ಉಪವಾಸ ಮಾಡುವುದು ತಪ್ಪಲ್ಲ, ಆದ್ರೆ ತಿನ್ನುವ ಆಹಾರ ಹೀಗಿದ್ದರೆ ಹಾರ್ಮೋನ್ ಏರುಪೇರು ಗ್ಯಾರಂಟಿ! ಮಹಿಳೆಯರು ತಿಳಿಯಲೇಬೇಕಾದ PMOS ರಹಸ್ಯ

ಉಪವಾಸ ದೇಹಕ್ಕೆ ಒಳ್ಳೆಯದೇ, ಆದರೆ ನೀವು ತಿನ್ನುವ ಆಹಾರವೇ PMOS ಸಮಸ್ಯೆಯನ್ನು ಉಲ್ಬಣಗೊಳಿಸುತ್ತಿರಬಹುದೇ? ಉಪವಾಸದ ಹೆಸರಿನಲ್ಲಿ ಸೇವಿಸುವ ತಿಂಡಿಗಳು ಹಾರ್ಮೋನ್ ಮತ್ತು ಫಲವತ್ತತೆಯ ಮೇಲೆ ಹೇಗೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ:
Fasting Diet Worsening PMOS
ಉಪವಾಸದ ಆಹಾರ ಯಾವಾಗಲೂ ಆರೋಗ್ಯಕರ ಆಹಾರವಲ್ಲ!AI Image
Updated on: 

ದೇಹದ ತೂಕ ಇಳಿಸಲು ಮತ್ತು ಆರೋಗ್ಯ ವೃದ್ಧಿಸಲು ಉಪವಾಸ ಅತ್ಯುತ್ತಮ ಮಾರ್ಗ ಎಂದು ಬಹುತೇಕರು ನಂಬುತ್ತಾರೆ. ಆದರೆ ಉಪವಾಸದ ಸಮಯದಲ್ಲಿ ನಾವು ಹೊಟ್ಟೆಗೆ ಹಾಕುವ ಆಹಾರವೇ ನಮ್ಮ ದೇಹದ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದು ಎಂಬ ಕಹಿ ಸತ್ಯ ಹಲವರಿಗೆ ತಿಳಿದಿಲ್ಲ. ಅದರಲ್ಲೂ ಮಹಿಳೆಯರಲ್ಲಿ ಹಾರ್ಮೋನ್ ಏರುಪೇರು ಉಂಟುಮಾಡುವ PMOS ಸಮಸ್ಯೆಯಿದ್ದಾಗ, ಉಪವಾಸದ ಹೆಸರಿನಲ್ಲಿ ಸೇವಿಸುವ ಸಾಂಪ್ರದಾಯಿಕ ಆಹಾರಗಳು ವರದಾನವಾಗುವ ಬದಲು ಮಾರಕವಾಗುತ್ತಿವೆಯೇ? ಉಪವಾಸ ಮತ್ತು ಸಂತಾನೋತ್ಪತ್ತಿ ಆರೋಗ್ಯದ ನಡುವಿನ ಆ ಆಘಾತಕಾರಿ ನಂಟಿನ ಬಗ್ಗೆ ಬೆಂಗಳೂರಿನ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಫರ್ಟಿಲಿಟಿ ಸ್ಪೆಷಲಿಸ್ಟ್ ಆದ ಡಾ. ಪಲ್ಲವಿ ಪ್ರಸಾದ್ ಅವರು ಉತ್ತರಿಸಿದ್ದಾರೆ.

ಸಾಮಾನ್ಯವಾಗಿ ಉಪವಾಸವನ್ನು ಆರೋಗ್ಯಕರ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಆದರೆ ಪಾಲಿಎಂಡೋಕ್ರೈನ್ ಮೆಟಾಬಾಲಿಕ್ ಓವೇರಿಯನ್ ಸಿಂಡ್ರೋಮ್ (PMOS) (ಈ ಮೊದಲು PCOS ಎಂದು ಕರೆಯಲಾಗುತ್ತಿತ್ತು) ಇರುವ ಮಹಿಳೆಯರಿಗೆ, ಉಪವಾಸದಷ್ಟೇ ಉಪವಾಸದ ಸಮಯದಲ್ಲಿ ಸೇವಿಸುವ ಆಹಾರದ ಪೌಷ್ಟಿಕ ಗುಣಮಟ್ಟವೂ ಮುಖ್ಯ. ಸಾಮಾನ್ಯವಾಗಿ ಸೇವಿಸುವ ಅನೇಕ ಉಪವಾಸದ ಆಹಾರಗಳಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು, ಪಿಷ್ಟ, ಸಕ್ಕರೆ ಮತ್ತು ಕೊಬ್ಬು ಹೆಚ್ಚಾಗಿದ್ದು, ಪ್ರೋಟೀನ್ ಮತ್ತು ನಾರಿನಂಶ ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ಸಮತೋಲಿತ ಊಟಗಳಿಲ್ಲದೆ ಇಂತಹ ಆಹಾರಗಳನ್ನು ಪದೇ ಪದೇ ಸೇವಿಸಿದರೆ, ರಕ್ತದ ಸಕ್ಕರೆ ಮಟ್ಟದಲ್ಲಿ ಏರಿಳಿತಗಳಾಗಬಹುದು. ಪಿಎಂಒಎಸ್‌ನ ಸಾಮಾನ್ಯ ಲಕ್ಷಣವಾದ ಇನ್ಸುಲಿನ್ ರೆಸಿಸ್ಟೆನ್ಸ್ ಈಗಾಗಲೇ ಇರುವ ಮಹಿಳೆಯರಲ್ಲಿ ತೂಕ ಮತ್ತು ಚಯಾಪಚಯ ನಿರ್ವಹಣೆಯನ್ನು ಇದು ಇನ್ನಷ್ಟು ಕಷ್ಟಕರವಾಗಿಸಬಹುದು ಎಂದು ತಿಳಿಸಿದ್ದಾರೆ.

Fasting Diet Worsening PMOS
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ Banana ತಿನ್ನುತ್ತೀರಾ? ಬರೀ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವನೆಗೆ ಸರಿಯಾದ ವಿಧಾನ ಇಲ್ಲಿದೆ!

ಫಲವತ್ತತೆಯ ದೃಷ್ಟಿಕೋನದಿಂದ ನೋಡಿದರೆ, PMOS ಕೇವಲ ಮುಟ್ಟಿಗೆ ಅಥವಾ ಅಂಡಾಶಯಕ್ಕೆ ಸಂಬಂಧಿಸಿದ ಸ್ಥಿತಿಯಲ್ಲ; ಇದು ಅಂಡೋತ್ಪತ್ತಿ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಇನ್ಸುಲಿನ್ ರೆಸಿಸ್ಟೆನ್ಸ್ ಮತ್ತು ಚಯಾಪಚಯ ಅಸಮತೋಲನಗಳು ಹಾರ್ಮೋನ್ ನಿಯಂತ್ರಣದ ಮೇಲೆ ಪ್ರಭಾವ ಬೀರಿ, ಅನಿಯಮಿತ ಮುಟ್ಟಿನ ಚಕ್ರಗಳಿಗೆ ಕಾರಣವಾಗಬಹುದು. ಇದರಿಂದ ಕೆಲವು ಮಹಿಳೆಯರಿಗೆ ಗರ್ಭಧಾರಣೆ ಕಷ್ಟವಾಗಬಹುದು. ಆದರೆ, ಆಹಾರದ ಆಯ್ಕೆಗಳೊಂದೇ ಫಲವತ್ತತೆಯ ಫಲಿತಾಂಶವನ್ನು ನಿರ್ಧರಿಸುವುದಿಲ್ಲ, ಮತ್ತು PMOS ಇರುವ ಪ್ರತಿಯೊಬ್ಬ ಮಹಿಳೆಗೂ ಇನ್ಸುಲಿನ್ ರೆಸಿಸ್ಟೆನ್ಸ್ ಇರುವುದಿಲ್ಲ.

ಹಾಗಾಗಿ, ಹುರಿದ ತಿಂಡಿಗಳು, ಸಿಹಿತಿಂಡಿಗಳು ಅಥವಾ ಸಂಸ್ಕರಿಸಿದ ಪಿಷ್ಟಯುಕ್ತ ಆಹಾರಗಳನ್ನೇ ಪ್ರಮುಖವಾಗಿ ಅವಲಂಬಿಸುವ ಬದಲು, ಎಚ್ಚರಿಕೆಯಿಂದ ಉಪವಾಸ ಮಾಡುವುದು ಮುಖ್ಯ. ಪ್ರೋಟೀನ್ ಭರಿತ ಆಹಾರಗಳು, ತರಕಾರಿಗಳು, ನಾರಿನಂಶ ಹೆಚ್ಚಿರುವ ಪದಾರ್ಥಗಳು, ಬೀಜಗಳು (ನಟ್ಸ್) ಮತ್ತು ಸೂಕ್ತ ಪ್ರಮಾಣದ ಆಹಾರವನ್ನು ಸೇರಿಸುವುದರಿಂದ ಉಪವಾಸದ ಊಟಗಳನ್ನು ಹೆಚ್ಚು ಸಮತೋಲಿತವಾಗಿಸಬಹುದು. ಸಾಕಷ್ಟು ನೀರು ಕುಡಿಯುವುದು ಮತ್ತು ಅತಿಯಾದ ಕ್ಯಾಲೊರಿ ಕಡಿತವನ್ನು ತಪ್ಪಿಸುವುದು ಕೂಡ ಅಷ್ಟೇ ಮುಖ್ಯ. ಗರ್ಭಧಾರಣೆಗೆ ಯೋಜಿಸುತ್ತಿರುವ PMOS ಇರುವ ಮಹಿಳೆಯರು ನಿರ್ಬಂಧಿತ ಆಹಾರ ಪ್ರವೃತ್ತಿಗಳನ್ನು ಅನುಸರಿಸುವ ಬದಲು, ಸುಸ್ಥಿರ ಪೋಷಣೆಯ ಮೇಲೆ ಗಮನ ಹರಿಸಬೇಕು ಮತ್ತು ತಮ್ಮ ಫಲವತ್ತತೆ ತಜ್ಞರು ಹಾಗೂ ಅರ್ಹ ಆಹಾರ ತಜ್ಞರಿಂದ (ಡಯೆಟಿಷಿಯನ್) ವೈಯಕ್ತಿಕ ಸಲಹೆ ಪಡೆಯಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com