ಗ್ರೀಸ್ಗೆ ಜಾರುವುದೇ ಕೋಸ್ಟ ರಿಕಾ?

ರೆಸಿಫೆ: ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವ ಕೋಸ್ಟ ರಿಕಾ ಹಾಗೂ ಗ್ರೀಸ್ ತಂಡಗಳು ಫಿಫಾ ವಿಶ್ವಕಪ್ನ ನಾಕೌಟ್ ಸುತ್ತಿನಲ್ಲಿ ಕಾದಾಟ ನಡೆಸುತ್ತಿದ್ದು, ಉಭಯ ತಂಡಗಳು ಗೆಲವಿನ ಹುಟುಕಾಟದಲ್ಲಿವೆ.
ಇಲ್ಲಿನ ಅರೆನಾ ಪೆರ್ನೊಂಬುಕೊ ಕ್ರೀಡಾಂಗಣದಲ್ಲಿ ಸೋಮವಾರ ನಸುಕಿನ ಸಮಯದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲವು ಸಾಧಿಸುವ ತಂಡ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯಲಿವೆ. ಹಾಗಾಗಿ ಉಭಯ ತಂಡಗಳು ಗೆಲವಿನ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ.
ಗ್ರೀಸ್ ತಂಡ ಕಳೆದ ಕೆಲವು ವರ್ಷಗಳಲ್ಲಿ ಮಣಿಸಲು ಕಠಿಣವಾದ ತಂಡ ಎಂಬ ಖ್ಯಾತಿಯನ್ನು ಗಳಿಸಿದೆ ಅದರಲ್ಲೂ ಆರಂಭದಲ್ಲಿ ತಂಡ ಮುನ್ನಡೆ ಸಾಧಿಸಿದರೆ, ನಂತರ ತಂಡವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಗ್ರೀಸ್ ಪ್ರದರ್ಶನ ನೀಡಿದೆ. ಗ್ರೀಸ್ ತಂಡ ಆಟದ ಶೈಲಿ ಇತರೆ ತಂಡಗಳ ಆಟದ ಶೈಲಿಗಿಂತ ವಿಭಿನ್ನವಾಗಿದೆ. ಆರಂಭದಲ್ಲಿ ಆಕ್ರಮಣಕಾರಿ ಆಟದ ಮೂಲಕ ಮುನ್ನಡೆಯನ್ನು ಪಡೆಯಲು ಪ್ರಯತ್ನಿಸುತ್ತದೆ. ನಂತರ ಪಂದ್ಯದಲ್ಲಿ ಅಚ್ಚುಕಟ್ಟಾದ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸಿ ಎದುರಾಳಿಗೆ ಸವಾಲು ನೀಡುತ್ತಿದೆ.
ಗ್ರೀಸ್ ತಂಡ ಈ ರಣತಂತ್ರವನ್ನು ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಎದುರಾಳಿ ಕೋಸ್ಟ ರಿಕಾ ಮೊದಲು ಆರಂಭಿಕ ಮುನ್ನಡೆಯನ್ನು ಪಡೆಯಲು ಎದುರು ನೋಡುತ್ತಿದೆ. ಗ್ರೀಸ್ ತಂಡ ಸಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ನಾಕೌಟ್ ಸುತ್ತಿಗೆ ಪ್ರವೇಶ ಪಡೆದರೆ, ಕೋಸ್ಟ ರಿಕಾ ಸೋಲಿನ ಮುಖ ನೋಡದೇ ಅಜೇಯವಾಗಿ ಡಿ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ನಾಕೌಟ್ ಪ್ರವೇಶಿಸಿದೆ.
ಇನ್ನು ಕೋಸ್ಟ ರಿಕಾ ತಂಡದ ಪ್ರದರ್ಶನ ಈ ಬಾರಿ ಎಲ್ಲರ ಹುಬ್ಬೇರುವಂತೆ ಮಾಡಿದೆ ಕಾರಣ, ತಂಡ ಗ್ರೂಪ್ ಆಫ್ ಡೆತ್ ಎಂದೇ ಕರೆಯಲ್ಪಟ್ಟ, ಡಿ ಗುಂಪಿನಲ್ಲಿ ಅಚ್ಚರಿಯ ಪ್ರದರ್ಶನ ನೀಡಿದೆ. ಪ್ರಬಲ ತಂಡಗಳಾದ ಉರುಗ್ವೆ, ಇಟಲಿ, ಇಂಗ್ಲೆಂಡ್ ತಂಡಗಳ ವಿರುದ್ಧದ ಪ್ರದರ್ಶನ ಎಲ್ಲರ ಮನಸೂರೆಗೊಳಿಸಿದೆ. ಇಟಲಿ ಹಾಗೂ ಇಂಗ್ಲೆಂಡ್ ತಂಡಕ್ಕೆ ಮನೆಯ ಹಾದಿ ತೋರಿದ ಕೋಸ್ಟ ರಿಕಾ ಅಗ್ರಸ್ಥಾನ ಪಡೆದಿದ್ದು, ಎಲ್ಲರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಹಾಗಾಗಿ ಕೋಸ್ಟ ರಿಕಾ ತನ್ನ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿಕೊಂಡು, ಗ್ರೀಸ್ಗೆ ಸವಾಲು ನೀಡಲು ಸಜ್ಜಾಗಿದೆ. ಎರಡೂ ತಂಡಗಳು ಅಚ್ಚರಿ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವುದರಿಂದ ಪಂದ್ಯದ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ ಎನ್ನಬಹುದು. ಈ ಉಭಯ ತಂಡಗಳು ಪಂದ್ಯಾವಳಿಯ ಆರಂಭದಲ್ಲಿ ಗೆಲ್ಲುವ ಫೇವರಿಟ್ ತಂಡ ಎಂದು ಪರಿಗಣಿಸಿರಲಿಲ್ಲ. ಆದರೆ, ಗುಂಪು ಹಂತದಲ್ಲಿ ಕೋಸ್ಟ ರಿಕಾ ತಂಡದ ಪ್ರದರ್ಶನ ಇತರೆ ತಂಡಗಳಿಗೆ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಕೋಸ್ಟ ರಿಕಾ ಇದೇ ಪ್ರದರ್ಶನ ಮುಂದುವರಿಸಿದ್ದೇ ಆದಲ್ಲಿ ತಂಡ ಪ್ರಶಸ್ತಿಯ ಹಾದಿಯಲ್ಲಿ ಪ್ರಮುಖ ತಂಡಗಳಿಗೆ ಸೆಡ್ಡು ಹೊಡೆಯುವುದಂತೂ ಖಚಿತ.
ಗುಂಪಿನ ನಡೆ
ಕೋಸ್ಟ ರಿಕಾ -28ನೇ ರ್ಯಾಂಕ್
= ಉರುಗ್ವೆ ವಿರುದ್ಧ 3-1 ಗೋಲುಗಳಿಂದ ಜಯ.
= ಇಟಲಿ ವಿರುದ್ಧ 1-0 ಗೋಲುಗಳಿಂದ ಜಯ.
= ಇಂಗ್ಲೆಂಡ್ ವಿರುದ್ಧ 0-0 ಅಂತರದಲ್ಲಿ ಡ್ರಾ.
ಗ್ರೀಸ್ -12ನೇ ರ್ಯಾಂಕ್
= ಕೊಲಂಬಿಯಾ ವಿರುದ್ಧ 0-3 ಅಂತರದಲ್ಲಿ ಸೋಲು.
= ಜಪಾನ್ ವಿರುದ್ಧ 0-0 ಅಂತರದಲ್ಲಿ ಡ್ರಾ.
= ಐವರಿ ಕೋಸ್ಟ ವಿರುದ್ಧ 2-1 ಗೋಲುಗಳಿಂದ ಜಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


