ಗೋಳಿಬಜೆ: ಕರಾವಳಿಯ ಸಾಂಪ್ರದಾಯಿಕ ತಿಂಡಿಯ ಸವಿದು ನೋಡಿ

ಅಂದು ಬೆಳಿಗ್ಗೆಯೇ  ಭಾಗ್ಯತ್ತೆ ಫೋನಾಯಿಸಿದ್ದರು. ನಾಳೆ ನಮ್ಮಲ್ಲಿಗೆ ಮಧ್ಯಾಹ್ನ ಊಟಕ್ಕೆ ಬರಲೇಬೇಕು ಎಂದು ಅವರು ಕರೆದರು. ಒಂದೇ ಮಾತು ನನ್ನದು ಸಮ್ಮಾನವಾ ಅಂತ? ಹೌದು  ನಿನಗೇನಿಷ್ಟ ಅದನ್ನೇ ಮಾಡುತ್ತೇನೆ. ಗೋಳಿಬಜೆ ಬೇಕಿತ್ತು, ನೀವು ಮಾಡಿದ್ದು  ನನಗೆ ತುಂಬಾ ಇಷ್ಟ. ಓಹ್ ಅಷ್ಟೇಯಾ? ನೀನು ಕೇಳುವುದು ಹೆಚ್ಚಾ ನಾನು ಮಾಡುವುದು ಹೆಚ್ಚಾ?
ಗೋಳಿಬಜೆ
ಗೋಳಿಬಜೆ

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

knashwini@gmail.com

ಅಂದು ಬೆಳಿಗ್ಗೆಯೇ  ಭಾಗ್ಯತ್ತೆ ಫೋನಾಯಿಸಿದ್ದರು. ನಾಳೆ ನಮ್ಮಲ್ಲಿಗೆ ಮಧ್ಯಾಹ್ನ ಊಟಕ್ಕೆ ಬರಲೇಬೇಕು ಎಂದು ಅವರು ಕರೆದರು. ಒಂದೇ ಮಾತು ನನ್ನದು ಸಮ್ಮಾನವಾ ಅಂತ? ಹೌದು  ನಿನಗೇನಿಷ್ಟ ಅದನ್ನೇ ಮಾಡುತ್ತೇನೆ. ಗೋಳಿಬಜೆ ಬೇಕಿತ್ತು, ನೀವು ಮಾಡಿದ್ದು  ನನಗೆ ತುಂಬಾ ಇಷ್ಟ. ಓಹ್ ಅಷ್ಟೇಯಾ? ನೀನು ಕೇಳುವುದು ಹೆಚ್ಚಾ ನಾನು ಮಾಡುವುದು ಹೆಚ್ಚಾ?

ಹೇಯ್ ನಾನೇನು ತಿನ್ ಪಾಂಡಿಯಲ್ಲ. ಆವಾಗ ನಾನು ಏಳು ತಿಂಗಳ  ಬಸುರಿಯಾಗಿದ್ದೆ.  ಹಾಗಾಗಿ ಭಾಗ್ಯತ್ತೆ ನನ್ನನ್ನು  ಊಟಕ್ಕೆ  ಕರೆದಿದ್ದರು.  ಅವರು ಮಾಡುವ  ಹಲವು  ತಿಂಡಿಗಳಲ್ಲಿ ಗೋಳಿಬಜೆ ಬೆಸ್ಟ್ ಆಗಿರುತ್ತದೆ.  

ಸಣ್ಣ ಮಕ್ಕಳಿರುವಾಗ ರಜೆಯಲ್ಲಿ ಅವರು ಮಾಡಿದ ಗೋಳಿಬಜೆ ತಿಂದ ನೆನಪಿಗೆ ನಾನು ತಟ್ಟನೆ ಕೇಳಿಬಿಟ್ಟೆ.  ನಾವು ಹೋಗುವಾಗಲೇ ಅತ್ತೆ ಗೋಳಿಬಜೆಯ ಹಿಟ್ಟು ಕಲಸಿ ಇಟ್ಟಿದ್ದರು.

ಸಾಮಾನ್ಯವಾಗಿ ಮೈದಾ ಹಿಟ್ಟು, ಕಡ್ಲೆ ಹಿಟ್ಟು ಬಳಸಿ  ಗೋಳಿಬಜೆ ಮಾಡುವುದು ರೂಢಿ.  ಆದರೆ ಭಾಗ್ಯತ್ತೆ  ಯಾವಾಗಲೂ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಅವರು ಮೈದಾ ಆರೋಗ್ಯಕ್ಕೆ  ಹಾನಿಕಾರಕ ಎಂಬುದನ್ನು ಬಲವಾಗಿ ನಂಬಿದವರು. ಗೋಧಿಹಿಟ್ಟು ಬಳಸಿಯೇ ಗೋಳಿಬಜೆ  ಹಿಟ್ಟು ತಯಾರಿಸುತ್ತಾರೆ.

ಗೋಧಿ ಹಿಟ್ಟು , ಕಡ್ಲೆ ಹಿಟ್ಟು ಸಮಪ್ರಮಾಣದಲ್ಲಿ ತೆಗೆದುಕೊಂಡು  ಚೆನ್ನಾಗಿ  ಜರಡಿ ಹಿಡಿಯಬೇಕು.  ಒಂದು ಕಪ್ ಮೊಸರಿಗೆ, ಒಂದು ಚಮಚ  ಜೀರಿಗೆ,  ಉಪ್ಪು, ಸಕ್ಕರೆ  ನಾಲ್ಕು ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅದಕ್ಕೆ ಶುಂಠಿ ತುರಿದು ಒಂದು ಚಮಚದಷ್ಟು ಹಾಕಬೇಕು.   ಮೊಸರಿನ ಆ ಮಿಶ್ರಣಕ್ಕೆ  ಕಡ್ಲೆ ಹುಡಿ ಹಾಗೂ ಗೋಧಿ ಹುಡಿಯನ್ನು ಸೇರಿಸಿ ಚೆನ್ನಾಗಿ  ಕಲಸಬೇಕು. ಇಡ್ಲಿ ಹಿಟ್ಟಿಗಿಂತ ಗಟ್ಟಿ ಇರಬೇಕು. ಗೋಳಿಬಜೆ ಕರಿಯುವ ಐದು ಗಂಟೆ ಮೊದಲೇ ಹಿಟ್ಟು ಕಲಸಿ ಇಡಬೇಕು.

ಕೊನೆಯ ಹಂತದಲ್ಲಿ ಹಿಟ್ಟಿಗೆ ಸೋಡಹುಡಿಯನ್ನು ಸ್ವಲ್ಪ ಮಜ್ಜಿಗೆಯಲ್ಲಿ ಮಿಶ್ರ ಮಾಡಿ ಸೇರಿಸಬೇಕು. ಬೇವಿನ ಸೊಪ್ಪು ಸಣ್ಣಗೆ ಕತ್ತರಿಸಿದ್ದು, ಹಸಿಮೆಣಸು  ಕೊಬ್ಬರಿ ತುಂಡುಗಳನ್ನು ರುಚಿಗೆ ಬಳಸಬಹುದು. ಎಣ್ಣೆಗೆ ಚಮಚದಲ್ಲಿ ಸ್ವಲ್ಪ- ಸ್ವಲ್ಪವೇ  ಹಾಕಿದಾಗ ದುಂಡಗಿನ ಗೋಳಿಬಜೆ ತಯಾರು. ಇದರ ಘಮಘಮ ಪರಿಮಳ ಎಲ್ಲರನ್ನೂ ತನ್ನತ್ತ ಸೆಳೆಯದೆ ಇರದು. ಬಿಸಿ ಬಿಸಿ ಕಾಫಿ ಅಥವಾ ಚಹಾದೊಂದಿಗೆ ಒಂದು ಹತ್ತು  ಗೋಳಿಬಜೆ ಸರಾಗವಾಗಿ ತಿನ್ನಬಹುದು. ಕಾಯಿ ಚಟ್ನಿ ಇದ್ದರಂತೂ ಪ್ಲೇಟು ಖಾಲಿಯಾದುದು ಗೊತ್ತೇ ಆಗದು.

ನಮ್ಮ ಕಡೆ  ತಮಾಷೆಯ ಒಂದು ಮಾತಿದೆ. ಸಂಜೆಯ ಒಂದು ಕಪ್  ಚಹಾಕ್ಕೆ  ಲೈಟಾಗಿರುವ ಗೋಳಿಬಜೆ  ನಾಲ್ಕು ತಿಂದರೆ ಧಾರಾಳವಾಯಿತು!  ಬನ್ಸ್ ಆದರೂ ನಡೆಯುತ್ತೆ ಆದರೆ ಗೋಳಿಬಜೆ ‌ಸೂಪರ್ . 

ಸಂತೆ ಜಾತ್ರೆಗಳಲ್ಲಿ ಅಂಗಡಿ ಮುಂಗಟ್ಟುಗಳತ್ತ ಸವಾರಿ ಹೊರಟರೆ ತಟ್ಟಿ ಹೋಟೆಲ್ ಗಳಿಂದ ಬರುವ ಗೋಳಿಬಜೆ ಪರಿಮಳವಿದೆಯಲ್ಲಾ ಸೀದಾ ಅಲ್ಲಿನ  ಟೇಬಲ್ ಬಳಿ ಕೊಂಡೊಯ್ಯದೆ ಬಿಡದು. ಅಲ್ಲಿನ ಹರಕು ಮುರುಕು ಚೇರು,  ಕಾಲಿನ ಅಡಿಗೆ ಹಂವಿನ ತುಂಡು ಇಟ್ಟು ಬ್ಯಾಲೆನ್ಸ್ ಮಾಡಿ ಇಟ್ಟ ಟೇಬಲ್ ಗಳಾಗಲಿ ಯಾವುದೂ  ಲೆಕ್ಕಕ್ಕೆ ಬರುವುದಿಲ್ಲ.    ಘಮಘಮ ಗೋಳಿಬಜೆಯೊಂದೇ ಕಣ್ಣಿಗೆ ಕಾಣುವುದು.

ಇತ್ತೀಚಿನ ದಿನಗಳಲ್ಲಿ ನಮ್ಮ ಕರಾವಳಿಯ ಸಾಂಪ್ರದಾಯಿಕ  ತಿಂಡಿಯಾದ ಗೋಳಿಬಜೆ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಪಡೆದಿದೆ. ಭಟ್ಟ್ ಎಂಡ್ ಭಟ್ಟ್ ನ ಸುದರ್ಶನ್ ಭಟ್ಟ್, ಹೆಬ್ಬಾರ್ಸ್ ಕಿಚನ್, ಬಿಕಾ ಶೆಟ್ಟಿ ಮೊದಲಾದವರು ತಮ್ಮ ಯೂಟ್ಯೂಬ್ ಚಾನಲ್ ಗಳಲ್ಲಿ ಗೋಳಿಬಜೆ ಮಾಡುವ ವಿಧಾನಗಳನ್ನು ಹಾಕುವುದರೊಂದಿಗೆ ಹೋಟೆಲ್ ತಿಂಡಿಯನ್ನು ನಮ್ಮ ಮನೆಗಳಲ್ಲಿ ಅಷ್ಟೇ ರುಚಿಯಾಗಿ ಮಾಡುವುದನ್ನು ಸರಳವಾಗಿ ತೋರಿಸುತ್ತಾರೆ. ಅವರು ಮಾಡುವ ಕ್ರಮಗಳು ಜನರಿಗೆ ಎಷ್ಟು ಇಷ್ಟವಾಗುತ್ತಿದೆಯೆಂದರೆ ಅಡುಗೆ ಕೋಣೆಯಿಂದ ಹೊರಗೆ ಓಡುತ್ತಿದ್ದವರೆಲ್ಲಾ ಒಂದು ಕೈ ನೋಡೇ ಬಿಡೋಣವೆಂಬಂತಾಗಿದೆ.

ಗೋಳಿಬಜೆ ನೀವೂ ಮಾಡಿ ನೋಡಿ , ದಕ್ಷಿಣ ಕನ್ನಡದ ಟಿಪಿಕಲ್ ಗೋಳಿಬಜೆ ಇಷ್ಟವಾಗದೆ ಇರದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com