
ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿರುವ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಮಾರುವ ಸಲುವಾಗಿ ಮತ್ತು ಅವರ ನಂಬಿಕೆ ಗಳಿಕೆಗಾಗಿ ಪ್ರಕರಣದ ಆರೋಪಿಗಳು ಕೆಲ ಮಾದರಿ ಪ್ರಶ್ನೆಪತ್ರಿಕೆಗಳನ್ನು ಉಚಿತವಾಗಿ ನೀಡಿದ್ದ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ನಿರ್ದೇಶಕಿ ಸೋನಿಯಾ ನಾರಂಗ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಿಐಡಿ ತನಿಖೆ ವೇಳೆ ಈ ಸ್ಫೋಟ ಮಾಹಿತಿ ಹೊರಬಿದ್ದಿದ್ದು, ಹಣಗಳಿಕೆಗಾಗಿ ಆರೋಪಿಗಳು ಇದನ್ನೇ ದಂಧೆಯನ್ನಾಗಿ ಮಾಡಿಕ್ಕೊಂಡಿದ್ದರು. ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಮಾರುವ ಸಲುವಾಗಿ ಅವರಿಂದ ನಂಬಿಕೆಗಳಿಕೆಗಾಗಿ ಕೆಲ ಸ್ಯಾಂಪಲ್ ಪ್ರಶ್ನೆ ಪತ್ರಿಕೆಗಳನ್ನು ಅವರಿಗೆ ಉಚಿತವಾಗಿ ನೀಡಲಾಗುತ್ತಿತ್ತಂತೆ. ಆ ಬಳಿಕ ವಿದ್ಯಾರ್ಥಿಗಳಿಗೆ ನಂಬಿಕೆ ಬಂದರೆ ಹಣ ನೀಡಿ ಪ್ರಶ್ನೆ ಪತ್ರಿಕೆ ಖರೀದಿಸುತ್ತಿದ್ದರಂತೆ. ಈ ವಿಚಾರಗಳನ್ನು ಸ್ವತಃ ಬಂಧಿತ ಆರೋಪಿಗಳು ಸಿಐಡಿ ಆಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆಗಳಿವೆ.
ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಐಡಿ ಆಧಿಕಾರಿಗಳು ಆರೋಪಿಗಳಾದ ದೈಹಿಕ ಶಿಕ್ಷಕ ಮಂಜುನಾಥ್, ಓಬಳೇಶ್ ಮತ್ತು ರುದ್ರಪ್ಪ ಸೇರಿದಂತೆ ಎಲ್ಲರನ್ನು ವಿಚಾರಣೆಗೊಳಪಡಿಸಿದ್ದು, ಆಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಷ್ಠಿತ ಕಾಲೇಜುಗಳ ಮೇಲೆ ಸಿಐಡಿ ನಿಗಾ
ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಫಲಿತಾಂಶ ಪಡೆದು ಉತ್ತೀರ್ಣಗೊಂಡಿರುವ ಪ್ರತಿಷ್ಠಿತ ಕಾಲೇಜುಗಳು ಹಾಗೂ ಪಿಯು ಇಲಾಖೆ ಅಧಿಕಾರಿ ವರ್ಗಕ್ಕೆ ಸಿಐಡಿ ವಿಚಾರಣೆ ಭೀತಿ ಆರಂಭವಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಸಿಐಡಿ ಅಧಿಕಾರಿಗಳು ಹೆಚ್ಚಿನ ಫಲಿತಾಂಶ ಪಡೆದಿರುವ ಕಾಲೇಜುಗಳ ಪಟ್ಟಿ ಪಡೆದು ತನಿಖೆ ನಡೆಸಲು ಚಿಂತಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪರೀಕ್ಷಾ, ಕಂಪ್ಯೂಟರ್ ಮತ್ತು ಅಂಕಪಟ್ಟಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 40 ಅಧಿಕಾರಿಗಳ ಹೊರತುಪಡಿಸಿ ಹಾಲಿ ಇರುವ ಕೆಲವು ಅಧಿಕಾರಿಗಳ ಮೇಲೂ ಒಂದಲ್ಲ ಒಂದು ಆರೋಪಗಳಿರುವುದರಿಂದ ಹಾಗೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣವಾಗಿರುವ ಅಧಿಕಾರಿಗಳ ಮೇಲೆ ತನಿಖೆ ನಡೆಸುವ ಸಾಧ್ಯತೆ ಇದೆ. ಸದ್ಯ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪದಡಿ ಸಿಐಡಿಗೆ ಸಿಕ್ಕಿ ಬಿದ್ದಿರುವವರ ಪೈಕಿ ಬಹುತೇಕರು ಈ ಹಿಂದೆ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು ಹಾಗೂ ಇಲಾಖಾ ಅಧಿಕಾರಿಗಳೇ ಆಗಿರುವುದರಿಂದ ಸಿಐಡಿ ತಂಡ ಪ್ರತಿಷ್ಠಿತ ಕಾಲೇಜುಗಳು ಹಾಗೂ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಸಿಐಡಿ ಆಲೋಚಿಸುತ್ತಿದೆ ಎಂದು ತಿಳಿದುಬಂದಿದೆ.
ಸಿಇಟಿ ಸೇರಿ ಇತರೆ ಹುದ್ದೆಗಳ ನೇಮಕಾತಿ ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಾರ್ಯಕಾರಿ ನಿರ್ದೇಶಕರು ಹಾಗೂ ಪಿಯು ಇಲಾಖೆ ನಿರ್ದೇಶಕರು ಈ ಹಿಂದೆ ಒಂದೇಯಾಗಿದ್ದರಿಂದ ಕೆಲ ಅಧಿಕಾರಿಗಳು ಪಿಯು ಇಲಾಖೆಗೆ ಬಂದು ಹೋಗುತ್ತಿದ್ದರು. ಅಲ್ಲದೆ, ಪ್ರಶ್ನೆಪತ್ರಿಕೆ ಮುದ್ರಣದ ವಿಚಾರ ಕೂಡ ಕೆಲವರಿಗೂ ತಿಳಿದಿದ್ದರಿಂದ ಕೆಇಎ ಇಲಾಖಾ ಅಧಿಕಾರಿಗಳ ಮೇಲೆ ಇಲಾಖೆ ಹಾಗೂ ಸಿಐಡಿ ನಿಗಾವಹಿಸಿದೆ.
ಇದೇ ವೇಳೆ ಸಿಐಡಿ ಅಧಿಕಾರಿಗಳ ತನಿಖೆಯನ್ನು ತಪ್ಪಿಸಿಕೊಳ್ಳಲು ಮುಂದಾಗಿರುವ ಅಧಿಕಾರಿಗಳು ರಜೆ ನೆಪವೊಡ್ಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಸಿಐಡಿ ಮೂಲಗಳ ಪ್ರಕಾರ ಇಲಾಖೆಯ ಪ್ರಮುಖ ಅಧಿಕಾರಿಗಳು ಈಗಗಾಲೇ ವಿವಿಧ ನೆಪವೊಡ್ಡಿ ರಜೆಗೆ ಅರ್ಜಿ ಸಲ್ಲಿಸಿರುವ ವಿಚಾರ ಬೆಳಕಿಗೆ ಬಂದಿದೆ.
Advertisement