ಮೂಳೆಗಳು ಮತ್ತು ಕೀಲುಗಳು ನಮ್ಮ ದೇಹದ ರಚನೆಗೆ ಮೂಲಭೂತ ಅಗತ್ಯಗಳು. ಅಲ್ಲದೆ, ನಮ್ಮ ಅಂಗಗಳನ್ನು ರಕ್ಷಿಸುವಲ್ಲಿ, ನಮ್ಮ ಸ್ನಾಯುಗಳನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಕ್ಯಾಲ್ಸಿಯಂ ಅನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ, ನಮ್ಮ ದೇಹಕ್ಕೆ ಮೂಳೆ ಆರೈಕೆ ಅತ್ಯಗತ್ಯ.
30 ವರ್ಷ ವಯಸ್ಸಿನವರೆಗೆ, ನಮ್ಮ ದೇಹದ ಮೂಳೆಗಳು ಆರೋಗ್ಯವಾಗಿರುತ್ತವೆ. ನಂತರ ದಿನಕಳೆದಂತೆ ಆಸ್ಟಿಯೊಪೊರೋಸಿಸ್, ಆಸ್ಟಿಯೋಪೆಟ್ರೋಸಿಸ್ ಮತ್ತು ಆಸ್ಟಿಯೋಮಲೇಶಿಯಾದಂತಹ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಡಾ. ಚೇತನಾ ಡಿ, ತನ್ಸಲ್ಟೆಂಟ್, ರೂಮಟಾಲಜಿ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು. ಈ ಅನಾರೋಗ್ಯಕ್ಕೀಡಾದ ಮೂಳೆಗಳು ದುರ್ಬಲವಾಗಿರುತ್ತವೆ ಮತ್ತು ಮುರಿತಗಳು ಮತ್ತು ಹಾನಿಗಳಿಗೆ ಕಾರಣವಾಗುತ್ತವೆ. ವಯಸ್ಸಾದಂತೆ ಮೂಳೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳು
* ನೀವು ಸೇವಿಸುವ ಕ್ಯಾಲ್ಸಿಯಂ ಪ್ರಮಾಣ: ಕಡಿಮೆ ಕ್ಯಾಲ್ಸಿಯಂ ಆಹಾರವು ಮೂಳೆ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. ಆರಂಭಿಕ ಮೂಳೆಯ ನಷ್ಟ ಮತ್ತು ಮೂಳೆ ಮುರಿತದ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ
* ದೈಹಿಕ ಚಟುವಟಿಕೆ: ದೈಹಿಕ ಚಟುವಟಿಕೆಯ ಕೊರತೆಯು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ದೈಹಿಕವಾಗಿ ನಿಷ್ಕ್ರಿಯ ಜನರು ಆಸ್ಟಿಯೊಪೊರೋಸಿಸ್‌ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
* ಆಲ್ಕೋಹಾಲ್ ಮತ್ತು ತಂಬಾಕು ಸೇವನೆ: ಭಾರಿ ಪ್ರಮಾಣದ ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಪುರುಷರು ಮತ್ತು ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ.
* ಲಿಂಗ: ಕಡಿಮೆ ಮೂಳೆ ಅಂಗಾಂಶದಿಂದಾಗಿ ಪುರುಷರಿಗಿಂತ ಮಹಿಳೆಯರು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೊಂದಿರುತ್ತಾರೆ
* ಎತ್ತರ ಮತ್ತು ದೇಹದ ರಚನೆ: ನೀವು ಅತ್ಯಂತ ತೆಳ್ಳಗಿದ್ದರೆ (19 ಅಥವಾ ಅದಕ್ಕಿಂತ ಕಡಿಮೆ BMI ನೊಂದಿಗೆ) ಅಥವಾ ಕಡಿಮೆ ಮೂಳೆ ದ್ರವ್ಯರಾಶಿಯ ಕಾರಣದಿಂದಾಗಿ ಸಣ್ಣ ದೇಹದ ಚೌಕಟ್ಟನ್ನು ಹೊಂದಿದ್ದರೆ ನೀವು ಕಳಪೆ ಮೂಳೆ ಆರೋಗ್ಯದ ಅಪಾಯವನ್ನು ಹೊಂದಿರುವಿರಿ.
* ವಯಸ್ಸು: ವಯಸ್ಸಾಗಲು ಪ್ರಾರಂಭಿಸಿದ ನಂತರ ಮೂಳೆಗಳು ತೆಳುವಾಗುತ್ತವೆ ಮತ್ತು ದುರ್ಬಲವಾಗುತ್ತವೆ.
* ಕುಟುಂಬದ ಇತಿಹಾಸ: ಮೂಳೆ ಮುರಿತದ ಕುಟುಂಬದ ಇತಿಹಾಸವನ್ನು ಹೊಂದಿದ್ದರೆ ಅಥವಾ ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಿರುವ ಕುಟುಂಬ ಅಥವಾ ಒಡಹುಟ್ಟಿದವರನ್ನು ಹೊಂದಿದ್ದರೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ.
* ಹಾರ್ಮೋನ್ ಮಟ್ಟಗಳು: ಥೈರಾಯ್ಡ್ ಹಾರ್ಮೋನುಗಳ ಹೆಚ್ಚಳದಂತಹ ಸಮಸ್ಯೆಗಳು ಮೂಳೆ ನಷ್ಟಕ್ಕೆ ಕಾರಣವಾಗಬಹುದು. ಮಹಿಳೆಯರಲ್ಲಿ, ಋತುಬಂಧದ ಸಮಯದಲ್ಲಿ ಈಸ್ಟ್ರೊಜೆನ್ ಹಾರ್ಮೋನು ಮಟ್ಟವು ಕಡಿಮೆಯಾಗುವುದರಿಂದ ಮೂಳೆಯ ಹಾನಿಯು ಹೆಚ್ಚಾಗಬಹುದು. ದೀರ್ಘಕಾಲದವರೆಗೆ ಋತುಚಕ್ರದ ಅನುಪಸ್ಥಿತಿಯು ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಅಪಾಯ ಹೆಚ್ಚಿಸುತ್ತದೆ. ಹಾಗೆಯೇ, ಪುರುಷರಲ್ಲಿ ಕಡಿಮೆ ಟೆಸ್ಟೋಸ್ಟೆರಾನ್ ಮೂಳೆ ಹಾನಿಗೆ ಕಾರಣವಾಗಬಹುದು.
* ತಿನ್ನುವ ಅಸ್ವಸ್ಥತೆಗಳು ಮತ್ತು ಔಷಧಿಗಳು: ಆಹಾರ ಸೇವನೆಯನ್ನು ನಿರ್ಬಂಧಿಸುವುದು ಮತ್ತು ಕಡಿಮೆ ತೂಕವು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ತೂಕ ನಷ್ಟ ಶಸ್ತ್ರಚಿಕಿತ್ಸೆ ಮತ್ತು ಸೆಲಿಯಾಕ್ ಕಾಯಿಲೆಯಂತಹ ಪರಿಸ್ಥಿತಿಗಳು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವ ನಿಮ್ಮ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಪ್ರೆಡ್ನಿಸೋನ್, ಕಾರ್ಟಿಸೋನ್, ಪ್ರೆಡ್ನಿಸೋಲೋನ್ ಮತ್ತು ಡೆಕ್ಸಾಮೆಥಾಸೊನ್‌ನಂತಹ ಕಾರ್ಟಿಕೊಸ್ಟೆರಾಯ್ಡ್ ಔಷಧಿಗಳ ದೀರ್ಘಾವಧಿಯ ಬಳಕೆಯೂ ಮೂಳೆ ಹಾನಿಗೆ ಕಾರಣವಾಗಬಹುದು.
ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಬಳಸಲಾಗುವ ಅರೋಮ್ಯಾಟೇಸ್ ಇನ್ಹಿಬಿಟರ್‌ಗಳು, ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್‌ಗಳು, ಫೆನಿಟೋಯಿನ್ (ಡಿಲಾಂಟಿನ್) ಮತ್ತು ಫಿನೊಬಾರ್ಬಿಟಲ್ ಮತ್ತು ಪ್ರೋಟಾನ್ ಪಂಪ್ ಇನ್‌ಹಿಬಿಟರ್‌ಗಳಂತಹ ಕೆಲವು ರೋಗ ವಿರೋಧಿ ಔಷಧಿಗಳು ಮತ್ತು ಪ್ರೋಟಾನ್ ಪಂಪ್ ಇನ್‌ಹಿಬಿಟರ್‌ಗಳು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ: ಸರ್ವೈಕಲ್ ಸ್ಪಾಂಡಿಲೈಟಿಸ್
ನಿಮ್ಮ ಮೂಳೆಯ ಆರೋಗ್ಯವನ್ನು ಹೇಗೆ ಸುಧಾರಿಸಬಹುದು ಮತ್ತು ಅವುಗಳ ಕಾಳಜಿ ವಹಿಸುವುದು ಹೇಗೆ?
* ವಿಟಮಿನ್ ಡಿ ಸೇವನೆಯನ್ನು ಹೆಚ್ಚಿಸಿ: ಮೂಳೆಯ ಆರೋಗ್ಯವನ್ನು ಸುಧಾರಿಸಲು ವಿಟಮಿನ್ ಡಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ನಿಮ್ಮ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಕೊರತೆಯು ಯುವ ಜನರು ಮತ್ತು ವಯಸ್ಕರಲ್ಲಿ ಸಾಮಾನ್ಯವಾಗಿದೆ. ವಿಟಮಿನ್ ಡಿ ಕಡಿಮೆ ಇರುವುದು ಮೂಳೆ ಸಾಂದ್ರತೆಯನ್ನು ಕಡಿಮೆ ಮಾಡಲು ಮತ್ತು ಮೂಳೆಗೆ ಹಾನಿ ಉಂಟುಮಾಡುವ ಅಪಾಯವನ್ನು ಹೆಚ್ಚಿಸುತ್ತದೆ.
ವಿಟಮಿನ್ ಡಿ ಸೇವನೆಯನ್ನು ಹೆಚ್ಚಿಸುವ ಮಾರ್ಗ...
- ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ಹೆಚ್ಚಿಸಿ ಮತ್ತು ನಿಮ್ಮ ಕೈಗಳು, ಕಾಲುಗಳು ಮತ್ತು ಮುಖದ ಮೇಲೆ ವಾರದಲ್ಲಿ ಎರಡರಿಂದ ಮೂರು ದಿನಗಳವರೆಗೆ ಕನಿಷ್ಠ 5 ರಿಂದ 10 ನಿಮಿಷಗಳವರೆಗೆ ಬಿಸಿಲು ಬೀಳುವಂತೆ ನೋಡಿಕೊಳ್ಳಿ.
- ಚೀಸ್, ಯಕೃತ್ತು ಮತ್ತು ಫ್ಯಾಟಿ ಫಿಶ್‌ಗಳಂತಹ ಆಹಾರ ಪೂರಕಗಳನ್ನು ಸೇವಿಸಿ.
* ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿ: ವಾಕಿಂಗ್, ಜಾಗಿಂಗ್, ರನ್ನಿಂಗ್ ಮತ್ತು ಮೆಟ್ಟಿಲುಗಳನ್ನು ಹತ್ತುವುದು ಮುಂತಾದ ಚಟುವಟಿಕೆಗಳು ನಿಮಗೆ ಬಲಿಷ್ಠ ಮೂಳೆಗಳನ್ನು ರೂಪಿಸಲು ಮತ್ತು ನಿಮ್ಮ ದೇಹವನ್ನು ಸಕ್ರಿಯವಾಗಿರಿಸಲು ಸಹಾಯ ಮಾಡುತ್ತದೆ. ಇವು ಮೂಳೆ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸಲು ದೇಹಕ್ಕೆ ಸಹಾಯ ಮಾಡುತ್ತದೆ. ದಿನಕ್ಕೆ 30 ರಿಂದ 45 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ನಿಮ್ಮ ಮೂಳೆಗಳನ್ನು ಬಲಪಡಿಸಬಹುದು ಮತ್ತು ಅನೇಕ ಮೂಳೆ ಕಾಯಿಲೆಗಳಿಂದ ದೂರವಿರಬಹುದು.
* ಸಮತೋಲಿತ ಆಹಾರ ಮತ್ತು ಆರೋಗ್ಯಕರ ತೂಕ, ಜೀವನಶೈಲಿಯನ್ನು ಕಾಪಾಡಿಕೊಳ್ಳಿ: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕಡಿಮೆ ತೂಕ ಅಥವಾ ಅಧಿಕ ತೂಕವನ್ನು ತಪ್ಪಿಸಬೇಕು. ಏಕೆಂದರೆ, ಎರಡೂ ರೀತಿಯೂ ಮೂಳೆಗಳು ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.
ವಿಟಮಿನ್ ಸಿ, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರಗಳು ಮೂಳೆಯ ಬಲವನ್ನು ಹೆಚ್ಚಿಸುತ್ತವೆ. ಕಡಿಮೆ ಪ್ರೋಟೀನ್ ಸೇವನೆಯು ಮೂಳೆಯಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ಮೂಳೆ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಪ್ರೋಟೀನ್ ಸೇವನೆ ಕೂಡ ರಕ್ತದಲ್ಲಿ ಅಸಿಡಿಟಿಗೆ ಕಾರಣವಾಗುತ್ತದೆ ಎಂಬ ಅಂಶವನ್ನು ನೆನಪಿನಲ್ಲಿಡಬೇಕು. ಆದ್ದರಿಂದ, ವೈದ್ಯರು ಸೂಚಿಸಿದಂತೆ ಸರಿಯಾದ ಪ್ರಮಾಣದ ಪ್ರೋಟೀನ್ ಅನ್ನು ಮಾತ್ರ ಸೇವಿಸಿ. ಕ್ಯಾಲ್ಸಿಯಂ ಭರಿತ ಆಹಾರ ಸೇವನೆಯು ಹಳೆಯ ಮೂಳೆ ಕೋಶಗಳನ್ನು ವೇಗವಾಗಿ ಹೊಸದರೊಂದಿಗೆ ಬದಲಾಯಿಸಲು ಸಹಾಯ ಮಾಡುತ್ತದೆ.
* ಆಟೋಮೇಟೆಡ್ ಜೀವನವನ್ನು ಬಿಟ್ಟುಬಿಡಿ: ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಫೋನ್‌ಗಳಲ್ಲಿ ಬಟನ್ ಒತ್ತಿದರೆ ಸಾಕು ಎಲ್ಲದಕ್ಕೂ ಪ್ರವೇಶಿಸಬಹುದು. ಜನರು ಹಿಂದೆಂದಿಗಿಂತಲೂ ಈಗ ತಾವು ಕುಳಿತಲ್ಲಿಗೆ, ನಿಂತಲ್ಲಿಗೆ ಸೀಮಿತವಾಗಿದ್ದಾರೆ ಮತ್ತು ನಡೆಯುವುದು ಅಥವಾ ಮೆಟ್ಟಿಲುಗಳನ್ನು ಹತ್ತುವುದನ್ನು ತಪ್ಪಿಸುತ್ತಾರೆ. ಬದಲಿಗೆ ಲಿಫ್ಟ್‌ಗಳನ್ನು ಬಳಸುತ್ತಾರೆ. ಇಂತಹ ಅಭ್ಯಾಸಗಳು ಆಸ್ಟಿಯೊಪೊರೋಸಿಸ್‌ನಂತಹ ಕಾಯಿಲೆಗಳ ಹೊರೆಯನ್ನು ಹೆಚ್ಚಿಸುತ್ತಿವೆ ಮತ್ತು ಎಲ್ಲರಿಗೂ ದೈಹಿಕ ಚಟುವಟಿಕೆಯ ಅಗತ್ಯವನ್ನು ಹೆಚ್ಚಿಸಿವೆ.
ನಿಮ್ಮನ್ನು ಸಕ್ರಿಯವಾಗಿ ಮತ್ತು ಫ್ಲೆಕ್ಸಿಬಲ್ ಆಗಿ ಇಟ್ಟುಕೊಳ್ಳುವುದು ನಿಮ್ಮ ಮೇಜಿನ ಕೆಲಸದಿಂದ ವಿರಾಮ ನೀಡುತ್ತದೆ ಮತ್ತು ಹಲವಾರು ಮೂಳೆ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ವೃದ್ಧಾಪ್ಯದಲ್ಲಿ, ತನ್ನನ್ನು ತಾನೇ ಪ್ರೇರೇಪಿಸಿಕೊಳ್ಳುವುದು ಮತ್ತು ಆರೋಗ್ಯಕರ ಆಹಾರ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ. ಯೋಗ, ಧ್ಯಾನ ಮತ್ತು ನಡಿಗೆಯಂತಹ ಚಟುವಟಿಕೆಗಳು ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡುತ್ತವೆ ಮತ್ತು ದೇಹವನ್ನು ಸಕ್ರಿಯವಾಗಿ ಇರಿಸಬಹುದು. ನೀವು ಎಷ್ಟು ಹೆಚ್ಚು ಕೆಲಸ ಮಾಡುತ್ತೀರೋ ಅಷ್ಟು ನಿಮಗೆ ಮತ್ತು ನಿಮ್ಮ ಮೂಳೆಗಳಿಗೆ ಉತ್ತಮವಾಗಿರುತ್ತದೆ.
ಕೊನೆಯದಾಗಿ, ನೀವು ಯಾವುದೇ ಮೂಳೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮೂಳೆ ಸಾಂದ್ರತೆಯ ಪರೀಕ್ಷೆಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಇದರಿಂದ ಅದು ಆಸ್ಟಿಯೊಪೊರೋಸಿಸ್ ಅನ್ನು ನಿರ್ಧರಿಸಲು ಅಥವಾ ತಳ್ಳಿಹಾಕಲು ನಿಮಗೆ ಸಹಾಯ ಮಾಡುತ್ತದೆ.
Advertisement