

ಮುಖದ ಹೊಳಪು, ಕೂದಲಿನ ಸೌಂದರ್ಯ ಮತ್ತು ದೇಹದ ಆರೈಕೆಯ ಕಡೆ ನಾವು ದಿನನಿತ್ಯ ಹೆಚ್ಚಿನ ಗಮನ ಹರಿಸುತ್ತೇವೆ. ವಿವಿಧ ರೀತಿಯ ಕ್ರೀಮ್‌ಗಳು, ಸ್ಕಿನ್ ಕೇರ್ ರೂಟೀನ್‌ಗಳು, ಹೆರ್ ಟ್ರೀಟ್‌ಮೆಂಟ್‌ಗಳು ಈಗಂತೂ ನಮ್ಮ ಜೀವನದ ಭಾಗವಾಗಿ ಹೋಗಿವೆ. ಆದರೆ, ಇದೇ ಸಮಯದಲ್ಲಿ ಉಗುರುಗಳ ಆರೈಕೆ ಬಹುತೇಕ ಬಾರಿ ನಮ್ಮ ಗಮನಕ್ಕೆ ಬರುವುದೇ ಇಲ್ಲ. ವಿಶೇಷ ಸಂದರ್ಭಗಳು ಬಂದಾಗ ಮಾತ್ರ ಮ್ಯಾನಿಕ್ಯೂರ್, ನೇಲ್ ಪಾಲಿಶ್ ಅಥವಾ ನೇಲ್ ಆರ್ಟ್ ಮೂಲಕ ಉಗುರುಗಳನ್ನು ಸಿಂಗಾರಿಸುತ್ತೇವೆ.
ಆದರೆ, ಉಗುರುಗಳು ಕೇವಲ ಸೌಂದರ್ಯದ ಭಾಗವಲ್ಲ. ಅವು ನಮ್ಮ ಒಟ್ಟಾರೆ ಆರೋಗ್ಯದ ಪ್ರತಿಬಿಂಬವಾಗಿವೆ. ದೇಹದಲ್ಲಿ ಪೋಷಕಾಂಶಗಳ ಕೊರತೆ, ಹಾರ್ಮೋನ್ ಅಸಮತೋಲನ ಅಥವಾ ಕೆಲವು ಸೋಂಕುಗಳ ಲಕ್ಷಣಗಳು ಮೊದಲಿಗೆ ಉಗುರುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ಉಗುರುಗಳ ಬಣ್ಣ ಬದಲಾವಣೆ, ದುರ್ಬಲತೆ ಅಸಮಾನ ಬೆಳವಣಿಗೆ— ಇವು ನಮ್ಮ ಆರೋಗ್ಯದ ಬಗ್ಗೆ ಸೂಚನೆ ನೀಡುವ ಸಂಕೇತಗಳಾಗಿವೆ.
ಮನೆ ಕೆಲಸಗಳು, ಕಚೇರಿ ಕಾರ್ಯಗಳು, ಮೊಬೈಲ್ ಬಳಕೆ, ಡಿಟರ್ಜೆಂಟ್‌ಗಳ ಸಂಪರ್ಕ—ಇವು ಉಗುರುಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ಉಗುರುಗಳಿಗೂ ಸಮಾನವಾದ ಕಾಳಜಿ ಮತ್ತು ರಕ್ಷಣೆ ನೀಡುವುದು ಅತ್ಯಗತ್ಯವಾಗಿದೆ.
ಹೀಗಾಗಿ, ಉಗುರುಗಳ ಆರೈಕೆಯನ್ನು ಕೇವಲ ಸೌಂದರ್ಯಕ್ಕೆ ಸೀಮಿತಗೊಳಿಸದೇ, ಆರೋಗ್ಯದ ಒಂದು ಪ್ರಮುಖ ಭಾಗವಾಗಿ ಪರಿಗಣಿಸಿ, ದಿನನಿತ್ಯದ ಸರಳ ಆದರೆ ಪರಿಣಾಮಕಾರಿ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಕೆಲವು ಟಿಪ್ಸ್ ಗಳು ಇಲ್ಲಿವೆ...
ನಿಯಮಿತವಾಗಿ ಟ್ರಿಮ್ ಮಾಡಿ
ಉಗುರುಗಳನ್ನು ಅತಿಯಾಗಿ ಬೆಳೆಸಿದರಷ್ಟೇ ಸಾಕಾಗುವುದಿಲ್ಲ. ಅವುಗಳನ್ನು ಸರಿಯಾದ ಆಕಾರದಲ್ಲಿ ಇಡುವುದು ಮುಖ್ಯ. ನಿಯಮಿತವಾಗಿ ಕತ್ತರಿಸಿ, ಇದು ಉಗುರುಗಳ ಕೆಳಗೆ ಮಣ್ಣು ಹಾಗೂ ಇತರೆ ಧೂಳು ಸೇರುವುದನ್ನು ತಡೆಯುತ್ತದೆ.
ಉಗುರುಗಳನ್ನು ಸ್ವಚ್ಛವಾಗಿಡಿ
ಕೈ ತೊಳೆಯುವಾಗ ಉಗುರುಗಳನ್ನೂ ಸ್ವಲ್ಪ ಮೃದುವಾಗಿ ಸ್ವಚ್ಛಗೊಳಿಸಿ. ನೀರು ಹೆಚ್ಚು ಸಮಯ ಉಗುರುಗಳಿಗೆ ತಗುಲಿದರೆ ಅವು ದುರ್ಬಲವಾಗಿ, ಮುರಿಯುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಕೈಗಳನ್ನು ತೊಳೆದ ನಂತರ ಒಣಗಿಸಿ.
ತೇವಾಂಶ ಕಾಪಾಡಿ (Moisturise)
ಉಗುರುಗಳು ಮತ್ತು ಅವುಗಳ ಸುತ್ತಲಿನ ಚರ್ಮಕ್ಕೆ ತೇವಾಂಶ ಅತ್ಯಗತ್ಯ. ಹ್ಯಾಂಡ್ ಕ್ರೀಮ್ ಅಥವಾ ವಿಶೇಷ ಕ್ರೀಮ್ ಬಳಸಿ ಮೃದುವಾಗಿಡಿ. ಇದು ಚರ್ಮ ಒಡೆಯುವುದನ್ನು ತಡೆಯುತ್ತದೆ.
ಮಾಯಿಶ್ಚರೈಸ್ ಬಳಸಿ
ಹೌದು, ನಿಮ್ಮ ಉಗುರುಗಳಿಗೂ ಮಾಯಿಶ್ಚರೈಸರ್ ಬಳಸಿ. ನೀವು ಸಾಮಾನ್ಯವಾಗಿ ಬಳಸುವ ಮಾಯಿಶ್ಚರೈಸ್'ನ್ನೇ ಬಳಸಬುದು. ಅಥವಾ ವಿಶೇಷ ನೇಲ್ ಮಾಯಿಶ್ಚರೈಸರ್ ಅಥವಾ ಹ್ಯಾಂಡ್ ಕ್ರೀಮ್ ಅನ್ನು ಬಳಸಬಹುದು. ಇದು ಚರ್ಮದ ತೇವಾಂಶ, ಮೃದು ಮತ್ತು ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತದೆ. ಮತ್ತು ಉಗುರಿನ ಹೊಳಪು ಕೂಡ ಕಂಡು ಬರುತ್ತಿದೆ.
protective coat ಬಳಸಿ
ನೀವು ಉಗುರುಗಳಿಗೆ ನೇಲ್ ಪಾಲಿಶ್ ಹಾಕದಿದ್ದರೂ, ಒಂದು ಟ್ರಾನ್ಸ್ಪರೆಂಟ್ ಕೋಟ್ ಬಳಸುವುದರಿಂದ ಉಗುರುಗಳು ಧೂಳು ಮತ್ತು ಹಾನಿಯಿಂದ ರಕ್ಷಣೆ ಪಡೆಯುತ್ತವೆ. ಜೊತೆಗೆ ಸ್ವಾಭಾವಿಕ ಹೊಳಪು ಕೂಡ ಬರುತ್ತದೆ.
ಉಗುರು ಕಚ್ಚುವ ಅಭ್ಯಾಸ ಬಿಡಿ
ಉಗುರುಗಳನ್ನು ಕಚ್ಚುವುದು ಬಹಳ ಸಾಮಾನ್ಯವಾದರೂ, ಇದು ಉಗುರುಗಳನ್ನು ದುರ್ಬಲಗೊಳಿಸುತ್ತದೆ. ಬ್ಯಾಕ್ಟೀರಿಯಾ ದೇಹಕ್ಕೆ ಹೋಗುವ ಸಾಧ್ಯತೆ ಕೂಡ ಹೆಚ್ಚುತ್ತದೆ.
ಉಗುರುಗಳನ್ನು ಉಪಕರಣಗಳಂತೆ ಬಳಸಬೇಡಿ
ಕೆಲವರಂತೂ ಉಗುರುಗಳನ್ನು ಉಪಕರಣಗಳಂತೆ ಬಳಸುವುದುಂಟು. ಬಾಟಲ್ ತೆಗೆಯುವುದು, ಬಾಕ್ಸ್ ತೆಗೆಯುವುದು ಮತ್ತು ಇತರೆ ಕೆಲಸಗಳಿಗೆ ಉಗುರುಗಳನ್ನು ಬಳಸುತ್ತಾರೆ. ಇದರಿಂದ ಉಗುರುಗಳು ಹಾನಿಗೊಳಗಾಗುತ್ತದೆ. ಇದು ಉಗುರು ಮುರಿಯಲು ಕಾರಣವಾಗುತ್ತದೆ.
ಹಾನಿಕಾರಕ ಉತ್ಪನ್ನಗಳನ್ನು ತಪ್ಪಿಸಿ
ಕೆಲವು ನೇಲ್ ಪಾಲಿಶ್ ಅಥವಾ ರಿಮೂವರ್‌ಗಳಲ್ಲಿ ಕಠಿಣ ರಾಸಾಯನಿಕಗಳು ಇರುತ್ತವೆ. ಅವು ಉಗುರುಗಳನ್ನು ದುರ್ಬಲಗೊಳಿಸಬಹುದು. ನಿಮ್ಮ ಉಗುರುಗಳಿಗೆ ಸೂಕ್ತವಾದ ಉತ್ಪನ್ನಗಳನ್ನು ಮಾತ್ರ ಆಯ್ಕೆ ಮಾಡಿ, ಬಳಸಿ.
ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ
ಉಗುರುಗಳ ಬಣ್ಣ ಬದಲಾವಣೆ, ನೋವು ಅಥವಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಅವನ್ನು ನಿರ್ಲಕ್ಷಿಸಬೇಡಿ. ತಕ್ಷಣ ತಜ್ಞರ ಸಲಹೆ ಪಡೆಯುವುದು ಅಗತ್ಯ.
ಉಗುರುಗಳ ಆರೈಕೆ ಸಣ್ಣ ವಿಷಯವಾಗಿ ಕಾಣಬಹುದು, ಆದರೆ ಅದು ನಮ್ಮ ದೇಹದ ಆರೋಗ್ಯ ಮತ್ತು ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ. ದಿನನಿತ್ಯದ ಸರಳ ಅಭ್ಯಾಸಗಳು, ಸರಿಯಾದ ಆಹಾರ ಮತ್ತು ಸ್ವಚ್ಛತೆಯ ಮೂಲಕ ಉಗುರುಗಳನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಕಾಪಾಡಬಹುದು. ಹೀಗಾಗಿ ಇಂದಿನಿಂದಲೇ ನಿಮ್ಮ ಉಗುರುಗಳ ಆರೈಕೆ ಕಡೆ ಗಮನ ಹರಿಸಿ.
Advertisement