ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಶಿಲೀಂಧ್ರ ಸೋಂಕು: ಏನಿದು ಫಂಗಲ್ ಇನ್ಫೆಕ್ಷನ್?ಇಲ್ಲಿದೆ ಮಾಹಿತಿ...
ನವದೆಹಲಿ: ಕೊರೋನಾ 2ನೇ ಅಲೆಯಿಂದಾಗಿ ಈಗಾಗಲೇ ತತ್ತರಿಸಿರುವ ಭಾರತದಲ್ಲಿ ಹೊಸ ಸಂಕಷ್ಟವೊಂದು ಶುರುವಾಗಿದೆ. ಸೋಂಕಿಗೊಳಗಾಗಿ ಗುಣಮುಖರಾದವರಲ್ಲಿ ಬ್ಲಾಕ್ ಫಂಗಸ್ ಎಂದು ಕರೆಯಲ್ಪಡುವ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಬಹಳ ಎಚ್ಚರಿಕೆಯಿಂದಿರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ.
ಶಿಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ವರದಿಯಾಗುತ್ತಿವೆ. ಕಳೆದ ವರ್ಷ ಕೂಡ ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಬ್ಲಾಕ್ ಫಂಗಸ್'ಗಳು ಕಂಡು ಬಂದಿದ್ದವು. ಈ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿ ಹೀನತೆಗೆ ಕಾರಣವಾಗಲಿದೆ. ಒಂದು ವೇಳೆ ಈ ಸೋಂಕು ಮೆದುಳಿಗೆ ವ್ಯಾಪಿಸಿದರೆ ಸಾವನ್ನಪ್ಪುವ ಸಾಧ್ಯತೆಯೂ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಏನಿದು ಬ್ಲಾಕ್ ಫಂಗಸ್...?
ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು, ಡಯಾಬಿಟಿಸಿ ನಂತಹ ಕಾಯಿಲೆ ಉಳ್ಳವರಲ್ಲಿ ಶಿಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತಿದೆ.
ಕೊರೋನಾದಿಂದ ಗುಣಮುಖರಾದ ರೋಗಿಗಳು ಮ್ಯೂಕೋರ್ಮೈಕೋಸಿಸ್'ಗೆ ಕಾರಣವಾಗುವ ಫಂಗಸ್ ಗಳಿಗೆ ತುತ್ತಾಗುವುದರಿಂದ ಸೋಂಕಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ.
ರೋಗ ಲಕ್ಷಣಗಳೇನು?
ಕಣ್ಣಿನಲ್ಲಿ ನೋವು, ಒಂದು ಕಡೆ ಮುಖ ಊದಿಕೊಳ್ಳುವಿಕೆ, ತಲೆ ನೋವು, ಜ್ವರ, ಮೂಗು ಕಟ್ಟುವಿಕೆ ಇವು ಸೋಂಕಿನ ಲಕ್ಷಣಗಳಾಗಿವೆ.
ಯಾರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ?
ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಕೊರೋನಾದಿಂದ ಚೇತರಿಸಿಕೊಂಡ 2-3 ವಾರಗಳ ಬಳಿಕ ಈ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಚಿಕಿತ್ಸೆಗಾಗಿ ಸ್ಟಿರಾಯ್ಡ್ ಪಡೆದುಕೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ