ಚರ್ಮದ ಸಮಸ್ಯೆ 'ಇಸುಬು': ಇಲ್ಲಿದೆ ಕೆಲ ಮನೆಮದ್ದುಗಳು

ಮನುಷ್ಯನ ದೇಹದಲ್ಲಿ ಅತೀದೊಡ್ಡ ಅಂಗ ಚರ್ಮ. ಇದು ದೇಹದ ಹೊರ ಭಾಗಗಳನ್ನು ಕಾಪಾಡುವ ರಕ್ಷಣಾ ಕವಚವಾಗಿದ್ದು, ಈ ರಕ್ಷಣಾ ಕವಚವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ...
ಚರ್ಮದ ಆರೈಕೆ 'ಇಸುಬು'ಗೆ ಇಲ್ಲಿದೆ ಕೆಲ ಮನೆಮದ್ದುಗಳು
ಚರ್ಮದ ಆರೈಕೆ 'ಇಸುಬು'ಗೆ ಇಲ್ಲಿದೆ ಕೆಲ ಮನೆಮದ್ದುಗಳು
Updated on
ಮನುಷ್ಯನ ದೇಹದಲ್ಲಿ ಅತೀದೊಡ್ಡ ಅಂಗ ಚರ್ಮ. ಇದು ದೇಹದ ಹೊರ ಭಾಗಗಳನ್ನು ಕಾಪಾಡುವ ರಕ್ಷಣಾ ಕವಚವಾಗಿದ್ದು, ಈ ರಕ್ಷಣಾ ಕವಚವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ. ಆದರೆ, ಈ ರಕ್ಷಣಾ ಕವಚಕ್ಕೆ ಸಾಕಷ್ಟು ಬಾರಿ ಸೋಂಕು, ಸಮಸ್ಯೆಗಳು ಎದುರಾಗುವುದು ಸಹಜ. ಇವುಗಳ ಪೈಕಿ ಎಸ್ಜಿಮಾ (ಇಸುಬು)ಕೂಡ ಒಂದಾಗಿದೆ. ಇಸುಬು ಎಂದರೆ, ಚರ್ಮವು ಉರಿಯೂತಕ್ಕೆ ಗುರಿಯಾಗುವುದರಿಂದ ಆ ಭಾಗದ ಚರ್ಮವು ಕೆಂಪು ಬಣ್ಣಕ್ಕೆ ತಿರುಗಿ ನವೆ ಆರಂಭವಾಗುತ್ತದೆ. 
ಇದು ಕ್ರಮೇಣ ನೀರಿನ ಗುಳ್ಳೆಗಳಾಗಿ ಮಾರ್ಪಾಡಾಗಿ ಅವುಗಳಿಂದ ದ್ರವ ಪದಾರ್ಥ ಸೋರುತ್ತದೆ. ಬಳಿಕ ಆ ಭಾಗವೆಲ್ಲವೂ ಮಚ್ಚೆಯಾಗಿ ಕಾಣಿಸಿಕೊಳ್ಳುತ್ತದೆ ಇದನ್ನು ಇಸುಬು ಎಂದು ಕರೆಯಲಾಗುತ್ತದೆ. ಇದು ಬಹುತೇಕವಾಗಿ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. 
ಇಸುಬು ಬರುವುದಕ್ಕೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಆದರೂ, ವಂಶಪರಂಪರೆಯಿಂದ ಹಾಗೂ ವಾತಾವರಣದಲ್ಲಿರುವ ಕೆಲವು ಅಂಶಗಳಿಂದ ಬರುತ್ತದೆ ಎಂದು ಹೇಳಲಾಗುತ್ತಿದೆ. 
ಒಣಗಿದ ಚರ್ಮ ಇರುವವವರಲ್ಲಿ ಬಹುತೇಕವಾಗಿ ಈ ಇಸುಬು ಕಾಣಿಸಿಕೊಳ್ಳುತ್ತದೆ. ಇಸುಬುವಿನ ಪ್ರಧಾನ ಲಕ್ಷಣವೆಂದರೆ ನವೆ. ನಂತರ ಚರ್ಮ ಕೆಂಪಗಾಗುತ್ತದೆ. ಬಳಿಕ ಆ ಭಾಗ ಊದಿಕೊಳ್ಳುತ್ತದೆ. ಕ್ರಮೇಣವಾಗಿ ಇದು ನೀರಿನ ಗುಳ್ಳೆಗಳಾಗಿ ಮಾರ್ಪಟ್ಟು ಅವುಗಳಿಂದ ದ್ರವ ಸೋರುತ್ತದೆ. ಸ್ವಲ್ಪ ಸಮಯದ ಬಳಿಕ ಚರ್ಮ ಕಪ್ಪಾಗುತ್ತವೆ. 
ಇಸುಬು ಸಾಮಾನ್ಯವಾಗಿ ಮನುಷ್ಯನ ಮುಖ, ತಲೆ, ಮೊಣಕಾಲು, ಕತ್ತಿನ ಭಾಗ, ಮೊಣಕೈ, ಮಣಿಕಟ್ಟು, ಪಾದದ ಹಿಂಬದಿ ಹಾಗೂ ಕಿವಿಯ ಹಿಂಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 
ಇಸುಬುವಿನಿಂದ ದೂರ ಉಳಿಯಲು ಕೆಲ ಮನೆ ಮದ್ದುಗಳು ಇಲ್ಲಿವೆ...
  • ಒಣಗಿದ ಚರ್ಮದಿಂದ ದೂರ ಉಳಿಯಲು 10-15 ನಿಮಿಷಗಳ ಕಾಲ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.
  • ಇಸುಬುವಿಂದ ದೂರವಿರಲು ಚರ್ಮ ಒಣಗದಂತೆ ನೋಡಿಕೊಳ್ಳಿ. ಮೃದುವಾದ ಟವಲ್ ತೆಗೆದುಕೊಂಡು ಅದಕ್ಕೆ ಮಾಯಿಶ್ಚರೈಸರ್ ಹಚ್ಚಿ ಆಗಾಗ ಚರ್ಮದ ಮೇಲಿಡುತ್ತಿರಿ. 
  • ಸೂರ್ಯಕಾಂತಿ ಬೀಜದ ಎಣ್ಣೆ ಬಳಸಿ: ಸೂರ್ಯಕಾಂತಿ ಬೀಜದ ಎಣ್ಣೆ ಚರ್ಮದ ಉರಿಯೂತವನ್ನು ಕಡಿಮೆ ಮಾಡಲಿದ್ದು, ನವೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಒಡೆದ ಚರ್ಮ ಸರಿಹೋಗಲು ಸಹಾಯ ಮಾಡುತ್ತದೆ. 
  • ಕೊಬ್ಬರಿ ಎಣ್ಣೆ: ಕೊಬ್ಬರಿ ಎಣ್ಣೆಯನ್ನು ಸಾಮಾನ್ಯವಾಗಿ ಕೂದಲಿಗೆ ಹೆಚ್ಚು ಬಳಕೆ ಮಾಡುತ್ತಾರೆ. ಆದರೆ, ಇದು ಚರ್ಮದ ಆರೈಕೆಗೂ ಅತ್ಯುತ್ತಮವಾದ ವಸ್ತುವಾಗಿದೆ. ಕೊಬ್ಬರಿ ಎಣ್ಣೆ ಹಾಗೂ ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಸಮಸ್ಯೆಗಳು ದೂರಾಗುತ್ತವೆ. ಚರ್ಮದ ತುರಿಕೆ ಕೂಡ ಕಡಿಮೆಯಾಗುತ್ತದೆ. 
  • ವಿಟಮಿನ್ ಡಿ ಹೆಚ್ಚಿಸಿಕೊಳ್ಳಿ; ಸಾಮಾನ್ಯವಾಗಿ ಈ ಇಸುಬು ಚಳಿಗಾಲದ ಸಮಯದಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಚರ್ಮದ ಒಡೆಯುವುದರಿಂದ ಚರ್ಮದ ಆರೈಕೆ ಅತ್ಯಂತ ಮುಖ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವಿಟಮಿನ್ ಡಿ ಇರುವಂತಹ ಮೊಟ್ಟೆ, ಮೀನು, ಹಾಲು, ಸೊಪ್ಪು, ಬೆಂಡೆಕಾಯಿ, ಸೋಯಾ ಉತ್ಪನ್ನಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಚರ್ಮದ ಶಕ್ತಿ ಕೂಡ ಹೆಚ್ಚಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com