ಪದೇ ಪದೇ ಕಾಲು ನೋವು, ಸೆಳೆತ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ಮೊದಲು ಕಾರಣ ತಿಳಿದುಕೊಳ್ಳಿ!

ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ನಮಗೆ ತಿಳಿಯುತ್ತದೆ. ಆದರೆ ನಿರ್ಲಕ್ಷ್ಯದಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಕೈ ಸೆಳೆತ, ಕಾಲು ಸೆಳೆತ ಕಾಣಿಸಿಕೊಳ್ಳುವುದು ಸಹಜ. ಕೆಲಸ ಮಾಡಿ ಸುಸ್ತಾದಾಗ ಅಥವಾ ನರಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯುಂಟಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ನಮಗೆ ತಿಳಿಯುತ್ತದೆ. ಆದರೆ ನಿರ್ಲಕ್ಷ್ಯದಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಕೈ ಸೆಳೆತ, ಕಾಲು ಸೆಳೆತ ಕಾಣಿಸಿಕೊಳ್ಳುವುದು ಸಹಜ. ಕೆಲಸ ಮಾಡಿ ಸುಸ್ತಾದಾಗ ಅಥವಾ ನರಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯುಂಟಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪದೇ ಪದೇ ಕಾಣಿಸಿಕೊಳ್ಳುವ ಕೈಕಾಲು ಸೆಳೆತದಿಂದ ಅಪಾಯ ಇನ್ನಷ್ಟು ಹೆಚ್ಚಬಹುದು.

ನರಗಳ ಮೇಲೆ ಒತ್ತಡ ಬಿದ್ದಾಗ ರಕ್ತ ಪೂರೈಕೆ ನಿಲ್ಲುತ್ತದೆ ಅಥವಾ ರಕ್ತ ಪರಿಚಲನೆಗೆ ಅಡೆತಡೆ ಉಂಟಾಗುತ್ತವೆ. ನರದ ಮೇಲೆ ಒತ್ತಡ ಉಂಟಾದಾಗ ಕೈಕಾಲು ಸೆಳೆತ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕೈ ಕಾಲು ಸೆಳೆತ ಆಗಾಗ ಕಾಣಿಸಿಕೊಳ್ಳುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಿಸಬೇಡಿ.

ಕೆಲವರಿಗೆ ಐದು ನಿಮಿಷ ಕೈ ಸೆಳೆತ ಉಂಟಾದಂತೆ ಅನಿಸಿದರೂ ಬಳಿಕ ಕಡಿಮೆಯಾಗುತ್ತದೆ. ಇನ್ನು ಕೆಲವರಿಗೆ ಪದೇ ಪದೇ ಕೈ ಸೆಳೆತ ಕಾಣಿಸಿಕೊಳ್ಳುವುದು ಇಲ್ಲವೇ ದಿನಪೂರ್ತಿ ಸೆಳೆತ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಮಲಗಿ ಎದ್ದಾಕ್ಷಣ ಕೈ ಹಿಡಿದಂತಾಗುತ್ತದೆ. ಇದು ರಕ್ತದ ಒತ್ತಡದಿಂದ ಹಾಗೂ ನರಗಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ.

ಕಾಲು ಸೆಳೆತ ಸಮಸ್ಯೆಗೆ ಕಾರಣವೇನು?

ಪೋಷಕಾಂಶ ಕೊರತೆ: ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯಿಂದಲೂ ಕಾಲಿನ ಸೆಳೆತ ಕಂಡು ಬರುತ್ತದೆ.  ವಿಟಮಿನ್ ಡಿ 3, ಸತು, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 12 ಕೊರತೆಗಳು ಸ್ನಾಯು ಸೆಳೆತಕ್ಕೆ ಕಾರಣವಾಗುತ್ತವೆ. ಈ ಪೋಷಕಾಂಶಗಳು ಸ್ನಾಯುವಿನ ಕಾರ್ಯ ಮತ್ತು ನರಗಳ ಚಟುವಟಿಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

ನಿರ್ಜಲೀಕರಣ: ನಿರ್ಜಲೀಕರಣದಿಂದ ರಕ್ತದಲ್ಲಿನ ಎಲೆಕ್ಟ್ರೋಲೈಟ್ ಅಸಮತೋಲನ ಹೆಚ್ಚಾಗುತ್ತದೆ, ಇದು ಕಾಲುಗಳಲ್ಲಿ ಸೆಳೆತ ಉಂಟು ಮಾಡುತ್ತದೆ. ಉಪವಾಸ ಮಾಡುವಾಗ, ವ್ಯಾಯಾಮ ಮಾಡುವಾಗ ಆಗಾಗ್ಗೆ ನೀರು ಕುಡಿಯುವುದು ಮುಖ್ಯವಾಗುತ್ತದೆ.

ವಿಶ್ರಾಂತಿ ಇಲ್ಲದಿರುವುದು: ದೇಹಕ್ಕೆ ವಿಶ್ರಾಂತಿ ನೀಡದೆ ಕಠಿಣ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಗಳನ್ನು ಮಾಡುವುದೂ ಕೂಡ ಕೈ-ಕಾಲುಗಳ ಸೆಳೆತಕ್ಕೆ ಕಾರಣವಾಗಬಹುದು. ಸ್ನಾಯುಗಳ ಚೇತರಿಕೆಗೆ ವಿಶ್ರಾಂತಿ ಅತ್ಯಗತ್ಯ.

ಔಷಧಿಗಳು ಮತ್ತು ಆರೋಗ್ಯ ಸ್ಥಿತಿ: ಮಧುಮೇಹ ಔಷಧಿಗಳು ಮತ್ತು ಥೈರಾಯ್ಡ್-ಸಂಬಂಧಿತ ಔಷಧಿಗಳಂತಹ ಕೆಲವು ಔಷಧಿಗಳು, ಹಾಗೆಯೇ ಅತಿಯಾದ ಆಲ್ಕೊಹಾಲ್ ಸೇವನೆಯು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಭಾರೀ ರಾಸಾಯನಿಕ ಔಷಧಗಳನ್ನು ಒಳಗೊಂಡಿರುವ ಕಿಮೊಥೆರಪಿ ಮತ್ತು ವಿಕಿರಣದಂತಹ ಚಿಕಿತ್ಸೆಗಳು ನರರೋಗ ಮತ್ತು ಸ್ನಾಯುವಿನ ಸೆಳೆತಕ್ಕೆ ಕಾರಣವಾಗುತ್ತದೆ.

ಪರಿಹಾರವೇನು?..
ಎಪ್ಸಮ್ ಸಾಲ್ಟ್ ಮತ್ತು ಬೆಚ್ಚಗಿನ ನೀರಿನ ಬಳಕೆ
ಬಕೆಟ್ ನಲ್ಲಿ ಬೆಚ್ಚಿಗಿನ ನೀರು ಹಾಕಿ ಅದಕ್ಕೆ ಸುಮಾರು 50 ರಿಂದ 100 ಗ್ರಾಂ ಎಪ್ಸಮ್ ಉಪ್ಪನ್ನು ಸೇರಿಸಿ. ಮಲಗುವ ಮುನ್ನ 15 ನಿಮಿಷಗಳ ಕಾಲ ನಿಮ್ಮ ಕಾಲುಗಳನ್ನು ಈ ಬೆಚ್ಚಗಿನ ನೀರಿನಲ್ಲಿ ಇರಿಸಿ. ಇದು ನಿಮ್ಮ ಕಾಲುಗಳಿಗೆ ವಿಶ್ರಾಂತಿ ನೀಡುತ್ತದೆ.

ವ್ಯಾಯಾಮ ಮತ್ತು ಯೋಗ:
ಪ್ರತಿನಿತ್ಯವೂ ನಡೆದರೆ, ಅದರಿಂದ ಕಾಲುಗಳಲ್ಲಿನ ಸ್ನಾಯುಗಳಿಗೆ ಬಲ ಬರುವುದು ಮತ್ತು ರಕ್ತ ಸಂಚಾರವು ಉತ್ತಮವಾಗುವುದು. ದಿನಕ್ಕೆ ಕನಿಷ್ಠ 30 ನಿಮಿಷ ಕಾಲ ವಾರಕ್ಕೆ ಐದು ದಿನ ನಡೆಯಬೇಕು ಎಂದು ತಜ್ಞರು ಹೇಳುವರು. ಓಡುವುದು, ಈಜುವುದು, ಜಾಗಿಂಗ್, ಇತರ ಕೆಲವೊಂದು ವ್ಯಾಯಾಮಗಳನ್ನು ಮಾಡಿ. ಯೋಗಾಭ್ಯಾಸವೂ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.

ಸಾಕಷ್ಟು ವಿಶ್ರಾಂತಿ ಪಡೆಯಿರಿ:
ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡಿ. ಶವಾಸನ ಮಾಡಿ. ಉತ್ತಮವಾಗಿ ನಿದ್ರೆ ಮಾಡಿ. ಇದು ನಿಮ್ಮ ದೇಹದವನ್ನು ಸ್ವಯಂ-ಗುಣಪಡಿಸುವ ಕಾರ್ಯವಿಧಾನವಾಗಿದೆ.

ಎಣ್ಣೆಯಿಂದ ಮಸಾಜ್ ಮಾಡಿ:
ನೋವು ಸತತವಾಗಿದ್ದರೆ ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಆಲಿವ್ ತೈಲವನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದರಿಂದ ಕಾಲುಗಳಿಗೆ ದಿನದಲ್ಲಿ ಎರಡು ಸಲ 10-15 ನಿಮಿಷ ಕಾಲ ಮಸಾಜ್ ಮಾಡಿ. ಇದರಿಂದ ರಕ್ತ ಸಂಚಾರವು ಉತ್ತಮವಾಗುವುದು ಮತ್ತು ನೋವು, ಉರಿಯೂತ ಹಾಗೂ ಊತ ಕಡಿಮೆ ಆಗುವುದು.

​ದ್ರವಾಂಶ ಸೇವನೆ ಮಾಡಿ:
ಕಾಲುಗಳಲ್ಲಿನ ಸ್ನಾಯು ಸೆಳೆತಕ್ಕೆ ನಿರ್ಜಲೀಕರಣವು ಪ್ರಮುಖ ಕಾರಣ. ಹೀಗಾಗಿ ನೀರಿನಾಂಶ ಸೇವನೆ ಹೆಚ್ಚು ಮಾಡಿ. ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡಿದರೆ, ಅದು ದೇಹವನ್ನು ಹೈಡ್ರೇಟ್ ಆಗಿಡುವುದು.

ಕಾಲುಗಳನ್ನು ಹೆಚ್ಚು ವಿಸ್ತಾರ ಮಾಡಿ:
ಇದು ಕಾಲುಗಳಿಗೆ ಸಂಬಂಧಪಟ್ಟ ಒಂದು ವ್ಯಾಯಾಮ ಎಂದು ನೀವು ತಿಳಿದುಕೊಳ್ಳಬಹುದು. ನಿಮಗೆ ರಾತ್ರಿಯ ಸಮಯದಲ್ಲಿ ಪದೇಪದೇ ಕಾಲುಗಳ ಸೆಳೆತ ಕಂಡುಬರುವ ಸಾಧ್ಯತೆ ಇದ್ದರೆ, ನೀವು ಮಲಗಲು ಹೋಗುವ ಮುಂಚೆ ನಿಮ್ಮ ಕಾಲುಗಳು ಹಾಗೂ ತೊಡೆಯ ಭಾಗವನ್ನು ಸ್ವಲ್ಪ ವಿಸ್ತರಿಸಿ ವ್ಯಾಯಾಮದ ರೀತಿ ಸುಮಾರು 15 ನಿಮಿಷಗಳ ಕಾಲ ಮಾಡಿ. ಇದು ನಿಮ್ಮ ಕಾಲುಗಳ ಸೆಳೆತದ ಪ್ರಮಾಣವನ್ನು ತಗ್ಗಿಸುವುದರ ಜೊತೆಗೆ ಒಂದು ವೇಳೆ ಸೆಳೆತ ಉಂಟಾದ ಸಂದರ್ಭದಲ್ಲಿ ನಿಮಗೆ ಅಷ್ಟು ನೋವು ಇರುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com