ಸ್ನೇಹಲೋಕವೀ ಸಾಮಾಜಿಕ ಜಾಲತಾಣ

ಆಗಸ್ಟ್ ತಿಂಗಳಲ್ಲಿ ಬರುವ ಮೊದಲ ಭಾನುವಾರವನ್ನು ಫ್ರೆಂಡ್ ಶಿಪ್ ಡೇ ಎಂದು ಆಚರಿಸಲಾಗುತ್ತದೆ. ಪ್ರೇಮಿಗಳ ದಿನದಂತೆ ಈ ದಿನವೂ ಪಾಶ್ಚಾತ್ಯ ದೇಶದಿಂದ ನಮ್ಮ ದೇಶಕ್ಕೆ ಹೆಜ್ಜೆ ಇಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ವಿಶೇಷ ದಿನ...
ಸ್ನೇಹ"ಲೋಕ"ವೀ ಸಾಮಾಜಿಕ ಜಾಲತಾಣ (ಸಾಂದರ್ಭಿಕ ಚಿತ್ರ)
ಸ್ನೇಹ"ಲೋಕ"ವೀ ಸಾಮಾಜಿಕ ಜಾಲತಾಣ (ಸಾಂದರ್ಭಿಕ ಚಿತ್ರ)

ಆಗಸ್ಟ್ ತಿಂಗಳಲ್ಲಿ ಬರುವ ಮೊದಲ ಭಾನುವಾರವನ್ನು ಫ್ರೆಂಡ್ ಶಿಪ್ ಡೇ ಎಂದು ಆಚರಿಸಲಾಗುತ್ತದೆ. ಪ್ರೇಮಿಗಳ ದಿನದಂತೆ ಈ ದಿನವೂ ಪಾಶ್ಚಾತ್ಯ ದೇಶದಿಂದ ನಮ್ಮ ದೇಶಕ್ಕೆ ಹೆಜ್ಜೆ ಇಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ವಿಶೇಷ ದಿನಗಳಂತೆ ಈ ದಿನವೂ ಹಾಸುಹೊಕ್ಕಾಗಿದೆ.

ಇತ್ತೀಚಿನ ಗಳಲ್ಲಿ ಎಲ್ ಕೆಜಿ ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಫ್ರೆಂಡ್ ಶಿಪ್ ಡೇ ಆಚರಿಸುತ್ತಾರೆ. ಸ್ನೇಹಿತರ ದಿನ ಬಂತೆಂದರೆ ಸಾಕು ಆ ದಿನ ಮೊದಲು ನಮ್ಮನ್ನು ಕಂಡ ಕೂಡಲೇ ಯಾರಾದರೂ ಸ್ನೇಹಿತರು ನಮಗೆ ಹ್ಯಾಪಿ ಫ್ರೆಂಡ್ ಶಿಪ್ ಡೇ ಎಂದು ಹೇಳಿ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿದರೆ ಸಾಕು ಒಳಗೊಳಗೆ ಸಂತೋಷವಾಗುತ್ತಿರುತ್ತದೆ. ಕೆಲವರು ಸಂತೋಷವನ್ನು ಹೊರಹಾಕುತ್ತಾರೆ. ಮತ್ತೆ ಕೆಲವರು ಸಂತೋಷವನ್ನು ತಮ್ಮ ಒಳಗೇ ಪಟ್ಟುಕೊಳ್ಳತ್ತಾರೆ. ಸ್ನೇಹಿತರನ್ನು ಸಂಪಾದಿಸುವುದು ದೊಡ್ಡ ವಿಷಯವಲ್ಲ. ಆದರೆ, ನಿಜವಾದ ಸ್ನೇಹವನ್ನು ಸಂಪಾದಿಸುವುದು ನಮಗೆ ದೊಡ್ಡ ವಿಷಯವಾಗಿರುತ್ತದೆ. ಈ ವಿಚಾರದಲ್ಲಿ ಪ್ರತಿಯೊಬ್ಬರೂ ಸೂಕ್ಷ್ಮವಾಗಿ ಹೆಜ್ಜೆಯಿಡಬೇಕಿದೆ. ನಿಜವಾದ ಗೆಳಯ-ಗೆಳತಿಯರನ್ನು ಹುಡುಕುವುದು ನಿಜಕ್ಕೂ ಸವಾಲಿನ ಕೆಲಸ. ನಾವು ಕಷ್ಟದಲ್ಲಿರುವಾಗ ನೂರು ಜನ ನಮ್ಮ ವಿರುದ್ಧ ನಿಂತು ದೂಷಿಸಿದರೂ ಅವರಲ್ಲಿರುವ ಒಬ್ಬ ವ್ಯಕ್ತಿ ನಮ್ಮ ಹಿಂದೆ ನಿಂತು ಧೈರ್ಯ ಹೇಳಿ ಮತ್ತು ಎಲ್ಲರಿಗೂ ಉತ್ತರ ನೀಡುವ ವ್ಯಕ್ತಿ ನಮ್ಮ ನಿಜವಾದ ಸ್ನೇಹಿತನಾಗಿರುತ್ತಾನೆ. ಆದರೆ, ಈ ವಿಷಯ ಎಷ್ಟೋ ವೇಳೆ ನಮಗೆ ಸಮಯ ಮುಗಿದ ಮೇಲಷ್ಟೇ ನಮ್ಮ ಅರಿವಿಗೆ ಬರುತ್ತದೆ.

ಸ್ನೇಹ ಯಾವಾಗ, ಎಲ್ಲಿ ಬೇಕಾದರೂ ಮೂಡಬಹುದು... ನೋಡ ನೋಡುತ್ತಿದ್ದಂತೆಯೇ ಬೆಳೆದು ಹೆಮ್ಮರವಾಗಬಹುದು. ಆದರೆ, ಅದೇ ಸ್ನೇಹ ಎಲ್ಲಿಯವರೆಗೆ ನಮ್ಮೊಂದಿಗೆ ಬರುತ್ತದೆ ಎಂಬುದು ಪ್ರಶ್ನೆಯಾಗಿರುತ್ತದೆ. ಇಂದು ನಮ್ಮೊಂದಿಗೆ ಫ್ರೆಂಡ್ ಶಿಪ್ ಡೇ ಆಚರಿಸಿದ ವ್ಯಕ್ತಿಯೇ ನಾಳೆ ನಮ್ಮ ವಿರೋಧಿಯಾಗಬಲ್ಲ ಅಥವಾ ಮುಂದಿನ ವರ್ಷ ಇನ್ನಾರೊಂದಿಗೋ ಫ್ರೆಂಡ್ ಶಿಪ್ ಡೇ ಆಚರಿಸಬಲ್ಲ ಅಥವಾ ನಮ್ಮ ಸ್ನೇಹಿತೆ-ಸ್ನೇಹಿತನ ಜಾಗಕ್ಕೆ ಮತ್ತಿನ್ನಾರೋ ಬರಬಹುದು. ಇಂದು ಜೊತೆಯಲ್ಲಿದ್ದವರು ಮುಂದಿನ ವರ್ಷವೂ ಜೊತೆಯಲ್ಲೇ ಇರುತ್ತಾರೆ ಎಂದು ಹೇಳಲಾಗದು. ಕೆಲವೊಮ್ಮೆ ಯಾರೋ...ಯಾಕೋ...ಇಷ್ಟವಾಗ್ದಾರೆ. ಅವರೇ ನಮ್ಮ ಬೆಸ್ಟ್ ಫ್ರೆಂಡ್ ಆಗ್ತಾರೆ. ಇಂತಹ ಸ್ನೇಹ ನೋಡ ನೋಡುತ್ತಿದ್ದಂತೆಯೇ ಬೆಳೆದು ದೊಡ್ಡ ಆಲದಮರವಾಗಿ ಬಿಡುತ್ತೆ. ಅಂಥಹವರ ಜೊತೆ ನಮ್ಮ ಜೀವನದಲ್ಲಿ ನಡೆದ ಎಲ್ಲಾ ವಿಷಯವನ್ನೂ ಹೇಳಿಕೊಂಡಿರುತ್ತೇವೆ. ಆದರೆ ಆವರು ಕಾಲಕಳೆಯುತ್ತಿದ್ದಂತೆ ಕಾರಣ ಹೇಳದೆ ನಮ್ಮನ್ನು ಬಿಟ್ಟುಹೋಗುತ್ತಾರೆ. ನಾವು ಹೇಳಿಕೊಂಡ ವಿಷಯವನ್ನೇ ಮತ್ತೊಬ್ಬರ ಬಳಿ ಹೇಳಿಕೊಂಡು ವಿರೋಧಿಗಳ ರೀತಿಯಲ್ಲಿ ವರ್ತಿಸುತ್ತಾರೆ. ಆ ಸಂದರ್ಭದಲ್ಲಿ ಅದೆಷ್ಟು ನೋವು...ಅವಮಾನವನ್ನು ಅನುಭವಿಸುತ್ತೇವೆ...ಇವೆಲ್ಲಾ ಏನೇ ಇದ್ದರೂ ಶಾಲೆ, ಕಾಲೇಜುಗಳಲ್ಲಿ ಬಹಳ ನಡೆಯುತ್ತವೆ.

ಕಾಲ ಕಳೆಯುತ್ತಿದ್ದಂತೆ ಕಾಲವೇ ನಮಗೆ ನಿಜವಾದ ಗೆಳಯ-ಗೆಳತಿ ಯಾರೆಂಬುದನ್ನು ಪರಿಚಯ ಮಾಡಿಕೊಡುತ್ತದೆ. ಈಗಂತೂ ಕಾಲ ತುಂಬಾನೇ ಬದಲಾಗಿದೆ. ಜಗತ್ತನ್ನೇ ಅಂಗೈಯಲ್ಲಿ ತಂದಿಕ್ಕುವ ಅಂತರ್ಜಾಲ ಎಂಬ ಮಾಯೆ ಇಂದಿನ ಆಧುನಿಕ ಜೀವನ ಕ್ರಮದ ಒಂದು ಭಾಗವೇ ಆಗಿ ಹೋಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಂತೂ ಸಾರ್ವಜನಿಕ-ಖಾಸಗಿ ಎಂಬ ಗೆರೆಯನ್ನೂ ಮೀರಿ ಅಂತರ್ಜಾಲ ಹಲವು ರೂಪುರೇಷೆಗಳಲ್ಲಿ ಬದುಕನ್ನು ವ್ಯಾಪಿಸಿಕೊಂಡಿದೆ. ಜಗತ್ತಿನ ತುದಿಯಲ್ಲಿರುವವರನ್ನು ತುದಿಬೆರಳಿನ ಅಂತರದಲ್ಲಿ ನಿಲುಕಿಸಬಲ್ಲದು ಎನ್ನುವುದು ಅಂತರ್ಜಾಲದ ಸಂವಹನ ಶಕ್ತಿಗೆ ಉದಾಹರಣೆಯಾಗಿದೆ.

ಇಂಟರ್ನೆಟ್ ಒಂದು ಅದ್ಭುತ ಪ್ರಪಂಚ. ಇಲ್ಲಿ ನಾವು ಹುಡುಕಿದ್ದು ಸಿಗುವುದಿಲ್ಲ ಎಂಬ ಮಾತೇ ಇಲ್ಲ. ಇಲ್ಲಿ ನಮಗೆ ಬೇಕಾದ ಮಾಹಿತಿ ಪಡೆಯಲು ಏನನ್ನು ಹುಡುಕುತ್ತಿದ್ದೇವೆ ಹಾಗೂ ಯಾಕೆ ಹುಡುಕುತ್ತಿದ್ದೇವೆ ಎಂಬ ಸಾಮಾನ್ಯ ಜ್ಞಾನ ಇದ್ದರೆ ಸಾಕು. ಇಂದು ಕಾಲ ಬದಲಾಗಿದೆ. ಜೊತೆಗೆ ನಾವೂ ಬದಲಾಗಿದ್ದೇವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಗಳು ಗೆಳೆತನ ಸಂಪಾದಿಸಲು ಸಾಕಷ್ಟು ದಾರಿ ಮಾಡಿಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಲೆಟರ್ ಬರೆಯೋಕೆ ಸಮಯವಿಲ್ಲ. ಫೋನ್ ಮಾಡಿ ಮಾತನಾಡೋಣವೆಂದರೆ ಕರೆದರಗಳು ವಿಪರೀತವಾಗಿದೆ. ಹೀಗಾಗಿ ಜನರಿಗಾಗಿ ಅಂತರ್ಜಾಲ ತಾಣಗಳು ಕಡಿಮೆ ಖರ್ಚಿಗೆ ಲಾಭದಾಯಕ ಕೊಡುಗೆಗಳನ್ನು ನೀಡುತ್ತಿದೆ.

ಫೇಸ್ ಬುಕ್. ಟ್ವಟರ್, ಗೂಗಲ್ ಪ್ಲಸ್ ಗಳಲ್ಲಿ ಖಾತೆ ತೆರೆದು ಅಲ್ಲಿರುವವರಿಗೆ ರಿಕ್ವೆಸ್ಟ್ ಕೊಟ್ರೆ ಸಾಕು. ಕೆಲವೇ ಕ್ಷಣಗಳಲ್ಲಿ ನೂರಾರು ಸ್ನೇಹಿತರು ನಮ್ಮ ಸುತ್ತಮುತ್ತ ಹುಟ್ಟಿಕೊಳ್ಳುತ್ತಾರೆ. ಇಲ್ಲಿ ನಮಗೆ ಇಷ್ಟವಾದ ವಿಷಯಕ್ಕೆ ತಕ್ಕಂತಹ ಗೆಳೆಯರನ್ನು ನಾವು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು. ಉದಾಹರಣೆಗೆ ನಮಗೆ ಬರವಣಿಗೆ, ಸಂಗೀತ, ನೃತ್ಯ, ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಅಥವಾ ಇನ್ನಾವುದೇ ವಿಷಯಗಳ ಬಗ್ಗೆ ಆಸಕ್ತಿಯಿದ್ದರೆ ಆಥವಾ ಆ ಕ್ಷೇತ್ರವನ್ನೇ ನಾವು ವೃತ್ತಿಪರವಾಗಿ ತೆಗೆದುಕೊಂಡಿದ್ದರೆ ನಾವು ಅಂತಹ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ನಮ್ಮ ಸ್ನೇಹಿತರನ್ನಾಗಿಸಿಕೊಂಡು ನಮ್ಮಲ್ಲಿರುವ ಸಂವಹನ ಸಾಮರ್ಥ್ಯ ಹಾಗೂ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬಹುದು. ನಮಗೆ ಎಲ್ಲಾ ರೀತಿಯ ಸ್ನೇಹಿತರೂ ಬೇಕೆಂಬ ಭಾವನೆ ನಿಮ್ಮದಾಗಿದ್ದರೆ ಎಲ್ಲಾ ರೀತಿಯ ಗೆಳೆಯರನ್ನೂ ನೀವು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು.

ಅಂತರ್ಜಾಲದಲ್ಲಿ ಮೊದಲು ಪ್ರಾರಂಭವಾಗಿದ್ದೇ ಬ್ಲಾಗ್ ಗಳ ಕಾಲ ತಾವು ಅಂದುಕೊಂಡಿದ್ದನ್ನು, ಆಲೋಚಿಸಿದ್ದನ್ನು ವ್ಯಕ್ತಪಡಿಸಲು ಈ ಹಿಂದೆ ಇದೊಂದು ಉತ್ತಮ ತಾಣವಾಗಿತ್ತು. ಈಗಲೂ ಬ್ಲಾಗ್ ಬರೆಯುವ ಜನರ ಸಂಖ್ಯೆಯಿದೆ. ಆದರೆ, ಕಡಿಮೆ. ಬ್ಲಾಗ್ ಗಳಲ್ಲಿ ಯಾರು ಬೇಕಾದರೂ ಖಾತೆ ತೆರೆಯಬಹುದು. ಖಾತೆ ತೆರೆದ ನಂತರ ತಮಗೆ ಅನಿಸಿದ್ದನ್ನು ಹೇಳಲು, ಇಷ್ಟವಾದ ಲೇಖನ ಬರೆಯಲು, ಕಥೆ, ಕವಿತೆ, ಬರಹಗಳನ್ನು ಬರೆಯುವುದಕ್ಕೆ ಇದೊಂದು ಸೂಕ್ತ ವೇದಿಕೆ. ಇದೀಗ ಅಂತರ್ಜಾಲ ತಾಣಗಳಲ್ಲಿ ಗೂಗಲ್, ಟ್ವಿಟರ್, ಫೇಸ್ ಬುಕ್, ವಾಟ್ಸ್ ಅಪ್ ಹಾಗೂ ಇನ್ನಿತರೆ ಹೊಸ ತಾಣಗಳು ನಿರ್ಮಾಣವಾದ ಕಾರಣ ಬ್ಲಾಗ್ ಬರೆಯುವವರ ಸಂಖ್ಯೆ ವಿರಳವಾಗಿದೆ ಎನ್ನಬಹುದು. ಇದೀಗ ಗೂಗಲ್, ಟ್ವಿಟರ್, ಫೇಸ್ ಬುಕ್, ವಾಟ್ಸ್ ಅಪ್ ಗಳು ಸಮಾಜದಲ್ಲಿ ಅತ್ಯಧಿಕ ಪ್ರಚಾರದ ತಾಣಗಳಾಗಿದ್ದು, ಇತ್ತೀಚಿನ ದಿನಗಳಲ್ಲಿ ವಾಟ್ಸ್ ಅಪ್ ಸಮಾಜದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ.

ಇಷ್ಟಕ್ಕೂ ಸಾಮಾಜಿಕ ಜಾಲತಾಣದಲ್ಲಿರುವ ಧನಾತ್ಮಕ ಪರಿಣಾಮಗಳೇನು...?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ಎಂಬುದು ದಿನನಿತ್ಯ ಜೀವನದ ಹಾಸುಹೊಕ್ಕಾಗಿ ಹೋಗಿದೆ. ಸಾಮಾಜಿಕ ಜಾಲತಾಣ ಎಂಬುದು ನಿರ್ಧಿಷ್ಟ ವ್ಯಕ್ತಿಗಳಿಗೆ ಮಾತ್ರವೇ ಎಂಬ ಯಾವುದೇ ನಿಯಮವಿಲ್ಲ. ಇಲ್ಲಿ ಯಾರು, ಯಾವಾಗ, ಹೇಗೆ ಬೇಕಾದರೂ ಉಪಯೋಗಿಸಬಹುದು. ಅವುಗಳನ್ನು ಉಪಯೋಗಿಸುವ ಜ್ಞಾನವಿರಬೇಕಷ್ಟೇ.ಯಾವುದೇ ತಾಣವಾಗಬಹುದು ಅವುಗಳಲ್ಲಿ ಒಳ್ಳೆಯದು, ಕೆಟ್ಟದೆಂಬ ವಿಷಯಗಳು ಇದ್ದೇ ಇರುತ್ತವೆ. ಅವುಗಳನ್ನು ಸ್ವೀಕರಿಸುವ ನಾವು ಸರಿಯಿರಬೇಕು ಹಾಗೂ ನಮ್ಮ ಮೇಲೆ ನಾವು ಎಚ್ಚರಿಕೆಯಿಂದಿದ್ದರೆ ಯಾವುದೇ ಕೆಟ್ಟ ಸನ್ನಿವೇಶಗಳು ಎದುರಾಗುವುದಿಲ್ಲ.

ಗೆಳೆಯರನ್ನು ಧೀರ್ಘಕಾಲದವರೆಗಿರುವಂತೆ ಮಾಡಲು ಸಹಕಾರಿ ಈ ಸಾಮಾಜಿಕ ಜಾಲತಾಣ ಒಂಟಿತನವನ್ನು ದೂರ ಮಾಡುತ್ತದೆ ಈ ಸಾಮಾಜಿಕ ಜಾಲತಾಣ. ನೊಂದ ಮನಸ್ಸಿಗೆ ಕೆಲವು ಘಂಟೆಗಳ ಕಾಲವಾದರೂ ಮನಸ್ಸಿಗೆ ಶಾಂತಿ ನೀಡುತ್ತದೆ ಈ ಸಾಮಾಜಿಕ ಜಾಲತಾಣ. ಎಷ್ಟೋ ವೇಳೆ ನಾವು ಅನಿವಾರ್ಯ ಕಾರಣಗಳಿಂದ, ಒತ್ತಡಗಳಿಂದ ಅಥವಾ ನಮ್ಮ ಜೀವನದ ಹಂತಗಳು ಬದಲಾದ ಕಾರಣಗಳಿಂದ ಸ್ನೇಹಿತರನ್ನು ಮರೆಯುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಇಂತಹ ಗೆಳೆಯರು ನಮ್ಮ ಜೊತೆ ಧೀರ್ಘಕಾಲದವರೆಗೂ ಸಂಪರ್ಕದಲ್ಲಿರುವಂತೆ ಮಾಡಲು ಸಾಮಾಜಿಕ ಜಾಲತಾಣಗಳು ಸಹಕಾರಿಯಾಗಲಿದೆ.

ಮಾತನಾಡಲು ಸ್ವತಂತ್ರ ತಾಣ
ಮನುಷ್ಯ ಸಂಘಜೀವಿಯಾಗಿದ್ದು ಆತ ದುಖಃ ಹಾಗೂ ಸಂತೋಷದಲ್ಲಿರುವ ಪ್ರತಿಯೊಂದು ಕ್ಷಣವನ್ನು ಮತ್ತೊಬ್ಬರ ಬಳಿ ಹೇಳಿಕೊಳ್ಳಲು ಹಾತೊರೆಯುತ್ತಾನೆ. ಇದು ಎಲ್ಲರಲ್ಲಿರುವ ಸಾಮಾನ್ಯ ಗುಣ. ನಮ್ಮ ಮೇಲೆ ಸಹಾನುಭೂತಿ ತೋರಿಸಲು ಸಾಮಾಜಿಕ ಜಾಲತಾಣಗಳು ಉತ್ತಮ ತಾಣಗಳಾಗಿವೆ. ಹೌದು ಸಾಮಾಜಿಕ ಜಾಲತಾಣಗಳು ಸ್ವತಂತ್ರ್ಯ ಜಾಲತಾಣಗಳಾಗಿದ್ದು ನಾವು ಅಂದುಕೊಂಡದ್ದನ್ನು ಹೇಳಿಕೊಳ್ಳಲು ಉತ್ತಮ ತಾಣವಾಗಿದೆ. ನಮ್ಮ ನೋವು, ಸಂತೋಷವನ್ನು ಕೇಳುವ ಜನರು ಇಲ್ಲಿ ಸಿಗುತ್ತಾರೆ. ಸಮಾಧಾನ ಹೇಳುವ, ಸಹಾಯ ಮಾಡುವ, ಸಮಸ್ಯೆಗಳನ್ನು ಪರಿಹರಿಸುವ ಮಾತುಗಳು ಇಲ್ಲಿ ವ್ಯಕ್ತವಾಗುತ್ತವೆ. ಒಂದು ವೇಳೆ ನಿಮಗೆ ಇಷ್ಟವಾಗದ ಗೆಳೆಯರು ಸಿಕ್ಕಾಗ ಅವರನ್ನು ನಿಮ್ಮ ಗೆಳೆಯರ ಸಾಲಿನಿಂದ ತೆಗೆದುಹಾಕುವ ಹಕ್ಕು ಇಲ್ಲಿ ನಿಮಗಿರುತ್ತದೆ. ಅಲ್ಲದೆ, ನೀವು ಯಾವಾಗ ಯಾರನ್ನು ಬೇಕಾದರು ಗೆಳೆಯರನ್ನಾಗಿ ಮಾಡಿಕೊಳ್ಳಬಹುದು. ಯಾರನ್ನು ಯಾವಾಗ ಬೇಕಾದರೂ ತೆಗೆದುಹಾಕಬಹುದು. ಇಲ್ಲಿ ಪ್ರತಿಯೊಬ್ಬರು ತಮ್ಮ ನೋವು, ಸಂತೋಷಗಳನ್ನು ಹಂಚಿಕೊಳ್ಳುತ್ತಾರೆ. ಇಲ್ಲಿ ನೀವು ಬರೆಯುವ ಹಂಚಿಕೊಳ್ಳುವ ವಿಷಯಗಳನ್ನು ಮತ್ತೊಬ್ಬ ವ್ಯಕ್ತಿ ನಿಮ್ಮ ಅನುಮತಿಯಿಲ್ಲದೆಯೇ ನೋಡಲು ಸಾಧ್ಯವಿರುವುದಿಲ್ಲ.

ಸಂವಹನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸುಗಮ ದಾರಿ
ಒತ್ತಡದ ಜೀವನ, ಕೌಟುಂಬಿಕ ಕಟ್ಟುಪಾಡುಗಳಿಂದ ನಮ್ಮ ಸಮಯ ಹೇಗೆ ಕಳೆದುಹೋಗುತ್ತದೆ ಎಂಬುದು ಅರಿವಿಗೆ ಬರುವುದೇ ಇಲ್ಲ. ನಮ್ಮ ಜೀವನದ ಕೆಲವು ಸಂತೋಷದ ಕ್ಷಣಗಳನ್ನು ಎಲ್ಲರ ಬಳಿ ಹೇಳಿಕೊಳ್ಳಬೇಕು ಎಂದರೂ ಕೆಲವೊಮ್ಮೆ ನಮಗೆ ಸಮಯ ಸಿಗುವುದಿಲ್ಲ. ಈ ಸಮಯದಲ್ಲಿ ನಾವು ಸಾಮಾಜಿಕ ಜಾಲತಾಣದಲ್ಲಿ ಕೇವಲ 20 ಸೆಕೆಂಡುಗಳ ಕಾಲ ಕಳೆದರೂ ಸಾಕು. ನಿಮ್ಮ ಖಾತೆಯಿಂದ ನಿಮ್ಮ ಮನಸ್ಸಿನ ಮಾತುಗಳನ್ನು ಹಾಕಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಎಲ್ಲಾ ಸ್ನೇಹಿತರಿಗೂ ತಲುಪಿ ಬಿಡುತ್ತದೆ. ಸಂದೇಶ ತಲುಪಿಸಲು ಎಲ್ಲಿ ಹಣ ವ್ಯಯ ಮಾಡುವ ಪ್ರಮೇಯ ಬರುವುದಿಲ್ಲ.

ದೇಶ-ವಿದೇಶದವರೊಂದಿಗೆ ಸಂಪರ್ಕದಲ್ಲಿರಲು ಸಹಕಾರಿ
ಸಾಮಾಜಿಕ ಜಾಲತಾಣಗಳು ಕೇವಲ ನಮ್ಮ ಅಕ್ಕಪಕ್ಕದ ಗೆಳೆಯರನ್ನಷ್ಟೇ ಸಂಪರ್ಕಿದಲ್ಲಿರಿಸಿಕೊಳ್ಳಲು ಸಹಾಕಾರಿಯಲ್ಲ. ಇಲ್ಲಿ ವಿದೇಶದಲ್ಲಿರುವ ಗೆಳೆಯರನ್ನೂ ಸಹ ನಾವು ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು. ಅವರೊಂದಿಗೆ ಮಾತನಾಡಬಹುದು. ಜೊತೆಗೆ ವಿದೇಶದಲ್ಲಾಗುತ್ತಿರುವ ಹಾಗುಹೋಗುಗಳ ಮಾಹಿತಿಗನ್ನು ತಿಳಿದುಕೊಳ್ಳಲು ಉತ್ತಮ ತಾಣವಾಗಿದೆ. ಸಂಬಂಧಗಳನ್ನು ಕಟ್ಟಿಕೊಳ್ಳಲು ಸಹಕಾರಿ ಈ ಸಾಮಾಜಿಕ ಜಾಲತಾಣ ಸಾಮಾಜಿಕ ಜಾಲತಾಣಗಳು ಸಂಬಂಧ ಕಟ್ಟಿಕೊಳ್ಳುವಲ್ಲಿ ಉತ್ತಮ ತಾಣವಾಗಿದ್ದು, ಒಳ್ಳೆಯ ಸಂಬಂಧ ಹಾಗೂ ಕೆಟ್ಟ ಸಂಬಂಧಗಳನ್ನು ಹುಡುಕಲು ಸಹಕಾರಿಯಾಗಿದೆ. ಒಬ್ಬ ವ್ಯಕ್ತಿಯ ಗುಣಗಳನ್ನು ಇಲ್ಲಿ ಅರಿಯಬಹುದು. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿ ಯಾವ ರೀತಿಯಲ್ಲಿ ಬರೆಯುತ್ತಾನೆ, ಮಾತನಾಡುತ್ತಾನೆಂಬುದು ಆತನ ಗುಣವನ್ನು ನಿರ್ಧರಿಸಬಲ್ಲದು. ಈ ಮೂಲಕ ಆ ವ್ಯಕ್ತಿಯ ಗುಣವನ್ನು ನಿರ್ಧರಿಸಲು ಸಹಾಕಾರಿಯಾಗಿದೆ.

ವ್ಯವಹರಿಸಲು ಉತ್ತಮ ದಾರಿ
ಇನ್ನುಳಿದಂತೆ ವ್ಯವಹಾರಗಳಿಗೂ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವುದುಂಟು. ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯವಾಗಿದೆ. ಸಾಮಾಜಿಕ ಜಾಲತಾಣಗಳು ಅತೀ ಹೆಚ್ಚು ಅಭಿವೃದ್ಧಿ ಕಾಣುತ್ತಿರುವ ತಾಣವಾಗಿರುವ ಹಿನ್ನೆಲೆಯಲ್ಲಿ ನಾವು ಮಾಡುತ್ತಿರುವ ವ್ಯವಹಾರದ ಕುರಿತಂತೆ ನಮ್ಮ ಖಾತೆಯ ಮೂಲಕವೇ ಜಾಹೀರಾತು ನೀಡಬಹುದು. ಇದರಿಂದ ನಮ್ಮ ಗೆಳೆಯರು ಈ ಬಗ್ಗೆ ತಿಳಿದು ಅವರ ಟೈಮ್ ಲೈನ್ ಗಳಿಗೂ ಶೇರ್ ಮಾಡುತ್ತಾರೆ. ಗೆಳೆಯರ ಟೈಮ್ ಲೈನ್ ನೋಡಿದ ಅವರ ಗೆಳೆಯರು ಈ ಬಗ್ಗೆ ಮಾಹಿತಿ ಪಡೆಯುತ್ತಾರೆ. ಹೀಗೆ ನಾವು ವ್ಯವಹಾರಗಳು ದೊಡ್ಡ ಉದ್ಯಮವಾಗಿ ಬೆಳೆಯುವುದಕ್ಕೆ ಜಾಲತಾಣಗಳು ಸಹಕಾರಿಯಾಗಿದೆ. ಇದರಿಂದಾಗಿ ಟಿವಿ. ಪತ್ರಿಕೆ, ರೇಡಿಯೋಗಳ ಜಾಹೀರಾತುಗಳಿಗೆ ನೀಡುವ ಲಕ್ಷಾಂತರ ಹಣಗಳನ್ನು ನಾವು ಉಳಿಸಿಕೊಳ್ಳಬಹುದು.

ಮಾಹಿತಿ ವಿನಿಮಯಕ್ಕೆ ಹಾಗೂ ಮಾಹಿತಿ ಪಡೆಯಲು ಉಪಯೋಗಕಾರಿ
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗುತ್ತಿದ್ದು, ಹೆಚ್ಚಿನ ಜನರು ಸುದ್ದಿ ತಿಳಿಯಲು, ಮಾಹಿತಿ ಪಡೆಯಲು ತಮ್ಮ ಮೊಬೈಲ್ ಫೋನ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಅಂತರ್ಜಾಲದ ಶಕೆ ಹೆಚ್ಚಾಗುತ್ತಿದ್ದಂತೆ ಜನರಿಗೆ ಸುದ್ದಿ ನೀಡುವ ಅಂತರ್ಜಾಲಗಳ ತಾಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಜನರು ಸಾಮಾಜಿಕ ಜಾಲತಾಣಗಳ ಮೂಲಕ ತಮಗೆ ಅಗತ್ಯವಿರುವ ಮಾಹಿತಿಗಳನ್ನು ಪಡೆಯಲು ಸಹಕಾರಿಯಾಗಿದೆ.

ದೂರಿಗೆ ಸಾಮಾಜಿಕ ಜಾಲತಾಣ ಉತ್ತಮ ಸಾಧನ
ಜನರಿಗೆ ಭದ್ರತೆ ನೀಡುವುದರಲ್ಲೂ ಸಾಮಾಜಿಕ ಜಾಲತಾಣಗಳು ಪರೋಕ್ಷವಾಗಿ ನೆರವಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸೆಕ್ಯುರಿಟಿಯಾಗಿಯೂ ಸಾಮಾಜಿಕ ಜಾಲತಾಣಗಳು ಕೆಲಸ ಮಾಡುತ್ತಿವೆ. ತಾವು ಏನನ್ನಾದರೂ ಹೇಳಬೇಕಾದರೆ ಯಾರಾದರೂ ತಮಗೆ ಕಿರುಕುಳ ನೀಡುತ್ತಿದ್ದರೆ ಅಥವಾ ತೊಂದರೆ ನೀಡುತ್ತಿದ್ದರೆ ಅಂತಹ ಸಮಸ್ಯೆಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಹೇಳಿಕೊಂಡರೆ ಈ ಮಾಹಿತಿ ಮತ್ತಷ್ಟು ಜನರಿಗೆ ತಲುಪಿ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಸರ್ಕಾರೇತರ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲಿರಿಸಿದೆ. ಇಲ್ಲಿ ಬರುವ ಯಾವುದೇ ವಿಷಯಗಳು ಗಂಭೀರ ಎನಿಸಿದರೂ ಆ ಕುರಿತಂತೆ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ.

ಸೃಜನಶೀಲರಿಗೆ ಸಾಮಾಜಿಕ ಜಾಲತಾಣ
ಹೌದು ಸೃಜನಶೀಲರಿಗೆ ಸಾಮಾಜಿಕ ಜಾಲತಾಣ ಉತ್ತಮ ತಾಣವಾಗಿದ್ದು, ತಮ್ಮ ಕಲೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ. ಉದಾಹರಣೆಗೆ ವ್ಯಕ್ತಿಯೊಬ್ಬ ಬರವಣೆಗೆ, ಚಿತ್ರಕಲೆ, ನೃತ್ಯ, ಸಂಗೀತ ಅಥವಾ ಇನ್ನಾವುದೇ ರೀತಿಯ ಕಲೆಯಿದ್ದರೂ ಅವುಗಳನ್ನು ದೃಶ್ಯ ಅಥವಾ ಬರವಣಿಗೆಯಲ್ಲಿ ಹಾಕಿದರೆ ಸಾಕು. ಈ ಮಾಹಿತಿ ನಮ್ಮ ಖಾತೆಯಲ್ಲಿರುವ ಎಲ್ಲಾ ಗೆಳೆಯರನ್ನು ತಲುಪುತ್ತದೆ. ಇದು ನಮ್ಮ ಯಶಸ್ಸಿನ ಹಾದಿಯನ್ನು ಸುಲಭವಾಗಿಸಬಲ್ಲದು. ಮೊದಲೆಲ್ಲಾ ತಮ್ಮ ಕಲೆಯನ್ನು ಇತರರಿಗೆ ಪ್ರದರ್ಶಿಸಲು ಜನರು ನಾನಾ ರೀತಿಯ ಕಷ್ಟಗಳನ್ನು ಪಡುತ್ತಿದ್ದರು. ಇದೀಗ ಸಾಮಾಜಿಕ ಜಾಲತಾಣಗಳು ಅಂತಹ ಕಷ್ಟಗಳನ್ನು ದೂರಾಗಿಸಿದೆ.

ಸಾಮಾಜಿಕ ಜಾಲತಾಣ ವೃದ್ದರಿಗೂ ಖುಷಿ
ಸಾಮಾಜಿಕ ಜಾಲತಾಣಗಳು ಹರಟೆ, ಮನರಂಜನೆ, ವಿಚಾರ ವಿನಿಮಯ ವ್ಯಾಪಾರ-ವಹಿವಾಟಿಗೆ ಉತ್ತಮ ವೇದಿ ಹೌದು, ಹಾಗೆಯೇ ವಯೋವೃದ್ಧರ ಆರೋಗ್ಯ ಸುಧಾರಣೆಗೂ ಇವುಗಳು ಉತ್ತಮ ವೇದಿಕೆಯಾಗಿದೆ ಎಂಬುದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ. ವಯಸ್ಸಾಗುತ್ತಿದ್ದಂತೆ ಮನೆಯಲ್ಲಿ ವೃದ್ಧರು ಒಬ್ಬಂಟಿಯಾಗುತ್ತಾರೆ. ಯಾರೂ ಕೂಡೂ ಅವರನ್ನು ಹೆಚ್ಚು ಕಾಳಜಿಯಿಂದ ನೋಡುಕೊಳ್ಳುವುದಿಲ್ಲ ಎಂಬ ಆಲೋಚನೆಗಳು ಅವರಿಗೆ ಬಂದು ಏಕಾಂಗಿ ಎಂಬ ಭಾವನೆ ಮೂಡುತ್ತದೆ. ಬಹಳಷ್ಟು ದೇಶಗಳಲ್ಲಿ ವೃದ್ಧರನ್ನು ಇತ್ತೀಚಿನ ದಿನಗಳಲ್ಲಿ ಅನಾಥಾಶ್ರಮ ಅಥವಾ ಕೇರ್ ಟೇಕಿಂಗ್ ಸ್ಥಳಗಳಲ್ಲಿ ಬಿಡುವುದನ್ನು ನಾವು ನೋಡಬಹುದು. ಇಂತಹ ಸಂದರ್ಭದಲ್ಲಿ ವಯೋವೃದ್ದರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಹೋಗುತ್ತಾರೆ. ಇಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಂತರ ವಯೋವೃದ್ಧರು ಹೆಚ್ಚು ಕ್ರಿಯಾಶೀಲರಾಗಬಹುದು.

ಸಾಮಾಜಿಕ ತಾಣಗಳಲ್ಲಿ ಸರ್ಕಾರದ ಮಾಹಿತಿ
ಸಾಮಾಜಿಕ ತಾಣಗಳು ಅಭಿವೃದ್ಧಿಗೊಂಡಂತೆ ಸರ್ಕಾರೇತರ ಸಂಸ್ಥೆಗಳು ಅಂತರ್ಜಾಲದಲ್ಲಿ ಕಾರ್ಯ ಮಗ್ನರಾಗುತ್ತಿದ್ದು, ಸರ್ಕಾರೇತರ ಮಾಹಿತಿಗಳು ಜನರಿಗೆ ತಲುಪಿಸಲು ಅಧಿಕಾರಿಗಳು ಸಹ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಇಂದು ಯಾವುದೇ ಕೆಲಸಕ್ಕೆ ಅರ್ಜಿ ಹಾಕಬೇಕೆಂದರೂ, ಮಾಹಿತಿ ಪಡೆಯಬೇಕೆಂದರೂ ಅಥವಾ ದೂರು ಸಲ್ಲಿಸಬೇಕೆಂದರೂ ಅಂತರ್ಜಾಲದ ಮುಖಾಂತರವೇ ಸಲ್ಲಿಸಬೇಕಾಗುತ್ತದೆ.

ಒಟ್ಟಾರೆಯಾಗಿ ಸಾಮಾಜಿಕ ಜಾಲ ತಾಣ ಎಂದಾಕ್ಷಣ ಅದು ದ್ವಂದ್ವಾರ್ಥ, ಅಸಹ್ಯ, ಅಶ್ಲೀಲ ಎಂಬ ಅನಿಸಿಕೆಗಳು ತಪ್ಪು. ಪ್ರಪಂಚದಲ್ಲಿ ಪ್ರತಿ ಸೃಷ್ಟಿಗೂ ಎರಡು ಮುಖಗಳಿವೆ. ಒಂದು ಒಳ್ಳೆಯ ಮುಖವಾದರೆ ಮತ್ತೊಂದು ಕೆಟ್ಟದ್ದು. ಯಾವುದೇ ಒಂದು ವಸ್ತುವಾಗಲೀ ಅಥವಾ ವ್ಯಕ್ತಿಯೇ ಆಗಲೀ ಖ್ಯಾತಿ ಪಡೆದರೂ, ಕುಖ್ಯಾತಿ ಪಡೆದರೂ ಅದು ಅವರವರ ಉದ್ದೇಶಕ್ಕೆ ಹಾಗೂ ಬಳಕೆಯ ಮೇಲೆ ನಿರ್ಧಾರಿತವಾಗಿರುತ್ತದೆ. ಅವಶ್ಯಕತೆಗೆ ತಕ್ಕಂತೆ ಬಳಸಿದರೆ ಯಾವುದೂ ಕೆಟ್ಟ ಪರಿಣಾಮ ಬೀರುವುದಿಲ್ಲ. ಇತಿಮಿತಿಯಲ್ಲಿದ್ದರೆ ಎಲ್ಲವೂ ಉಪಯೋಗಕಾರಿಯೇ.

-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com