷ್ಯಾ ತಂಡಕ್ಕೆ 1-0 ಗೋಲಿನಿಂದ ಮಹತ್ವದ ಮುನ್ನಡೆ ತಂದುಕೊಟ್ಟರು. ವಿರಾಮದ ವೇಳೆಗೆ ಈ ಮುನ್ನಡೆ ಕಾಯ್ದುಕೊಂಡಿದ್ದ ರಷ್ಯಾ ತಂಡ ಉತ್ತರಾರ್ಧದಲ್ಲಿ ಎದುರಾಳಿ ತಂಡಕ್ಕೆ ಗೋಲುಗಳಿಸಲು ಅವಕಾಶ ಮಾಡಿಕೊಟ್ಟು ನಾಕೌಟ್ ಸುತ್ತು ತಲುಪುವ ಆಸೆ ಕೈಬಿಡಬೇಕಾಯಿತು.
ಪಂದ್ಯದ 60ನೇ ನಿಮಿಷದಲ್ಲಿ ಮುನ್ನಡೆ ಆಟಗಾರ ಇಸ್ಲಾಮ್ ಸ್ಲಿಮಾನಿ ಚೆಂಡನ್ನು ಹೆಡ್ ಮಾಡುವ ಮೂಲಕ ಗುರಿ ಸೇರಿಸುವುದರೊಂದಿಗೆ ರಷ್ಯಾ ವಿರುದ್ಧದ ಸಮರದಲ್ಲಿ ತಮ್ಮ ತಂಡಕ್ಕೆ 1-1ರಿಂದ ಸಮಗೌರವ ತಂದುಕೊಟ್ಟರು. ಫ್ರೀಕಿಕ್ನಲ್ಲಿ ಯಾಸಿನ್ ಬ್ರಾಹಿಮಿ ಎಡಗಾಲಿನಿಂದ ರಭಸವಾಗಿ ಒದ್ದ ಚೆಂಡನ್ನು ಅಲೆಕ್ಸಾಂಡರ್ ಇಸ್ಲಾಮ್ ಸ್ಲಿಮಾನಿ ಸಮರ್ಥವಾಗಿ ಹೆಡ್ ಮಾಡುವ ಮೂಲಕ ಅದನ್ನು ಬಲೆಯೊಳಕ್ಕೆ ಬಾರಿಸಿ ಪಂದ್ಯದ ರೋಚಕತೆಗೆ ಕಾರಣವಾಗುತ್ತಾರೆ. ರಷ್ಯಾ ಗೋಲ್ಕೀಪರ್ ಐಗರ್ ಅಕಿನ್ಫೀವ್ ಗೋಲಾಗುವುದನ್ನು ತಡೆಯಬಹುದಾಗಿತ್ತಾದರೂ, ಚೆಂಡಿನ ದಿಕ್ಕು ಗಮನಿಸುವಲ್ಲಿ ವಿಫಲರಾಗಿ ನಿರಾಸೆ ಅನುಭವಿಸಿದರು. ಉಳಿದ ಅರ್ಧಗಂಟೆ ಆಟದಲ್ಲಿ ಎರಡೂ ತಂಡಗಳು ಗೋಲುಗಳಿಸಲು ಸಾಕಷ್ಟು ಶ್ರಮಿಸಿದರೂ ಮತ್ತೆ ಫಲ ಕಾಣಲು ಸಾಧ್ಯವಾಗಲಿಲ್ಲ. ಒಂದು ವೇಳೆ ಈ ಪಂದ್ಯದಲ್ಲಿ ಅಲ್ಜೀರಿಯಾ ಸೋಲನುಭವಿಸಿದ್ದರೆ, ನಾಕೌಟ್ ಸುತ್ತಿನ ಆಸೆಗೆ ಸಂಚಕಾರ ತಂದುಕೊಳ್ಳಬೇಕಾಗುತ್ತಿತ್ತು. ಆದರೆ, ಅದೃಷ್ಟ ಅಲ್ಜೀರಿಯಾ ಪರವಾಗಿದ್ದ ಕಾರಣ ಅಂತಹ ಯಾವುದೇ ಆಪತ್ತಿಗೆ ಗುರಿಯಾಗದೇ ಮುನ್ನಡೆಯ ಭಾಗ್ಯ ತನ್ನದಾಗಿಸಿಕೊಂಡಿತು. ಅಲ್ಜೀರಿಯಾ ತಂಡದ ಕೋಚ್ ವಾಹಿದ್ ಹಾಲಿಹೋಜಿಕ್, ರಷ್ಯಾ ಆಟಗಾರರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿ ಆಟಗಾರರಲ್ಲಿ ಬದಲಾವಣೆ ತರುವ ಮೂಲಕ ನಿರೀಕ್ಷಿತ ಯಶಸ್ಸನ್ನೇ ಕಂಡುಕೊಳ್ಳುತ್ತಾರೆ. ಹಾಗೆಯೇ ಮತ್ತೊಂದೆಡೆ, ರಷ್ಯಾ ಕೋಚ್ ಫಾಬಿಯೊ ಕೆಪೆಲೊ ಸಹ ತಮ್ಮ ತಂಡದಲ್ಲಿ ಅನೇಕ ಬದಲಾವಣೆಗಳನ್ನು ಮಾಡುತ್ತಾರೆ. ಆದರೂ, ಆರಂಭದಲ್ಲಿ ದೊರೆತ ಮುನ್ನಡೆಯ ಲಾಭ ಪಡೆಯುವಲ್ಲಿ ವಿಫಲವಾಗುವುದರೊಂದಿಗೆ ರಷ್ಯಾ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಯಿತು.
1986ರಿಂದ ಈವರೆಗೆ ರಷ್ಯನ್ನರು ವಿಶ್ವಕಪ್ನಲ್ಲಿ ಎರಡನೇ ಸುತ್ತಿಗೆ ಅರ್ಹತೆ ಪಡೆದುಕೊಂಡಿಲ್ಲ. ಈ ಹಿಂದೆ ಅಲ್ಜೀರಿಯಾ 1982ರಲ್ಲಿ ಎರಡನೇ ಹಂತಕ್ಕೆ ಪ್ರವೇಶಿಸುವ ಅವಕಾಶ ಹೊಂದಿತ್ತು. ಆದರೆ, ಪಶ್ಚಿಮ ಜರ್ಮನಿ ಮತ್ತು ಆಸ್ಟ್ರೀಯಾ ತಂಡಗಳು ಅದರ ಆಸೆಗೆ ತಣ್ಣೀರೆರಚಿದವು. ಈ ಬಾರಿ ಮಾತ್ರ ಅಲ್ಜೀರಿಯಾಕ್ಕೆ ಅದೃಷ್ಟ ಒದಗಿಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


