

ಪೇಣಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಸಿಹಿತಿಂಡಿ. ತೆಳುವಾದ ಪದರಗಳಿಂದ ತಯಾರಾಗುವ ಈ ಪೇಣಿ ಬಾಯಲ್ಲಿ ಇಟ್ಟರೆ ಕರಗುವಷ್ಟು ಮೃದುವಾಗಿಯೂ, ಗರಿಗರಿಯಾಗಿಯೂ ಇರುತ್ತದೆ. ಹಬ್ಬ, ಮದುವೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಇದನ್ನು ಸವಿಯಬಹುದು.
ಬೇಕಾಗುವ ಪದಾರ್ಥಗಳು...
ಮೈದಾ – 2 ಬಟ್ಟಲು
ಕಾರ್ನ್ ಫ್ಲೋರ್- ಸ್ವಲ್ಪ
ತುಪ್ಪ – ಅರ್ಧ ಬಟ್ಟಲು
ಎಣ್ಣೆ- ಅರ್ಧ ಬಟ್ಟಲು
ಉಪ್ಪು – ಚಿಟಿಕೆ
ನೀರು – ಅಗತ್ಯವಿರುವಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ...
ಪಾತ್ರೆಯಲ್ಲಿ ಮೈದಾ, ಚಿಟಿಕೆ ಉಪ್ಪು ಮತ್ತು ಎರಡು ಚಮಚ ತುಪ್ಪ ಹಾಕಿ ಚೆನ್ನಾಗಿ ಮೃದುವಾಗಿ ಹಿಟ್ಟನ್ನು ಕಲಸಿಟ್ಟುಕೊಳ್ಳಿ. 10 ನಿಮಿಷದ ನಂತರ ದೊಡ್ಡ-ದೊಡ್ಡೆ ಉಂಡೆಗಳಾಗಿ ಮಾಡಿಟ್ಟುಕೊಳ್ಳಿ.
ಬಳಿಕ ಅಗಲವಾದ ತಟ್ಟೆಗೆ ತುಪ್ಪ, ಎಣ್ಣೆ ಹಾಕಿ ಮಿಶ್ರಣ ಮಾಡಿ. ನಂತರ ಕಾರ್ನ್ ಫ್ಲೋರ್ ಹಾಕಿ ಮಿಶ್ರಣ ಮಾಡಿ.
ಮೈದಾ ಹಿಟ್ಟಿನ ಉಂಡೆಯನ್ನು ಮಧ್ಯೆ ಹಳ್ಳ ಮಾಡಿ, ಅಗಲ ಮಾಡಿ ಎಣ್ಣೆ ಹಾಗೂ ತುಪ್ಪದಲ್ಲಿ ಇಟ್ಟು 5-10 ನಿಮಿಷ ನೆನೆಯಲು ಬಿಡಿ.
ನಂತರ ಇದನ್ನು ಸ್ಪೈರಲ್ ರೀತಿ ಮಡಚಿ 5-10 ನಿಮಿಷ ನೆನೆಯಲು ಬಿಡಿ, ಈ ರೀತಿ 18 ಬಾರಿ ಮಾಡಿ. ಕೊನೆಯಲ್ಲಿ ಇದು ಲೇಯರ್, ಲೇಯರ್ ರೀತಿ ಸಿದ್ಧಗೊಳ್ಳುತ್ತದೆ.
ಇದೀಗ ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ ಕಾಯಿಸಿ, ಹಿಟ್ಟನ್ನು ನಿಧಾನವಾಗಿ ಬಿಟ್ಟು, ಫೋರ್ಕ್ ತೆಗೆದುಕೊಂಡು ನಿಧಾನವಾಗಿ ಸಣ್ಣ ಉರಿಯಲ್ಲಿ ತಿರುಗಿಸಿ, ಕೆಂಪಗಾಗುವವರೆಗೆ ಎರಡೂ ಬದಿಯಲ್ಲಿ ಗರಿ ಗರಿಯಾಗುವವರೆಗೆ ಕರಿಯಿಸಿ,
ತಣ್ಣಗಾದ ಬಳಿಕ ಮೇಲಿನಿಂದ ಪೇಣಿ ಹಾಲು ಹಾಕಿ ಸವಿಯಿರಿ.
ಟಿಪ್ಸ್...
ಹಿಟ್ಟನ್ನು ತುಂಬಾ ಮೃದುವಾಗಿ ಕಲಸಬೇಡಿ, ಸ್ವಲ್ಪ ಗಟ್ಟಿಯಾಗಿದ್ದರೆ ಪದರಗಳು ಚೆನ್ನಾಗಿ ಬರುತ್ತವೆ.
ಎಣ್ಣೆ ಹಾಗೂ ತುಪ್ಪುದಲ್ಲಿ ಎಷ್ಟು ನಿಮಿಷ ನೆನೆಸಿಡುತ್ತೀರೋ ಪೇಣಿ ಅಷ್ಟು ಚೆನ್ನಾಗಿರುತ್ತದೆ.
ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಕರಿದರೆ ಒಳಗಿನ ಪದರಗಳೂ ಚೆನ್ನಾಗಿ ಬೇಯುತ್ತವೆ.