Chia Seeds: ಆರೋಗ್ಯ ಕಾಪಾಡುವ ಸೂಪರ್‌ಫುಡ್; ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ಅತಿಯಾಗಿ ಸೇವಿಸಿದರೆ ಏನಾಗುತ್ತದೆ..?

ವಿಶೇಷವಾಗಿ ತೂಕ ಇಳಿಸಲು ಬಯಸುವವರು, ಫಿಟ್ನೆಸ್‌ ಪಾಲಿಸುವವರು, ಡಯಟ್ ಅನುಸರಿಸುವವರು ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವವರಲ್ಲಿ ಚಿಯಾ ಸೀಡ್ಸ್'ಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ.
File photo
ಸಂಗ್ರಹ ಚಿತ್ರ
Updated on

ಇಂದಿನ ವೇಗದ ಜೀವನಶೈಲಿ, ಅನಿಯಮಿತ ಆಹಾರ ಪದ್ಧತಿ, ಜಂಕ್ ಫುಡ್ ಸೇವನೆ ಮತ್ತು ವ್ಯಾಯಾಮದ ಕೊರತೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ತೂಕ ಹೆಚ್ಚಳ, ಮಧುಮೇಹ, ರಕ್ತದೊತ್ತಡ, ಹೃದಯ ಸಮಸ್ಯೆ, ಜೀರ್ಣಕ್ರಿಯೆ ತೊಂದರೆಗಳು ಈಗ ಸಾಮಾನ್ಯವಾಗಿಬಿಟ್ಟಿವೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಕಾಪಾಡಲು ಜನರು ನೈಸರ್ಗಿಕ ಹಾಗೂ ಪೌಷ್ಟಿಕ ಆಹಾರಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ “ಸೂಪರ್‌ಫುಡ್” ಎಂಬ ಹೆಸರಿನಿಂದ ಭಾರೀ ಜನಪ್ರಿಯತೆ ಪಡೆದಿರುವ ಚಿಯಾ ಸೀಡ್ಸ್ (Chia Seeds) ಆರೋಗ್ಯ ಪ್ರಿಯರ ಮೊದಲ ಆಯ್ಕೆಯಾಗುತ್ತಿವೆ.

ಗಾತ್ರದಲ್ಲಿ ಅತಿ ಸಣ್ಣದಾಗಿದ್ದರೂ, ಚಿಯಾ ಸೀಡ್ಸ್ ಗಳಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಪೌಷ್ಟಿಕಾಂಶಗಳು ಅಡಗಿವೆ. ಒಮೆಗಾ-3 ಫ್ಯಾಟಿ ಆಸಿಡ್, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಐರನ್, ಮ್ಯಾಗ್ನೀಷಿಯಂ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳ ಸಮೃದ್ಧ ಮೂಲವಾಗಿರುವ ಈ ಬೀಜಗಳು ದೇಹದ ಒಟ್ಟು ಆರೋಗ್ಯ ಸುಧಾರಣೆಗೆ ಸಹಕಾರಿಯಾಗುತ್ತವೆ.

File photo
ಸಂಗ್ರಹ ಚಿತ್ರ

ವಿಶೇಷವಾಗಿ ತೂಕ ಇಳಿಸಲು ಬಯಸುವವರು, ಫಿಟ್ನೆಸ್‌ ಪಾಲಿಸುವವರು, ಡಯಟ್ ಅನುಸರಿಸುವವರು ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವವರಲ್ಲಿ ಚಿಯಾ ಸೀಡ್ಸ್'ಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ.

ಚಿಯಾ ಸೀಡ್ಸ್ ಗಳ ಮತ್ತೊಂದು ವಿಶೇಷತೆ ಎಂದರೆ ಇವುಗಳನ್ನು ವಿವಿಧ ರೀತಿಯಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ಹಿಡಿದು ಸ್ಮೂದಿ, ಹಾಲು, ಮೊಸರು, ಓಟ್ಸ್, ಸಲಾಡ್ ಹಾಗೂ ಡೆಸೆರ್ಟ್‌ಗಳಲ್ಲಿ ಬಳಸಬಹುದು. ಸರಿಯಾದ ಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸಿದರೆ ದೇಹಕ್ಕೆ ಅನೇಕ ಆರೋಗ್ಯ ಲಾಭಗಳನ್ನು ನೀಡುವ ಈ ಸೂಪರ್‌ಫುಡ್ ಬಗ್ಗೆ ತಿಳಿದುಕೊಳ್ಳೋಣ.

File photo
ಬೆಂಗಳೂರಿನಲ್ಲಿ ಸುಡು ಬಿಸಿಲು: ನಿರ್ಜಲೀಕರಣದಿಂದ ಮೂತ್ರಪಿಂಡ ಸಮಸ್ಯೆ ಹೆಚ್ಚಳ; ವೈದ್ಯರ ಸಲಹೆ ಇಲ್ಲಿದೆ..

ಏನಿದು ಚಿಯಾ ಸೀಡ್ಸ್..?

ಚಿಯಾ ಸೀಡ್ಸ್ Salvia Hispanica ಎಂಬ ಸಸ್ಯದಿಂದ ದೊರೆಯುವ ಬೀಜಗಳು. ಮೂಲತಃ ಮೆಕ್ಸಿಕೋ ಮತ್ತು ಮಧ್ಯ ಅಮೆರಿಕ ಪ್ರದೇಶಗಳಲ್ಲಿ ಬೆಳೆಯುವ ಈ ಸಸ್ಯದ ಬೀಜಗಳು ಸಾವಿರಾರು ವರ್ಷಗಳಿಂದ ಆಹಾರ ಪದಾರ್ಥವಾಗಿ ಬಳಸಲ್ಪಡುತ್ತಿವೆ. ಇವು ಸಾಮಾನ್ಯವಾಗಿ ಕಪ್ಪು, ಬಿಳಿ ಅಥವಾ ಬೂದು ಬಣ್ಣದಲ್ಲಿರುತ್ತವೆ.

ಚಿಯಾ ಬೀಜಗಳ ವಿಶೇಷತೆ ಎಂದರೆ, ಇವು ನೀರಿನಲ್ಲಿ ನೆನೆಸಿದಾಗ ಜೆಲ್‌ನಂತಹ ರೂಪಕ್ಕೆ ಬದಲಾಗುತ್ತವೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ ಹಾಗೂ ಹೊಟ್ಟೆ ತುಂಬಿದ ಅನುಭವ ಹೆಚ್ಚು ಸಮಯ ಇರುತ್ತದೆ.

ಚಿಯಾ ಬೀಜದಲ್ಲಿರುವ ಪೋಷಕಾಂಶಗಳು

ಒಮೆಗಾ-3 ಫ್ಯಾಟಿ ಆ್ಯಸಿಡ್, ಪ್ರೋಟೀನ್, ನಾರಿನಾಂಶ (Fiber), ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ, ಐರನ್, ಜಿಂಕ್, ಆ್ಯಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ದೇಹದ ಒಟ್ಟು ಆರೋಗ್ಯ ಕಾಪಾಡಲು ಇವು ಪ್ರಮುಖ ಪಾತ್ರ ವಹಿಸುತ್ತವೆ.

File photo
ಸಂಗ್ರಹ ಚಿತ್ರ

ಚಿಯಾ ಬೀಜ ತಿನ್ನುವ ಸರಿಯಾದ ವಿಧಾನಗಳು...

ನೀರಿನಲ್ಲಿ ನೆನೆಸಿ ಕುಡಿಯುವುದು

ಇದು ಅತ್ಯಂತ ಸರಳ ಹಾಗೂ ಜನಪ್ರಿಯ ವಿಧಾನ. ಒಂದು ಗ್ಲಾಸ್ ನೀರಿಗೆ 1 ಅಥವಾ 2 ಟೀ ಸ್ಪೂನ್ ಚಿಯಾ ಬೀಜ ಹಾಕಿ 1-2 ಗಂಟೆ ನೆನೆಸಿಡಿ. ನಂತರ ಅದನ್ನು ಕುಡಿಯಬಹುದು. ಇದರಿಂದ ದೇಹ ಹೈಡ್ರೇಟ್ ಆಗುತ್ತದೆ,ಹೊಟ್ಟೆ ತುಂಬಿದ ಅನುಭವ ಸಿಗುತ್ತದೆ ಹಾಗೂ ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇನ್ನಷ್ಟು ಲಾಭವನ್ನು ನೋಡಬಹುದು.

ನಿಂಬೆಹಣ್ಣು ಮತ್ತು ಜೇನು ಸೇರಿಸಿ

ನೆನೆಸಿದ ಚಿಯಾ ಬೀಜಕ್ಕೆ ನಿಂಬೆ ರಸ ಹಾಗೂ ಸ್ವಲ್ಪ ಜೇನು ಸೇರಿಸಿ ಕುಡಿದರೆ ಡಿಟಾಕ್ಸ್ ಪಾನೀಯದಂತೆ ಕೆಲಸ ಮಾಡುತ್ತದೆ. ಇದು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು, ಜೀರ್ಣಕ್ರಿಯೆ ಸುಧಾರಿಸಲು, ಮೆಟಾಬಾಲಿಸಂ ಹೆಚ್ಚಿಸಲು ಸಹಕಾರಿ.

ಹಾಲು ಅಥವಾ ಮೊಸರಿನಲ್ಲಿ ಸೇರಿಸಿ

ಚಿಯಾ ಬೀಜಗಳನ್ನು ಹಾಲು, ಮೊಸರು ಅಥವಾ ಬಟರ್‌ಮಿಲ್ಕ್‌ನಲ್ಲಿ ಸೇರಿಸಿ ತಿನ್ನಬಹುದು. ಇದರಿಂದ ದೇಹದ ಮೂಳೆಗಳಿಗೆ ಹೆಚ್ಚಿನ ಕ್ಯಾಲ್ಸಿಯಂ ಸಿಗುತ್ತದೆ. ಪ್ರೋಟೀನ್ ಪ್ರಮಾಣ ಹೆಚ್ಚುತ್ತದೆಹಾಗೂ ಮಕ್ಕಳೂ ತಿನ್ನಲು ರುಚಿಕರ ಎನಿಸುತ್ತದೆ.

File photo
ಸಂಗ್ರಹ ಚಿತ್ರ

ಸ್ಮೂದಿ ಮತ್ತು ಜ್ಯೂಸ್‌ನಲ್ಲಿ ಸೇರಿಸಿ

ಮ್ಯಾಂಗೋ, ಬಾಳೆಹಣ್ಣು, ಸ್ಟ್ರಾಬೆರಿ, ಆ್ಯಪಲ್ ಮುಂತಾದ ಹಣ್ಣುಗಳ ಸ್ಮೂದಿಯಲ್ಲಿ ಚಿಯಾ ಬೀಜ ಸೇರಿಸಿದರೆ ಆರೋಗ್ಯಕರ ಪಾನೀಯ ಸಿದ್ಧವಾಗುತ್ತದೆ. ಫಿಟ್ನೆಸ್‌ ಪ್ರಿಯರು ವರ್ಕೌಟ್ ಬಳಿಕ ಇದನ್ನು ಹೆಚ್ಚು ಬಳಸುತ್ತಾರೆ.

ಓಟ್ಸ್, ಸಲಾಡ್ ಅಥವಾ ಸೂಪ್ ಮೇಲೆ ಸಿಂಪಡಿಸಿ

ಚಿಯಾ ಬೀಜಗಳನ್ನು ಓಟ್ಸ್, ಉಪ್ಮಾ, ಸಲಾಡ್ ಅಥವಾ ಸೂಪ್ ಮೇಲೆ ಟಾಪಿಂಗ್ ಆಗಿ ಬಳಸಬಹುದು. ಇದರಿಂದ ಆಹಾರದ ಪೌಷ್ಟಿಕ ಮೌಲ್ಯ ಹೆಚ್ಚುತ್ತದೆ.

ಚಿಯಾ ಪುಡಿಂಗ್

ಇದು ಇತ್ತೀಚೆಗೆ ಬಹಳ ಜನಪ್ರಿಯವಾಗಿರುವ ಆರೋಗ್ಯಕರ ಡೆಸೆರ್ಟ್ ಆಗಿದೆ.

ಇದನ್ನು ಮಾಡಲು ಒಂದು ಕಪ್ ಹಾಲು, 2 ಟೀ ಸ್ಪೂನ್ ಚಿಯಾ ಬೀಜ, ಜೇನುತುಪ್ಪ ಹಾಗೂ ಹಣ್ಣುಗಳು ಬೇಕಾಗುತ್ತದೆ. ಇವೆಲ್ಲವನ್ನೂ ಮಿಶ್ರಣ ಮಾಡಿ ರಾತ್ರಿ ಫ್ರಿಜ್‌ನಲ್ಲಿ ಇಡಿ. ಬೆಳಿಗ್ಗೆ ರುಚಿಕರವಾದ ಪುಡಿಂಗ್'ನ್ನು ಸೇವಿಸಬಹುದು.

File photo
ನಿಮ್ಮ ಉಗುರು ನಿಮ್ಮ ಆರೋಗ್ಯದ ಪ್ರತಿಬಿಂಬ: ಮುಖಕ್ಕಷ್ಟೇ ಅಲ್ಲ, ಉಗುರುಗಳ ಸೌಂದರ್ಯದ ಮೇಲೂ ಇರಲಿ ಕಾಳಜಿ..!

ಚಿಯಾ ಬೀಜದ ಪ್ರಮುಖ ಆರೋಗ್ಯ ಲಾಭಗಳು...

ತೂಕ ಇಳಿಕೆಗೆ ಸಹಕಾರಿ

ಚಿಯಾ ಬೀಜಗಳಲ್ಲಿ ನಾರಿನಾಂಶ ಅಧಿಕವಾಗಿರುವುದರಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಭಾಸವಾಗುತ್ತದೆ. ಅನಗತ್ಯ ಹಸಿವು ಕಡಿಮೆಯಾಗುತ್ತದೆ. ಹೆಚ್ಚು ತಿನ್ನುವ ಅಭ್ಯಾಸ ನಿಯಂತ್ರಣವಾಗುತ್ತದೆ. ಇದರಿಂದ ತೂಕ ಇಳಿಸಲು ಸಹಕಾರಿಯಾಗುತ್ತದೆ.

ಜೀರ್ಣಕ್ರಿಯೆ ಸುಧಾರಣೆ

ಫೈಬರ್‌ ಅಧಿಕ ಇರುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಹೊಟ್ಟೆ ಶುದ್ಧವಾಗಿರುತ್ತದೆ. ಜೀರ್ಣಕ್ರಿಯೆ ಸರಾಗವಾಗುತ್ತದೆ. ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ.

ಹೃದಯ ಆರೋಗ್ಯ ಕಾಪಾಡುತ್ತದೆ

ಈ ಬೀಜಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಇದ್ದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ರಕ್ತದೊತ್ತಡ ನಿಯಂತ್ರಣಕ್ಕೆ ತರಲು ಹಾಗೂ ಹೃದಯ ಸಂಬಂಧಿ ಸಮಸ್ಯೆ ತಡೆಗೆ ಸಹಕಾರಿಯಾಗಿದೆ.

File photo
ಸಂಗ್ರಹ ಚಿತ್ರ

ಮಧುಮೇಹ ನಿಯಂತ್ರಣಕ್ಕೆ ನೆರವು

ಚಿಯಾ ಬೀಜಗಳು ರಕ್ತದಲ್ಲಿನ ಸಕ್ಕರೆ ತ್ವರಿತ ಏರಿಕೆಯನ್ನು ತಡೆಯಲು ಸಹಾಯ ಮಾಡಬಹುದು. ಹೀಗಾಗಿ ಮಧುಮೇಹ ರೋಗಿಗಳಿಗೆ ಸಹ ಮಿತ ಪ್ರಮಾಣದಲ್ಲಿ ಉಪಯುಕ್ತ.

ಮೂಳೆಗಳ ಬಲವರ್ಧನೆ

ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಚಿಯಾ ಬೀಜಗಳಲ್ಲಿ ಇದೆ ಎಂದು ಹೇಳಲಾಗುತ್ತದೆ. ಇದಲ್ಲಿನ ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ, ಫಾಸ್ಫರಸ್ ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು ನೆರವಾಗುತ್ತದೆ.

ಚರ್ಮ ಮತ್ತು ಕೂದಲಿನ ಆರೋಗ್ಯ ಹೆಚ್ಚಿಸುತ್ತದೆ

ಈ ಬೀಜದಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಚರ್ಮ ಹೊಳಪು ಹೆಚ್ಚಿಸಲು, ವಯಸ್ಸಾಗುವ ಲಕ್ಷಣ ಕಡಿಮೆ ಮಾಡಲು, ಕೂದಲು ಬಲಪಡಿಸಲು ಸಹಕಾರಿಯಾಗಿದೆ.

ದೇಹಕ್ಕೆ ಶಕ್ತಿ ನೀಡುತ್ತದೆ

ಚಿಯಾ ಬೀಜಗಳು ದೀರ್ಘಕಾಲ ಶಕ್ತಿ ನೀಡುವ ಆಹಾರವಾಗಿದ್ದು, ಜಿಮ್‌ಗೆ ಹೋಗುವವರು, ಕ್ರೀಡಾಪಟುಗಳು, ಕೆಲಸದ ಒತ್ತಡ ಇರುವವರು ಹೆಚ್ಚಾಗಿ ಬಳಸುತ್ತಾರೆ.

File photo
ಸಂಗ್ರಹ ಚಿತ್ರ

ಇಷ್ಟೊಂದು ಉಪಯುಕ್ತವಾಗಿರುವ ಚಿಯಾ ಸೀಡ್ಸ್'ನ್ನು ದಿನಕ್ಕೆ ಎಷ್ಟು ಸೇವಿಸಬೇಕು?

ಸಾಮಾನ್ಯವಾಗಿ: ದಿನಕ್ಕೆ 1 ರಿಂದ 2 ಟೀ ಸ್ಪೂನ್ ಸಾಕಷ್ಟು. ಇದನ್ನು ಅತಿಯಾಗಿ ಸೇವಿಸಬಾರದು. ಹೆಚ್ಚಾಗಿ ತಿಂದರೆ ಹೊಟ್ಟೆ ಉಬ್ಬರ, ಗ್ಯಾಸ್, ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು.

ಯಾರು ಎಚ್ಚರ ವಹಿಸಬೇಕು...?

ಕಡಿಮೆ ರಕ್ತದೊತ್ತಡ ಇರುವವರು, ರಕ್ತ ತೆಳುವಾಗಿಸುವ ಔಷಧ ಸೇವಿಸುವವರು, ಅಲರ್ಜಿ ಇರುವವರು ವೈದ್ಯರ ಸಲಹೆ ಪಡೆದು ಸೇವಿಸುವುದು ಉತ್ತಮ.

ಮಕ್ಕಳಿಗೆ ಕೊಡಬಹುದೇ?

  • ಹೌದು. ಆದರೆ, ಕಡಿಮೆ ಪ್ರಮಾಣದಲ್ಲಿ ನೀರಿನಲ್ಲಿ ಚೆನ್ನಾಗಿ ನೆನೆಸಿ ಕೊಡಬೇಕು.

  • ಚಿಯಾ ಬೀಜ ಸೇವಿಸುವಾಗ ಗಮನಿಸಬೇಕಾದ ವಿಷಯಗಳು

  • ಈ ಬೀಜಗಳನ್ನು ಹೆಚ್ಚು ಪ್ರಮಾಣದಲ್ಲಿ ನೇರವಾಗಿ ತಿನ್ನಬಾರದು.

  • ಸಾಕಷ್ಟು ನೀರು ಕುಡಿಯಬೇಕು.

  • ದಿನನಿತ್ಯ ಮಿತ ಪ್ರಮಾಣದಲ್ಲಿ ಸೇವಿಸಬೇಕು.

  • ಸಮತೋಲನ ಆಹಾರ ಜೊತೆ ಸೇರಿಸಿ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಒಟ್ಟಾರೆ ಸಣ್ಣ ಗಾತ್ರದಲ್ಲಿದ್ದರೂ ಚಿಯಾ ಬೀಜಗಳು ಆರೋಗ್ಯಕ್ಕೆ ಅಪಾರ ಲಾಭ ನೀಡುವ ಪೌಷ್ಟಿಕ ಆಹಾರವಾಗಿದೆ. ತೂಕ ಇಳಿಕೆ ಇಂದ ಹಿಡಿದು ಹೃದಯ ಆರೋಗ್ಯ, ಜೀರ್ಣಕ್ರಿಯೆ, ಎಲುಬಿನ ಬಲವರ್ಧನೆವರೆಗೆ ಅನೇಕ ಪ್ರಯೋಜನಗಳನ್ನು ನೀಡುವ ಈ ಸೂಪರ್‌ಫುಡ್ ಅನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಉತ್ತಮ ಆರೋಗ್ಯವನ್ನು ಪಡೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com