

ಇತ್ತೀಚೆಗೆ ಥೈರಾಯ್ಡ್ ಸಮಸ್ಯೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿ ಪರಿಣಮಿಸಿದೆ. ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲಿಯೂ ಸಾಮಾನ್ಯವಾಗುತ್ತಿದೆ.
ದಿನಪೂರ್ತಿ ದಣಿವು, ತೂಕ ಏರಿಕೆ, ಕೂದಲು ಉದುರುವುದು, ಚಳಿಯನ್ನು ಹೆಚ್ಚು ಅನುಭವಿಸುವುದು, ಮನಸ್ಸಿನ ಅಸ್ಥಿರತೆ ಇವೆಲ್ಲವೂ ಕೆಲವೊಮ್ಮೆ ಥೈರಾಯ್ಡ್ ಅಸಮತೋಲನದ ಲಕ್ಷಣಗಳಾಗಿರಬಹುದು.
ಕುತ್ತಿಗೆಯ ಭಾಗದಲ್ಲಿರುವ ಚಿಟ್ಟೆಯಾಕಾರದ ಸಣ್ಣ ಗ್ರಂಥಿಯಾದ ಥೈರಾಯ್ಡ್ ದೇಹದ ಮೆಟಾಬಾಲಿಸಂ, ಶಕ್ತಿ, ಹಾರ್ಮೋನ್ ಸಮತೋಲನ, ನಿದ್ರೆ ಮತ್ತು ಮನೋಭಾವವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಇಂದಿನ ವೇಗದ ಜೀವನಶೈಲಿ, ಒತ್ತಡ, ಜಂಕ್ ಫುಡ್, ನಿದ್ರಾಹೀನತೆ ಮತ್ತು ವ್ಯಾಯಾಮದ ಕೊರತೆ ಥೈರಾಯ್ಡ್ ಆರೋಗ್ಯವನ್ನು ಹಾಳು ಮಾಡುತ್ತಿವೆ. ವಿಶೇಷವಾಗಿ ಮಹಿಳೆಯರಲ್ಲಿ ಹಾಶಿಮೋಟೋಸ್ ಮತ್ತು ಗ್ರೇವ್ಸ್ ರೋಗದಂತಹ ಆಟೋಇಮ್ಯೂನ್ ಸಮಸ್ಯೆಗಳು ಹೆಚ್ಚುತ್ತಿರುವುದು ಗಮನಾರ್ಹ. ಆದರೆ. ಕೆಲವು ಸರಳ ಜೀವನಶೈಲಿ ಬದಲಾವಣೆಗಳಿಂದ ಥೈರಾಯ್ಡ್ ಆರೋಗ್ಯವನ್ನು ಸಹಜವಾಗಿ ಕಾಪಾಡಿಕೊಳ್ಳಬಹುದು.
ಥೈರಾಯ್ಡ್ ಎಂದರೇನು? ಅದರ ಕೆಲಸವೇನು?
ಥೈರಾಯ್ಡ್ ಎನ್ನುವುದು ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಸಣ್ಣ ಗ್ರಂಥಿ. ಇದು T3 (ಟ್ರೈಐಯೋಡೋಥೈರೋನಿನ್) ಮತ್ತು T4 (ಥೈರಾಕ್ಸಿನ್) ಎಂಬ ಪ್ರಮುಖ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.
ಈ ಹಾರ್ಮೋನುಗಳು ದೇಹದ ಚಯಾಪಚಯ ಕ್ರಿಯೆ, ಹೃದಯದ ಬಡಿತ, ದೇಹದ ಉಷ್ಣತೆ, ಶಕ್ತಿಯ ಮಟ್ಟ, ಜೀರ್ಣಕ್ರಿಯೆ, ಮೆದುಳಿನ ಕಾರ್ಯಕ್ಷಮತೆ, ಸ್ನಾಯುಗಳ ಆರೋಗ್ಯ ಹಾಗೂ ಹಾರ್ಮೋನುಗಳ ಸಮತೋಲನವನ್ನು ನಿಯಂತ್ರಿಸುತ್ತವೆ. ಥೈರಾಯ್ಡ್ ಸರಿಯಾಗಿ ಕೆಲಸ ಮಾಡದಿದ್ದರೆ ದೇಹದ ಸಂಪೂರ್ಣ ವ್ಯವಸ್ಥೆಯೇ ನಿಧಾನಗೊಳ್ಳಬಹುದು.
ಥೈರಾಯ್ಡ್ ಸಮಸ್ಯೆ ಹೆಚ್ಚುತ್ತಿರುವುದೇಕೆ?
ಆಧುನಿಕ ಜೀವನಶೈಲಿ ಥೈರಾಯ್ಡ್ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ನಿರಂತರ ಒತ್ತಡ, ಅಸಮರ್ಪಕ ಆಹಾರ ಪದ್ಧತಿ, ಸಂಸ್ಕರಿತ ಆಹಾರಗಳ ಸೇವನೆ, ವ್ಯಾಯಾಮದ ಕೊರತೆ, ನಿದ್ರಾಹೀನತೆ, ಮಾಲಿನ್ಯ ಹಾಗೂ ಹಾರ್ಮೋನು ಅಸಮತೋಲನ ಪ್ರಮುಖ ಕಾರಣಗಳಾಗಿವೆ.
ಇದಲ್ಲದೆ, ಕರುಳಿನ ಆರೋಗ್ಯ ಹದಗೆಟ್ಟಾಗ ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗಿ ಆಟೋಇಮ್ಯೂನ್ ಕಾಯಿಲೆಗಳಾದ ಹಶಿಮೊಟೊ ಥೈರಾಯ್ಡಿಟಿಸ್ ಹಾಗೂ ಗ್ರೇವ್ಸ್ ಕಾಯಿಲೆ ಬೆಳೆಯುವ ಸಾಧ್ಯತೆಯೂ ಹೆಚ್ಚುತ್ತದೆ.
ಸಮಸ್ಯೆ ದೂರಾಗಿಸುವುದು ಹೇಗೆ... ಇಲ್ಲಿದೆ ಕೆಲ ಟಿಪ್ಸ್...
ನಿಧಾನವಾಗಿ ಆಹಾರ ಸೇವಿಸಿ, ನಿಮ್ಮ ಗಮನ ಆಹಾರದ ಮೇಲಿರಲಿ
ಇಂದಿನ ವೇಗದ ಜೀವನದಲ್ಲಿ ಅನೇಕರು ಮೊಬೈಲ್ ನೋಡುತ್ತಾ ಅಥವಾ ಟಿವಿ ವೀಕ್ಷಿಸುತ್ತಾ ತ್ವರಿತವಾಗಿ ಊಟ ಮಾಡುವ ಅಭ್ಯಾಸ ಹೊಂದಿದ್ದಾರೆ. ಇದು ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಲು ಕಾರಣವಾಗುತ್ತದೆ.
ಮೆದುಳು ಹೊಟ್ಟೆ ತುಂಬಿರುವ ಸಂದೇಶವನ್ನು ಸ್ವೀಕರಿಸಲು ಸುಮಾರು 20 ನಿಮಿಷಗಳ ಸಮಯ ಬೇಕಾಗುತ್ತದೆ. ಆದ್ದರಿಂದ ಆಹಾರವನ್ನು ನಿಧಾನವಾಗಿ ಚೆನ್ನಾಗಿ ಜಗಿದು ತಿನ್ನುವುದು ಮುಖ್ಯ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೆಟಾಬಾಲಿಸಂ ನಿಧಾನವಾಗಿರುವ ಥೈರಾಯ್ಡ್ ಸಮಸ್ಯೆಯವರಲ್ಲಿ ಇದು ಇನ್ನಷ್ಟು ಅಗತ್ಯ.
ಆಹಾರ ಪದ್ಧತಿಯಲ್ಲಿ ಬದಲಾವಣೆ ಅಗತ್ಯ
ಥೈರಾಯ್ಡ್ ಆರೋಗ್ಯಕ್ಕಾಗಿ ನೈಸರ್ಗಿಕ ಮತ್ತು ಪೌಷ್ಟಿಕ ಆಹಾರ ಬಹಳ ಮುಖ್ಯ. ಬೇಯಿಸಿದ ತರಕಾರಿಗಳು, ಮೊಳಕೆ ಕಾಳುಗಳು, ಬೇಳೆಕಾಳುಗಳು, ಬೀಜಗಳು, ಮೊಟ್ಟೆ ಮತ್ತು ಪ್ರೋಟೀನ್‌ಯುಕ್ತ ಆಹಾರಗಳನ್ನು ಹೆಚ್ಚು ಸೇವಿಸಬೇಕು.
ವಿಶೇಷವಾಗಿ ಕ್ಯಾಬೇಜ್, ಬ್ರೋಕೋಲಿ, ಕಾಲಿಫ್ಲವರ್‌ಗಳಂತಹ ಗೋಯಿಟ್ರೋಜೆನಿಕ್ ತರಕಾರಿಗಳನ್ನು ಹಸಿಯಾಗಿ ತಿನ್ನುವುದಕ್ಕಿಂತ ಬೇಯಿಸಿ ಸೇವಿಸುವುದು ಉತ್ತಮ. ಆಟೋಇಮ್ಯೂನ್ ಥೈರಾಯ್ಡ್ ಸಮಸ್ಯೆಯಿದ್ದರೆ ಗ್ಲೂಟನ್ ಮತ್ತು ಹಾಲಿನ ಉತ್ಪನ್ನಗಳನ್ನು ಕಡಿಮೆ ಮಾಡುವುದರಿಂದ ಉರಿಯೂತ ತಗ್ಗಲು ಸಹಾಯವಾಗಬಹುದು.
ಅಗತ್ಯ ಪೋಷಕಾಂಶಗಳನ್ನು ಮರೆಯಬೇಡಿ
ಥೈರಾಯ್ಡ್ ಸರಿಯಾಗಿ ಕಾರ್ಯನಿರ್ವಹಿಸಲು ಕೆಲವು ಪೋಷಕಾಂಶಗಳು ಅತ್ಯಗತ್ಯ. ವಿಟಮಿನ್ D, ಸೆಲೆನಿಯಂ, ಜಿಂಕ್ ಮತ್ತು ಐಯೋಡಿನ್ ದೇಹದಲ್ಲಿ ಸಮರ್ಪಕವಾಗಿರಬೇಕು. ದಿನಕ್ಕೆ ಎರಡು ನೆನೆಸಿದ ಬ್ರೆಜಿಲ್ ನಟ್ಸ್ ಸೇವಿಸುವುದರಿಂದ ಸೆಲೆನಿಯಂ ದೊರೆಯುತ್ತದೆ. ಐಯೋಡಿನ್‌ಗಾಗಿ ಮಿತ ಪ್ರಮಾಣದ ಐಯೋಡೈಸ್ ಉಪ್ಪು ಅಥವಾ ಸಮುದ್ರ ಸಸ್ಯಗಳನ್ನು ಬಳಸಬಹುದು. ಇವು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಗೆ ಸಹಕಾರಿ.
ಉತ್ತಮ ನಿದ್ರೆ ಥೈರಾಯ್ಡ್ ಆರೋಗ್ಯದ ಕೀಲುಕೈ
ರಾತ್ರಿ 10ರಿಂದ ಬೆಳಗಿನ 3 ಗಂಟೆಯವರೆಗೆ ದೇಹ ಹಾರ್ಮೋನ್‌ಗಳನ್ನು ಸಮತೋಲನಗೊಳಿಸಿ ದುರಸ್ತಿ ಕಾರ್ಯ ನಡೆಸುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಮಲಗುವುದು ಅತ್ಯಗತ್ಯ. ಮಲಗುವ ಮುನ್ನ ಒಂದು ಅಥವಾ ಎರಡು ಗಂಟೆಗಳ ಕಾಲ ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್ ಬಳಕೆಯನ್ನು ತಪ್ಪಿಸಬೇಕು. ಶಾಂತ ವಾತಾವರಣ, ಕತ್ತಲೆಯ ಕೋಣೆ ಮತ್ತು ಆಳವಾದ ಉಸಿರಾಟ ಉತ್ತಮ ನಿದ್ರೆಗೆ ಸಹಕಾರಿಯಾಗುತ್ತವೆ.
ಪ್ರತಿದಿನ ಸ್ವಲ್ಪವಾದರೂ ವ್ಯಾಯಾಮ ಮಾಡಿ
ಥೈರಾಯ್ಡ್ ಆರೋಗ್ಯ ಕಾಪಾಡಲು ಕಠಿಣ ವರ್ಕೌಟ್ ಮಾಡುವ ಅವಶ್ಯಕತೆ ಇಲ್ಲ. ದಿನಕ್ಕೆ 30ರಿಂದ 45 ನಿಮಿಷಗಳ ಕಾಲ ನಡೆದಾಡುವುದು, ಯೋಗ ಅಥವಾ ಲಘು ವ್ಯಾಯಾಮ ಮಾಡಿದರೆ ಸಾಕು. ಇದು ರಕ್ತ ಸಂಚಾರವನ್ನು ಸುಧಾರಿಸಿ ಥೈರಾಯ್ಡ್ ಗ್ರಂಥಿಗೆ ಉತ್ತಮ ಪೋಷಕಾಂಶ ತಲುಪಲು ಸಹಾಯ ಮಾಡುತ್ತದೆ. ಜೊತೆಗೆ ಹಾರ್ಮೋನ್ ಸಮತೋಲನ ಕಾಪಾಡಲು ಸಹಕಾರಿ.
ಒತ್ತಡ ನಿಯಂತ್ರಣ ಬಹಳ ಮುಖ್ಯ
ಅತಿಯಾದ ಒತ್ತಡದಿಂದ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ ಥೈರಾಯ್ಡ್ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಆದ್ದರಿಂದ ಪ್ರತಿದಿನ ಕನಿಷ್ಠ 5ರಿಂದ 10 ನಿಮಿಷಗಳ ಕಾಲ ಧ್ಯಾನ, ಪ್ರಾಣಾಯಾಮ ಅಥವಾ ಆಳವಾದ ಉಸಿರಾಟ ಅಭ್ಯಾಸ ಮಾಡುವುದು ಉತ್ತಮ. ಮನಸ್ಸು ಶಾಂತವಾಗಿದ್ದರೆ ದೇಹವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಥೈರಾಯ್ಡ್ ಸಮಸ್ಯೆ ನಿರ್ಲಕ್ಷಿಸಬೇಡಿ
ಥೈರಾಯ್ಡ್ ಸಮಸ್ಯೆಗಳನ್ನು ಸಂಪೂರ್ಣವಾಗಿ ಜೀವನಶೈಲಿಯಿಂದಲೇ ಗುಣಪಡಿಸಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಆರೋಗ್ಯಕರ ಜೀವನಶೈಲಿ, ವೈದ್ಯರ ಸಲಹೆಯಂತೆ ಔಷಧೋಪಚಾರ ಮತ್ತು ನಿಯಮಿತ ತಪಾಸಣೆಗಳ ಮೂಲಕ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಮನುಷ್ಯನ ದೇಹವು ಅದ್ಭುತವಾದ ಸ್ವಯಂ-ಚಿಕಿತ್ಸಾ ಸಾಮರ್ಥ್ಯ ಹೊಂದಿದೆ. ಅದಕ್ಕೆ ಅಗತ್ಯವಾದ ಪೋಷಕಾಂಶ, ವಿಶ್ರಾಂತಿ ಮತ್ತು ಆರೈಕೆಯನ್ನು ನೀಡಿದರೆ ಆರೋಗ್ಯ ಸುಧಾರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅನೇಕರು ಜೀವನಶೈಲಿ ಬದಲಾವಣೆಗಳಿಂದ TSH ಮಟ್ಟವನ್ನು ನಿಯಂತ್ರಣಕ್ಕೆ ತಂದಿರುವ ಉದಾಹರಣೆಗಳಿವೆ.
ಆದ್ದರಿಂದ ಒಂದೇ ದಿನದಲ್ಲಿ ಎಲ್ಲವನ್ನೂ ಬದಲಾಯಿಸಲು ಪ್ರಯತ್ನಿಸದೇ, ಸಣ್ಣ ಹೆಜ್ಜೆಗಳಿಂದ ಆರಂಭಿಸುವುದು ಉತ್ತಮ. ಒಂದು ಆರೋಗ್ಯಕರ ಊಟ, ಉತ್ತಮ ನಿದ್ರೆ ಮತ್ತು ನಡಿಗೆ ನಿಮ್ಮ ಆರೋಗ್ಯದ ದಿಕ್ಕೇ ಬದಲಾಯಿಸಬಹುದು.
Advertisement