ಡಚ್ ಓಡಿಸಲು ಮೆಕ್ಸಿಕೊ ಸ್ಕೆಚ್

ಫೋರ್ಟ್‌ಲೆಜಾ: ಕಳೆದ ಬಾರಿ ಫೈನಲ್ ತಲುಪಿದರೂ ಅಂತಿಮ ಕ್ಷಣ ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಗೆ ಒಳಗಾಗಿ ವಿಶ್ವಕಪ್ ಎತ್ತಿ ಹಿಡಿಯುವ ಅವಕಾಶದಿಂದ ವಂಚಿತವಾಗಿದ್ದ ಹಾಲೆಂಡ್ ಆಟಗಾರರು ಈ ಬಾರಿ ಕೂಡ ದಿಟ್ಟ ನಡೆ ಆರಂಭಿಸಿದ್ದಾರೆ.
ಹಾಗೆಯೇ, ಇನ್ನೊಂದೆಡೆ ಅಚ್ಚರಿಯ ಪ್ರದರ್ಶನ ನೀಡುತ್ತ ತಾನೂ ಒಂದೊಮ್ಮೆ ಟ್ರೋಫಿ ಎತ್ತಿ ಹಿಡಿಯಲೇಬೇಕೆಂದು ಛಲದಿಂದ ಮುನ್ನುಗ್ಗುತ್ತಿರುವ ಮೆಕ್ಸಿಕೊ ಆಟಗಾರರ ಆತ್ಮವಿಶ್ವಾಸ ಕೂಡ ಅತಿಯಾಗಿದೆ.
ಹೀಗೆ, ಆತ್ಮವಿಶ್ವಾಸದಿಂದ ಪುಟಿಯುತ್ತಿರುವ ಹಾಲೆಂಡ್ ಮತ್ತು ಮೆಕ್ಸಿಕೊ ತಂಡಗಳ ಆಟಗಾರರು ಭಾನುವಾರ ರಾತ್ರಿ ಎಸ್ಟಾಡಿಯೊ ಕಾಸ್ಟಲೆಲಾವೊ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಮೂರನೇ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು, ಅಭಿಮಾನಿಗಳು ರೋಚಕ ಪೈಪೋಟಿಯ ನಿರೀಕ್ಷೆಯಲ್ಲಿದ್ದಾರೆ.
'ಎ' ಗುಂಪಿನಿಂದ ಅಗ್ರತಂಡವಾಗಿ ಹಾಲೆಂಡ್ 16ರ ಘಟ್ಟ ತಲುಪಿದೆ. ಗುಂಪಿನಲ್ಲಿ ತಾನಾಡಿದ ಎಲ್ಲ ಮೂರೂ ಪಂದ್ಯಗಳಲ್ಲಿ ಗೆದ್ದು ಅಜೇಯ ತಂಡವಾಗಿ ಮುಂದಡಿ ಇಟ್ಟಿರುವ ಹಾಲೆಂಡ್ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದು. 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಎದುರು ಸೋಲುವ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್ ಜಯಿಸುವುದರಿಂದ ಹಾಲೆಂಡ್ ವಂಚಿತವಾಗಿತ್ತು. ಆದರೆ, ಈ ಬಾರಿ ತನ್ನ ಮೊದಲ ಪಂದ್ಯದಲ್ಲಿಯೇ ಅದೇ ಸ್ಪೇನ್ ತಂಡವನ್ನು 5-1 ಗೋಲುಗಳ ಭಾರಿ ಅಂತರದಲ್ಲಿ ಬಗ್ಗುಬಡಿದಿರುವ ಹಾಲೆಂಡ್ ಆಟಗಾರರು ಈ ಬಾರಿ ಪ್ರಶಸ್ತಿ ಗೆದ್ದರೆ ಅಚ್ಚರಿ ಪಡಬೇಕಿಲ್ಲ. ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳಿಂದ 10 ಗೋಲುಗಳನ್ನು ಸಂಪಾದಿಸಿರುವ ಹಾಲೆಂಡ್ ಪಡೆ ಅದ್ಭುತ ಫಾರ್ಮ್‌ನಲ್ಲಿದೆ. ಕೋಚ್ ಲೂಯಿಸ್ ವ್ಯಾನ್ ಗಾಲ್ ಗರಡಿಯಲ್ಲಿ ಪಳಗಿರುವ ಆಟಗಾರರು ಮತ್ತೊಂದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಿಂದ ಬೀಗುತ್ತಿದ್ದಾರೆ.
ಮುನ್ಪಡೆ ಆಟಗಾರರಾದ ನಾಯಕ ರಾಬಿನ್ ವ್ಯಾನ್ ಪರ್ಸಿ, ಡರ್ಕ್ ಕೈಟ್ ಹಾಗೂ ಸಂಪರ್ಕ ಆಟಗಾರರಾದ ವೆಸ್ಲೆ ಸ್ನೈಡರ್, ಆರ್ಜೆನ್ ರಾಬೆನ್ ಮತ್ತು ಲೆರಾಯ್ ಫೆರ್ ಅವರು ಹಾಲೆಂಡ್ ತಂಡದ ದೊಡ್ಡ ಶಕ್ತಿಯಾಗಿದ್ದಾರೆ.
ಹಾಗೆಂದು ಮೆಕ್ಸಿಕೊ ಪಡೆಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಸತತ 11 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೋಲು ಗಳಿಸುವುದರಿಂದ ವಂಚಿತರಾಗಿದ್ದ ಮುನ್ಪಡೆ ಆಟಗಾರ ಜಾವಿಯರ್ ಹೆರ್ನಾಂಡೆಜ್ ಕಳೆದ ಪಂದ್ಯದಲ್ಲಿ ಆ ಕೊರತೆ ತುಂಬಿಕೊಂಡಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರ ಹೆರ್ನಾಂಡೆಜ್ ಅವರ ಮೇಲೆ ಮೆಕ್ಸಿಕೊ ತಂಡದ ಭಾರವಿದೆ. ಅವರು ಪರಿಣಾಮಕಾರಿ ಹೋರಾಟಕ್ಕೆ ಅಣಿಯಾದರೆ, ಹಾಲೆಂಡ್ ಮುಂದೆ ಕಠಿಣ ಸವಾಲು ನಿಲ್ಲುವುದರಲ್ಲಿ ಅನುಮಾನವಿಲ್ಲ. ಅಲ್ಲದೆ, ಕೋಚ್ ಮಿಗ್ಯುಲ್ ಹೆರೇರಾ ಅವರು ಹಾಲೆಂಡ್ ಪಡೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಮೆಕ್ಸಿಕೊ ಆಟಗಾರರನ್ನು ಉತ್ತಮ ರೀತಿಯಲ್ಲಿ ಸಜ್ಜುಗೊಳಿಸಿರುವುದರಲ್ಲಿ ಸಂದೇಹವೇ ಇಲ್ಲ.
ಹೆರ್ನಾಂಡೆಜ್ ಹೊರತಾಗಿ ರಕ್ಷಣಾ ಆಟಗಾರರಾದ ನಾಯಕ ರಾಫೆಲ್ ಮಾರ್ಕ್ಯುಜ್, ಫ್ರಾನ್ಸಿಸ್ಕೊ ಜಾವಿಯರ್ ರೋಡ್ರಿಗ್, ಮಿಗ್ಯುಲ್ ಲಯೂನ್ ಹಾಗೂ ಜಿಯೊವಾನಿ ಡಾಸ್ ಸ್ಯಾಂಟೋಸ್ ಮೆಕ್ಸಿಕೊದ ಭರವಸೆಯಾಗಿದ್ದಾರೆ.
ಹಾಲೆಂಡ್-ಮೆಕ್ಸಿಕೊ
ಸಮಯ-ರಾತ್ರಿ 9.30ಕ್ಕೆ
15 ರ್ಯಾಂಕ್ 20
ಮುಖಾಮುಖಿ
6 ಪಂದ್ಯ 6
3 ಜಯ 2
1 ಡ್ರಾ 1
2 ಸೋಲು 3
11 ಗೋಲು 11
ಒಟ್ಟು ಗೋಲು 22
ಗುಂಪಿನ ನಡೆ
ಹಾಲೆಂಡ್
= ಸ್ಪೇನ್ ವಿರುದ್ಧ 5-1ರಿಂದ ಜಯ
= ಆಸ್ಟ್ರೇಲಿಯಾ ವಿರುದ್ಧ 3-2ರಿಂದ ಜಯ
ಚಿಲಿ ವಿರುದ್ಧ 2-0ಯಿಂದ ಜಯ
ಮೆಕ್ಸಿಕೊ
= ಕೆಮರೂನ್ ವಿರುದ್ಧ 1-0ಯಿಂದ ಜಯ
= ಬ್ರೆಜಿಲ್ ವಿರುದ್ಧ 0-0ದಿಂದ ಡ್ರಾ
= ಕ್ರೊವೇಷಿಯಾ ವಿರುದ್ಧ 3-1ರಿಂದ ಜಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


