ವರ್ಕ್ ಫ್ರಮ್ ಹೋಮ್ ಎನ್ನುವ ಸ್ಲೋ ಪಾಯ್ಸನ್: ಉದ್ಯೋಗಿಗಳಲ್ಲಿ ಮಾನಸಿಕ ಸಮಸ್ಯೆಗಳ ಹೆಚ್ಚಳ
ಮನೆಯೇ ಮೊದಲ ಪಾಠಶಾಲೆ ಎನ್ನುವ ಮಾತೊಂದಿದೆ. ಮನೆ, ಪಾಠಶಾಲೆಯಾಗಿಯೇ ಉಳಿದಿದ್ದರೆ ಚೆನ್ನ. ಮನೆ ದೀರ್ಘ ಕಾಲ ಕಚೇರಿಯಾಗಿ ಮಾರ್ಪಾಡಾದರೆ ಆಪತ್ತು ಎನ್ನುವುದನ್ನು ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಕಲಿಸಿಕೊಡುತ್ತಿದೆ.
Published: 16th October 2021 01:34 PM | Last Updated: 16th October 2021 02:00 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮನೆಯ ವಾತಾವರಣ ಸರಿಯಾಗಿದ್ದರೆ ಜೀವನದಲ್ಲಿ ಅದೆಂಥದ್ದೇ ದೊಡ್ಡ ಗುರಿಯನ್ನಾದರೂ ಮುಟ್ಟಬಹುದು ಎನ್ನುವುದು ತಿಳಿವಳಿಕಸ್ಥರ ಅನುಭವದ ಮಾತು. ಅದೇ ರೀತಿ ಇನೊಂದು ಮಾತೂ ನಮ್ಮ ನಡುವೆ ಚಾಲ್ತಿಯಲ್ಲಿದೆ. ಅದೇನಪ್ಪ ಅಂದರೆ ಎಲ್ಲಾ ಸಮಸ್ಯೆಗಳ ಮೂಲ ಮನೆಯಲ್ಲಿಯೇ ಇದೆ ಎನ್ನುವುದು.
ಈ ಮೇಲಿನ ಮಾತುಗಳೆಲ್ಲಾ ಪ್ರಸ್ತುತ ಸಂದರ್ಭದಲ್ಲಿ ನಿಜ ಅನ್ನಿಸುತ್ತಾ ಇದೆ. ಅದಕ್ಕೆ ಕಾರಣ ವರ್ಕ್ ಫ್ರಮ್ ಹೋಮ್. ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಬಹುತೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸವಲತ್ತನ್ನು ಒದಗಿಸಿದ್ದವು.
ಇದನ್ನೂ ಓದಿ: ಕಾಸ್ಮೆಟಿಕ್ ಗೈನಕಾಲಜಿ ಎನ್ನುವ ಗರ್ಭಿಣಿಯರ ಸೌಂದರ್ಯ ಶಾಸ್ತ್ರ
ವರ್ಕ್ ಫ್ರಮ್ ಹೋಮ್ ಸವಲತ್ತನ್ನು ಒದಗಿಸದ ಸಂಸ್ಥೆಗಳಿಗೆ ಅದರ ಉದ್ಯೋಗಿಗಳ ಹಿಡಿಶಾಪವೂ ತಗುಲಿತ್ತು. ಅನಿವಾರ್ಯವಾಗಿ ವರ್ಕ್ ಫ್ರಮ್ ಹೋಮ್ ವಾತಾವರಣ ನಿರ್ಮಾಣವಾದಾಗ ನೌಕರರು ಅದನ್ನು ಸಂತಸದಿಂದ ಅಪ್ಪಿಕೊಂಡಿದ್ದರು. ಅದನ್ನು ವರದಾನ ಎಂಬಂತೆ ನೋಡಿದ್ದರು. ಆದರೀಗ ವರ್ಕ್ ಫ್ರಮ್ ಹೋಮ್ ಸಂಸ್ಕೃತಿಯ ಇನ್ನೊಂದು ಮಗ್ಗುಲು ತೆರೆದುಕೊಂಡಿದೆ.
ಅತಿಯಾದರೆ ಅಮೃತವೂ ವಿಷ ಎನ್ನುವ ಮಾತು ವರ್ಕ್ ಫ್ರಮ್ ಹೋಮ್ ಸಂಸ್ಕೃತಿಗೂ ಅಂಟಿಕೊಂಡಿದೆ. ಮನೋವಿಜ್ನಾನಿಗಳ ಬಳಿಗೆ ತೆರಳುವ ಪ್ರತಿ 5 ರೋಗಿಗಳಲ್ಲಿ ಮೂವರು ಮಂದಿ ವರ್ಕ್ ಫ್ರಮ್ ಹೋಮ್ ಕಾರಣದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಸೆಲಬ್ರಿಟಿಗಳ ಮಕ್ಕಳು ಖುಷಿಯಾಗಿರುತ್ತಾರೆ ಅನ್ಕೊಂಡಿದ್ದೀರಾ? ಅದು ಸುಳ್ಳು: ಸಿದ್ಧಾರ್ಥ ಮಲ್ಯ
ಐಟಿ ಉದ್ಯೋಗಿಗಳು ಮಾತ್ರವಲ್ಲದೆ, ಉಪನ್ಯಾಸಕರು, ಮಾರ್ಕೆಟಿಂಗ್, ಅಡ್ವರ್ಟೈಸಿಂಗ್ ಮತ್ತಿತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಂದಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮನೋವೈದ್ಯರ ಬಳಿಗೆ ತೆರಳುತ್ತಿರುವ ಆತಂಕಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ.
ಕೆಲಸ ಕಳೆದುಕೊಳ್ಳುವ ಭಯ, ಸಂಬಳ ಏರಿಕೆ ಮಾಡದೇ ಇರುವುದು, ಕೆಲಸದಲ್ಲಿ ಒತ್ತಡ, ಸಂಸ್ಥೆ ನೀಡುವ ಕಷ್ಟಸಾಧ್ಯ ಗುರಿಯನ್ನು ತಲುಪಲಾಗದೆ ಹೆಣಗಾಡುವುದು, ಅವೆಲ್ಲದರ ನಡುವೆ ಕುಟುಂಬದಲ್ಲಿ ಕಲಹ, ಭಿನ್ನಾಭಿಪ್ರಾಯಗಳು ಮುಂತಾದ ಸಮಸ್ಯೆಗಳು ಉದ್ಯೋಗಿಗಳನ್ನು ಹೆಚ್ಚಾಗಿ ಬಾಧಿಸುತ್ತಿವೆ. ಇದರಿಂದಾಗಿ ಖಿನ್ನತೆ, ಉದ್ವೇಗ, ನಿದ್ರಾಹೀನತೆ, ಬೇಸರ ಏಕಾಂಗಿತನದಿಂದ ಬಳಲುವಂತಾಗಿದೆ.
ಇದನ್ನೂ ಓದಿ: ಕಳೆದ 30 ವರ್ಷಗಳಲ್ಲಿ ಹೈಪರ್ ಟೆನ್ಷನ್ ಪ್ರಮಾಣ ದುಪ್ಪಟ್ಟು
ಇತ್ತೀಚಿಗೆ ವಿವಾಹವಾದ ದಂಪತಿಗಳು ಕೆಲಸದ ಪಾಳಿ ಬದಲಾಗಿರುವುದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯವೇ ಇಲ್ಲದಂತಾಗಿದೆ. ಪತ್ನಿ ಬೆಳಗ್ಗಿನಿಂದ ರಾತ್ರಿ ವರೆಗೆ ಕೆಲಸ ಮಾಡಿದರೆ, ಪತಿ ಸಂಜೆಯಿಂದ ಮರುದಿನ ಮುಂಜಾನೆ ವರೆಗೆ ಕಚೇರಿ ಕೆಲಸದಲ್ಲಿ ಮುಳುಗಿರಬೇಕಾಗಿದೆ. ಇದರಿಂದಾಗಿ ಪರಸ್ಪರ ಅರ್ಥ ಮಾಡಿಕೊಳ್ಲಲು ಸಾಧ್ಯವಾಗದೆ ಮನಸ್ತಾಪ ಮಾಡಿಕೊಳ್ಳುತ್ತಿದ್ದಾರೆ.
ವರ್ಕ್ ಫ್ರಮ್ ಹೋಮ್ ಸವಲತ್ತು ನೀಡುವ ಸಂಸ್ಥೆ ಉದ್ಯೋಗಿಗಳ ಮೇಲೆ ಎಂದಿಗಿಂತ ಹೆಚ್ಚು ಹೊರೆಯನ್ನು ಹಾಕುತ್ತಿರುವುದು ಕಂಡುಬಂದಿದೆ. ಬೆಳಿಗ್ಗೆ ಲಾಗಿನ್ ಆದರೆ ಮಧ್ಯದಲ್ಲಿ ಶೌಚಕ್ಕೆ ಹೋಗಲೂ ಆಗಂತೆ ಅವರನ್ನು ಲ್ಯಾಪ್ ಟಾಪ್ ಮುಂದೆ ಕಟ್ಟಿಹಾಕುವಷ್ಟು ಹೆಚ್ಚುವರಿ ಜವಾಬ್ದಾರಿಯನ್ನು ನೀಡುತ್ತಿದ್ದಾರೆ. ಇದರಿಂದಾಗಿಯೇ ಹಲವರು ಕೆಲಸ ಬಿಟ್ಟಿದ್ದಾರೆ.
ಇದನ್ನೂ ಓದಿ: ತುಂಬಾ ಹೊತ್ತು ಮೊಬೈಲ್ ಪರದೆ ದಿಟ್ಟಿಸುವ ಮಕ್ಕಳಲ್ಲಿ ಸಮೀಪದೃಷ್ಟಿ ದೋಷ
ಇದುವರೆಗೂ ಕೆಲಸವನ್ನು ಕಚೇರಿಯಲ್ಲಿ ಮಾಡಲಾಗುತ್ತಿತ್ತು. ಅದಕ್ಕೆಂದೇ ನಿಗದಿತ ಅವಧಿ ಮೀಸಲಾಗಿರುತ್ತಿತ್ತು. ಕಚೇರಿಯಲ್ಲಿ ಊಟ, ತಿಂಡಿ, ಕಾಫಿಗೆಂದು ನಿಗದಿತ ವೇಳೆ ಬಳಕೆಯಾಗುತ್ತಿತ್ತು. ಮನೆಗೆ ಬಂದರೆ ಉದ್ಯೋಗಿ ನಿರುಮ್ಮಳನಾಗಿ ಕಚೇರಿ ಕೆಲಸಗಳನ್ನು ಕಚೇರಿಯಲ್ಲೇ ಬಿಟ್ಟು ಮನೆಮಂದಿಯೊಂದಿಗೆ ಕಾಲ ಕಳೆಯುತ್ತಿದ್ದ.
ಡೈನಿಂಗ್ ಹಾಲ್ ನಲ್ಲಿ ಊಟ, ಹಾಲ್ ನಲ್ಲಿ ಟಿವಿ ನೋಡುವುದು, ಬೆಡ್ ರೂಮಿನಲ್ಲಿ ನಿದ್ದೆ ಮಾಡುತ್ತಿದ್ದ. ಆದರೀಗ ಮೈಲಿಗಳ ದೂರದ ಆಫೀಸು ನಮ್ಮ ಬೆಡ್ ರೂಮಿಗೇ ಬಂದುಬಿಟ್ಟಿದೆ. ಕೆಲಸದ ವೇಳೆಗೆ ಹೊತ್ತಿಲ್ಲ ಗೊತ್ತಿಲ್ಲ. ಹಾಸಿಗೆ ಮೇಲೆ ಕುಳಿತು ನಿದ್ದೆ ಮಾಡುವ ಹೊತ್ತಲ್ಲೂ ಲ್ಯಾಪ್ ಟಾಪ್ ತೆರೆದು ಟಕ ಟಕ ಕೀಲಿಮಣೆ ಟೈಪಿಸುತ್ತಾ ಕೂರುವ ದುರ್ದೈವ ಒದಗಿ ಬಂದಿರುವುದೇ ಇವೆಲ್ಲಾ ಅವಾಂತರಕ್ಕೆ ಕಾರಣ.
ಇದನ್ನೂ ಓದಿ: ಗ್ಯಾಜೆಟ್ ವ್ಯಸನಿಗಳಾಗುತ್ತಿದ್ದಾರೆ ಶಾಲಾ ಮಕ್ಕಳು! ಪಾಲಕರೇ ಎಚ್ಚರ!
ಉದ್ಯೋಗದಾತ ಸಂಸ್ಥೆಗಳು ಈ ಸಮಸ್ಯೆಗಳನ್ನು ಮನಗಂಡು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ತಮ್ಮ ಉದ್ಯೋಗಿಗಳಿಗೆ ಕೇರ್ ನೀಡಬೇಕು, ಕೆಲಸದಿಂದ ಬ್ರೇಕ್ ತೆಗೆದುಕೊಳ್ಳುವ ಅವಕಾಶಗಳನ್ನು ದಯಪಾಲಿಸಬೇಕು. ಅವರ ತೊಂದರೆಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ತೋರ್ಪಡಿಸಬೇಕು.