

ಬೆಂಗಳೂರು: ಆಡಳಿತಾತ್ಮಕ ಸುಧಾರಣೆಗಳನ್ನು ಸಮನ್ವಯಗೊಳಿಸುವುದು, ಸಾರ್ವಜನಿಕರ ಕುಂದುಕೊರತೆಗೆ ಪರಿಹಾರ ಹಾಗೂ ಸರ್ಕಾರಿ ಸೇವೆಗಳನ್ನು ಹೆಚ್ಚು ಸ್ಪಂದನಶೀಲ, ಪಾರದರ್ಶಕ ಮತ್ತು ನಾಗರಿಕ-ಕೇಂದ್ರಿತವನ್ನಾಗಿ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು 'ಪ್ರಜಾ ಸೇವಾ ಇಲಾಖೆ'ಯನ್ನು ಸ್ಥಾಪಿಸಿದೆ.
ಇದು ಮುಖ್ಯಮಂತ್ರಿಯವರ ನೇರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸೇವಾ ವಿತರಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಸುಧಾರಣೆಗಳು ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಈ ಇಲಾಖೆಯು ಸಮನ್ವಯಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಈ ಜವಾಬ್ದಾರಿಯ ಭಾಗವಾಗಿ, 'ಕರ್ನಾಟಕ ಆಡಳಿತ ಸುಧಾರಣಾ ಆಯೋಗ-II' (KARC-II) ನೀಡಿದ ಶಿಫಾರಸುಗಳನ್ನು ಒಗ್ಗೂಡಿಸಿ, ಸರ್ಕಾರಿ ಇಲಾಖೆಗಳಲ್ಲಿ ಜಾರಿಗೊಳಿಸಲು 15 ಅಂಶಗಳ ಸುಧಾರಣಾ ಚೌಕಟ್ಟನ್ನು ಈ ಹೊಸ ಇಲಾಖೆಯು ರೂಪಿಸಿದೆ. ಈ ಚೌಕಟ್ಟಿನ ಮುಖ್ಯ ಉದ್ದೇಶವೆಂದರೆ, ಕಾರ್ಯವಿಧಾನಗಳನ್ನು ಸರಳೀಕರಿಸುವುದು, ಆಡಳಿತಾತ್ಮಕ ವಿಳಂಬಗಳನ್ನು ಕಡಿಮೆ ಮಾಡುವುದು ಮತ್ತು ನಾಗರಿಕರಿಗೆ ಸರ್ಕಾರಿ ಸೇವೆಗಳು ಸುಲಭವಾಗಿ ಸಿಗುವಂತೆ ಮಾಡುವುದು. ಕಾನೂನುಬದ್ಧವಾಗಿ ಸಾಧ್ಯವಿರುವ ಕಡೆಗಳಲ್ಲಿ, ಇಲಾಖೆಗಳು ಅರ್ಹ ಫಲಾನುಭವಿಗಳಿಗೆ 2,000 ರೂಪಾಯಿಗಳವರೆಗಿನ ಆರ್ಥಿಕ ನೆರವನ್ನು ತಕ್ಷಣವೇ ಒದಗಿಸಬಹುದು. ಅರ್ಹ ಫಲಾನುಭವಿಗಳನ್ನು ಗುರುತಿಸಲು ತೆಗೆದುಕೊಳ್ಳುವ ಸಮಯದಿಂದಾಗಿ ನೆರವು ವಿತರಣೆಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ನೋಡೋಣ.
'ಪ್ರಜಾ ಸೇವಾ ಅಭಿಯಾನ'ವು ಅಧಿಕಾರಿಗಳೊಂದಿಗೆ ಅನಗತ್ಯ ಸಂಪರ್ಕ, ಪದೇ ಪದೇ ಪ್ರಶ್ನಿಸುವುದು ಮತ್ತು ಹೆಚ್ಚುವರಿ ದಾಖಲೆಗಳನ್ನು ಕೇಳುವ ಪ್ರಕ್ರಿಯೆಗಳನ್ನು ಮಿತಿಗೊಳಿಸಲು ಉದ್ದೇಶಿಸಿದೆ.
'ಪ್ರಜಾ ಸೇವಾ ಅಭಿಯಾನ'ದ ಅಡಿಯಲ್ಲಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಜಿ. ಪರಮೇಶ್ವರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
'ಪ್ರಜಾ ಸೇವಾ ಇಲಾಖೆ'ಯು ನಾಗರಿಕರಿಗೆ ಸಣ್ಣ ಮೊತ್ತದ ನೆರವನ್ನು ತ್ವರಿತವಾಗಿ ಪಡೆಯಲು ಹೇಗೆ ಸಹಾಯ ಮಾಡುತ್ತದೆ?
ಈ ಯೋಜನೆಯಿಂದ ಸರ್ಕಾರಿ ಸೇವೆಗಳನ್ನು ಹೆಚ್ಚು ವೇಗವಾಗಿ, ಪಾರದರ್ಶಕವಾಗಿ ಮತ್ತು ನಾಗರಿಕ ಸ್ನೇಹಿಯಾಗಿ ಮಾಡಬಹುದಾಗಿದೆ. ಈ ಪ್ರಮುಖ ಕ್ರಮದ ಅಡಿಯಲ್ಲಿ, ಕಾನೂನುಬದ್ಧವಾಗಿ ಸಾಧ್ಯವಿರುವ ಕಡೆಗಳಲ್ಲಿ, ಇಲಾಖೆಗಳು ಸಾಮಾನ್ಯ ಅರ್ಹತಾ ಪರಿಶೀಲನಾ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಕಾಯದೆ, ಪ್ರತಿ ಫಲಾನುಭವಿಗೆ 2,000 ರೂಪಾಯಿಗಳವರೆಗಿನ ಸೇವೆ ಅಥವಾ ಯೋಜನೆಯ ಪ್ರಯೋಜನವನ್ನು ಒದಗಿಸಬಹುದು. ಫಲಾನುಭವಿಯ ಗುರುತನ್ನು ಆಧಾರ್ ಆಧಾರಿತ ಪರಿಶೀಲನೆಯ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ. ಇನ್ನು, ನಿಗದಿತ ಅರ್ಹತಾ ಪರಿಶೀಲನೆಯನ್ನು ನಂತರದ ಹಂತದಲ್ಲಿ, ಅಂದರೆ 30 ದಿನಗಳ ಒಳಗಾಗಿ ಪೂರ್ಣಗೊಳಿಸಬಹುದು.
ಇದರಿಂದ ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದು ಮತ್ತು ವಿಳಂಬವಾಗುವುದು ತಪ್ಪುತ್ತದೆ. ವಿಶೇಷವಾಗಿ ಸಣ್ಣ ಮೊತ್ತದ ಕಲ್ಯಾಣ ನೆರವನ್ನು ಪಡೆಯಲು ಬಯಸುವವರಿಗೆ ಇದು ಹೆಚ್ಚು ಅನುಕೂಲಕರವಾಗಿದೆ. ಹಿರಿಯ ನಾಗರಿಕರು, ವಿಧವೆಯರು ಮತ್ತು ವಿಶೇಷಚೇತನರು ಇಂತಹ ನೆರವನ್ನು ಸುಲಭವಾಗಿ ಪಡೆಯುವ ಮೂಲಕ ಪ್ರಯೋಜನ ಪಡೆಯಬಹುದಾದ ಗುಂಪುಗಳಲ್ಲಿ ಸೇರಿದ್ದಾರೆ.
ಆಧಾರ್ ಆಧಾರಿತ ಪರಿಶೀಲನೆಯು ಇಲಾಖೆಗಳಿಗೆ ಕಲ್ಯಾಣ ಪ್ರಯೋಜನಗಳನ್ನು ತಕ್ಷಣವೇ ಒದಗಿಸಲು ಹೇಗೆ ಸಹಾಯ ಮಾಡುತ್ತದೆ?
ಆಧಾರ್ ಮೂಲಕ, ಅಧಿಕಾರಿಗಳು ಫಲಾನುಭವಿಯ ಗುರುತನ್ನು ಡಿಜಿಟಲ್ ರೂಪದಲ್ಲಿ ದೃಢೀಕರಿಸಬಹುದು ಮತ್ತು ಅವರಿಗೆ ಅರ್ಹವಾದ ಪ್ರಯೋಜನವನ್ನು ತಕ್ಷಣವೇ ತಲುಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಇದು ಅಧಿಕಾರಿಗಳೊಂದಿಗೆ ಅನಗತ್ಯ ಸಂವಹನ, ಪದೇ ಪದೇ ಪ್ರಶ್ನಿಸುವುದು ಮತ್ತು ಹೆಚ್ಚುವರಿ ದಾಖಲೆಗಳನ್ನು ಕೇಳುವ ಪ್ರಕ್ರಿಯೆಗಳನ್ನು ಮಿತಿಗೊಳಿಸುವ ನಿರೀಕ್ಷೆಯಿದೆ. ಅಲ್ಲದೆ, ಇದು ಆಡಳಿತಾತ್ಮಕ ವಿಳಂಬಗಳನ್ನು ಕಡಿಮೆ ಮಾಡುತ್ತದೆ ಮತ್ತು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಭೇಟಿ ನೀಡುವ ಅಗತ್ಯವನ್ನೂ ತಗ್ಗಿಸುತ್ತದೆ.
ಕಲ್ಯಾಣ ಸೌಲಭ್ಯಗಳ ವಿತರಣೆಯಲ್ಲಿ ಸರ್ಕಾರವು ನಿಖರವಾಗಿ ಏನು ಬದಲಾವಣೆ ಮಾಡಿದೆ?
ಹಿಂದೆ, ಫಲಾನುಭವಿಗಳ ಅರ್ಜಿಗಳು ಅನುಮೋದನೆಗೊಂಡು ಅವರಿಗೆ ನೆರವು ಸಿಗುವ ಮೊದಲು, ಅವರು ಹಲವು ಹಂತದ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆಗಳನ್ನು ಎದುರಿಸಬೇಕಿತ್ತು. ಅರ್ಜಿದಾರರು ನಿಜವಾಗಿಯೂ ಅರ್ಹರಾಗಿದ್ದರೂ ಸಹ, ಈ ಪ್ರಕ್ರಿಯೆಗಳಿಂದಾಗಿ ಸಾಕಷ್ಟು ವಿಳಂಬವಾಗುತ್ತಿತ್ತು.
ತಕ್ಷಣವೇ ಸೌಲಭ್ಯಗಳನ್ನು ವಿತರಿಸಲಾಗುತ್ತದೆ ಎಂದ ಮಾತ್ರಕ್ಕೆ, ಫಲಾನುಭವಿಗಳಿಗೆ ಪರಿಶೀಲನೆಯಿಂದ ವಿನಾಯಿತಿ ಸಿಗುತ್ತದೆ ಎಂದರ್ಥವೇ?
ಖಂಡಿತ ಇಲ್ಲ. ಫಲಾನುಭವಿಗಳು ಆಧಾರ್ ಆಧಾರಿತ ಗುರುತಿನ ಪರಿಶೀಲನೆಯ ನಂತರ ಸೇವೆ ಅಥವಾ ನೆರವನ್ನು ಪಡೆಯಬಹುದು. ಆದರೆ, ಅವರು ನಿಗದಿತ ಅವಧಿಯೊಳಗೆ (ಈ ಅವಧಿಯು 30 ದಿನಗಳನ್ನು ಮೀರಬಾರದು) ಅರ್ಹತಾ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಸರ್ಕಾರವು ಪರಿಶೀಲನಾ ಪ್ರಕ್ರಿಯೆಯ ಕ್ರಮವನ್ನು ಬದಲಾಯಿಸಿದೆಯೇ ಹೊರತು, ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಿಲ್ಲ.
ಒಂದು ವೇಳೆ ಫಲಾನುಭವಿಗಳು 30 ದಿನಗಳ ಒಳಗೆ ಪರಿಶೀಲನೆಯನ್ನು ಪೂರ್ಣಗೊಳಿಸಲು ವಿಫಲರಾದರೆ ಏನಾಗುತ್ತದೆ?
ಅಂತಹ ಸಂದರ್ಭದಲ್ಲಿ, ಪರಿಶೀಲನೆ ಪೂರ್ಣಗೊಳ್ಳುವವರೆಗೆ ಸೇವೆ ಅಥವಾ ಸೌಲಭ್ಯವನ್ನು ತಡೆಹಿಡಿಯಬಹುದು. ಇಂತಹ ಪ್ರಕರಣಗಳನ್ನು ಆಯಾ ಇಲಾಖೆಯ ಕಾರ್ಯದರ್ಶಿಗಳು ಪರಿಶೀಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಲ್ಲದೆ, ನಂತರದ ಪರಿಶೀಲನೆಯಲ್ಲಿ ಫಲಾನುಭವಿಯು ಅನರ್ಹರೆಂದು ಕಂಡುಬಂದರೆ, ಈಗಾಗಲೇ ನೀಡಲಾದ ಸೌಲಭ್ಯವನ್ನು ಸರ್ಕಾರವು ಹಿಂಪಡೆಯಬಹುದು. ಈ ನಿಯಮಗಳ ಉದ್ದೇಶವು ವ್ಯವಸ್ಥೆಯ ದುರ್ಬಳಕೆಯನ್ನು ತಡೆಯುವುದು ಮತ್ತು ಸಾರ್ವಜನಿಕ ಹಣದ ವಿತರಣೆಯಲ್ಲಿ ನಿಖರತೆ ಖಚಿತಪಡಿಸುವುದಾಗಿದೆ.
ಈ ಸುಧಾರಣೆಯಿಂದ ಯಾರಿಗೆ ಹೆಚ್ಚು ಪ್ರಯೋಜನವಾಗುತ್ತದೆ?
ಸಣ್ಣ ಮೊತ್ತದ ಸರ್ಕಾರಿ ನೆರವಿನ ಮೇಲೆ ಅವಲಂಬಿತರಾಗಿರುವ ಜನರಿಗೆ ಈ ಸುಧಾರಣೆಯು ಸಹಾಯಕವಾಗಲಿದೆ. ವಿಶೇಷವಾಗಿ ಸಣ್ಣ ಮಾಸಿಕ ಪಿಂಚಣಿ ಅಥವಾ ಇತರ ಯೋಜನಗೆಳಿಂದ ಹಣ ಪಡೆಯುವ ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲ ವ್ಯಕ್ತಿಗಳು ಇದರ ಪ್ರಯೋಜನವನ್ನು ಪಡೆಯಬಹುದು.
ಈ ಸುಧಾರಣೆಯ ಅನುಷ್ಠಾನದಲ್ಲಿ ಕಂದಾಯ ಇಲಾಖೆಯ ಪಾತ್ರವೇನು ಮತ್ತು ಯಾವ ಕಲ್ಯಾಣ ಯೋಜನೆಗಳು ಅದರ ವ್ಯಾಪ್ತಿಗೆ ಬರುತ್ತವೆ?
ಕಂದಾಯ ಇಲಾಖೆಯು ಸಮಾಜದ ದುರ್ಬಲ ವರ್ಗಗಳಿಗೆ ಪಿಂಚಣಿ ಸಂಬಂಧಿತ ನೆರವು ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತದೆ. ಇದರ ಅಡಿಯಲ್ಲಿ ಬರುವ ಕಲ್ಯಾಣ ಯೋಜನೆಗಳೆಂದರೆ, 'ಸಂಧ್ಯಾ ಸುರಕ್ಷಾ ಯೋಜನೆ' - ಇದು ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ (65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು), ವಿಶೇಷವಾಗಿ ಅಸಂಘಟಿತ ವಲಯದವರಿಗೆ (ಸಣ್ಣ ರೈತರು, ನೇಕಾರರು ಮತ್ತು ಮೀನುಗಾರರು ಮುಂತಾದವರು) ಮಾಸಿಕ ಆರ್ಥಿಕ ನೆರವು ನೀಡುವ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಾಗಿದೆ.
ಇನ್ನೊಂದು 'ವಿಧವಾ ವೇತನ ಯೋಜನೆ' (ಇದನ್ನು ನಿರ್ಗತಿಕ ವಿಧವೆಯರ ಪಿಂಚಣಿ ಯೋಜನೆ ಎಂದೂ ಕರೆಯಲಾಗುತ್ತದೆ) - ಇದನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ 'ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ'ವು ನಿರ್ವಹಿಸುತ್ತದ. ಇದು ರಾಜ್ಯದಾದ್ಯಂತ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಧವೆಯರಿಗೆ ನಿಯಮಿತ ಮಾಸಿಕ ಆರ್ಥಿಕ ನೆರವು ನೀಡುವ ಒಂದು ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಹಾಗೆಯೇ, 'ಅಂಗವಿಕಲರ ಮಾಸಾಶನ ಯೋಜನೆ' (ಇದನ್ನು ದೈಹಿಕ ಅಂಗವಿಕಲರ ಪಿಂಚಣಿ ಯೋಜನೆ ಅಥವಾ ಅಂಗವಿಕಲರ ವೇತನ ಎಂದೂ ಕರೆಯಲಾಗುತ್ತದೆ), ಇದನ್ನೂ ಕಂದಾಯ ಇಲಾಖೆಯ ಅಡಿಯಲ್ಲಿ ಬರುವ 'ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ' (DSSP) ನಿರ್ವಹಿಸುತ್ತದೆ. ಇದು ಶೇ. 40 ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು, ತಿಂಗಳಿಗೆ 800 ರಿಂದ 2,000 ರೂಪಾಯಿಗಳವರೆಗಿನ ನಿರ್ವಹಣಾ ಭತ್ಯೆಯನ್ನು (ಮಾಸಾಶನ) ನೀಡುತ್ತದೆ.
ಒಬ್ಬ ಫಲಾನುಭವಿಗೆ ಆಧಾರ್ ಇಲ್ಲದಿದ್ದರೆ ಏನಾಗುತ್ತದೆ?
ಸೇವೆಗಳನ್ನು ಪಡೆಯಲು ಆಧಾರ್ ಅನ್ನು ಪ್ರಾಥಮಿಕ ಆಯ್ಕೆಯಾಗಿ ಬಳಸಲಾಗುತ್ತದೆ. ಆದಾಗ್ಯೂ, ಆಧಾರ್ ಕಡ್ಡಾಯಗೊಳಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ, ಮೊಬೈಲ್ ಸಂಖ್ಯೆ ಆಧಾರಿತ ಪರಿಶೀಲನೆಯಂತಹ ಪರ್ಯಾಯ ವಿಧಾನಗಳಿಗೆ ಅನುಮತಿ ನೀಡಬಹುದಾಗಿದೆ. ಆಧಾರ್ ಇಲ್ಲದಿರುವ ಕಾರಣದಿಂದಾಗಿ, ಅರ್ಹ ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯುವುದರಿಂದ ವಂಚಿತರಾಗಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಈ ಸುಧಾರಣೆಯನ್ನು ಜಾರಿಗೊಳಿಸುವಲ್ಲಿರುವ ಪ್ರಮುಖ ಸವಾಲುಗಳು ಯಾವುವು?
ಇದರ ಪರಿಣಾಮಕಾರಿ ಅನುಷ್ಠಾನವು ಸಂಬಂಧಪಟ್ಟ ಇಲಾಖೆಗಳ ಮೇಲೆ ಅವಲಂಬಿತವಾಗಿರುತ್ತದೆ. ಆಧಾರ್ ಆಧಾರಿತ ಗುರುತಿನ ಪ್ರಕ್ರಿಯೆಯು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು, ಸಕಾಲದಲ್ಲಿ ಸೌಲಭ್ಯಗಳನ್ನು ತಲುಪಿಸುವುದು ಮತ್ತು ಅರ್ಹತಾ ಪರಿಶೀಲನೆಯನ್ನು ಪೂರ್ಣಗೊಳಿಸಲು ಇರುವ ಗಡುವಿನ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡುವುದು ಆ ಇಲಾಖೆಗಳ ಜವಾಬ್ದಾರಿಯಾಗಿದೆ.
ತಾಂತ್ರಿಕ ದೋಷಗಳು, ಬಯೋಮೆಟ್ರಿಕ್ ವೈಫಲ್ಯಗಳು ಅಥವಾ ಪರಿಶೀಲನಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದಿರುವಂತಹ ಕಾರಣಗಳಿಂದಾಗಿ, ನಿಜವಾದ ಫಲಾನುಭವಿಗಳು ಸಿಗಬೇಕಾದ ನೆರವಿನಿಂದ ವಂಚಿತರಾಗಬಾರದು.
ಅಸಾಧಾರಣ ಪ್ರಕರಣಗಳನ್ನು ನಿರ್ವಹಿಸಲು, ಸೌಲಭ್ಯಗಳನ್ನು ಅಮಾನತುಗೊಳಿಸಲು ಮತ್ತು ನಂತರದ ಪರಿಶೀಲನೆಯಲ್ಲಿ ಅನರ್ಹರೆಂದು ಕಂಡುಬರುವ ಫಲಾನುಭವಿಗಳಿಂದ ಹಣವನ್ನು ವಸೂಲಿ ಮಾಡಲು ಸ್ಪಷ್ಟ ಮಾರ್ಗಸೂಚಿಗಳ ಅಗತ್ಯವಿದೆ. ಇಂತಹ ಕ್ರಮಗಳನ್ನು ಕೈಗೊಳ್ಳುವಾಗ ನಿಗದಿತ ಕಾರ್ಯವಿಧಾನವನ್ನು ಅನುಸರಿಸಬೇಕು ಮತ್ತು ಸೂಕ್ತ ಪರಿಶೀಲನೆಗೆ (ಪುನರ್ ಪರಿಶೀಲನೆಗೆ) ಅವಕಾಶವಿರಬೇಕು.
ಈ ಸುಧಾರಣೆಯು ಆಡಳಿತಾತ್ಮಕ ವಿಳಂಬಗಳನ್ನು, ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದನ್ನು ಮತ್ತು ನಾಗರಿಕರಿಗೆ ಆಗುವ ಕಿರುಕುಳವನ್ನು ನಿಜವಾಗಿಯೂ ಕಡಿಮೆ ಮಾಡುತ್ತದೆಯೇ ಎಂದು ಮೌಲ್ಯಮಾಪನ ಮಾಡಲು ನಿಯಮಿತ ಮೇಲ್ವಿಚಾರಣೆ ಅತ್ಯಗತ್ಯವಾಗಿರುತ್ತದೆ.