ಬೆಂಗಳೂರಿನಲ್ಲಿ ಅಗ್ನಿ ಅವಘಡ; ಎರಡು ಅಂಗಡಿಗಳು ಭಸ್ಮ

ಬೆಂಗಳೂರಿನ ಶಿವಾಜಿನಗರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಎರಡು ಅಂಗಡಿಗಳು ಸುಟ್ಟು ಭಸ್ಮವಾಗಿದೆ..
ಅಗ್ನಿಗಾಹುತಿಯಾದ ಅಂಗಡಿ (ಸಾಂದರ್ಭಿಕ ಚಿತ್ರ)
ಅಗ್ನಿಗಾಹುತಿಯಾದ ಅಂಗಡಿ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೆಂಗಳೂರಿನ ಶಿವಾಜಿನಗರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಎರಡು ಅಂಗಡಿಗಳು ಸುಟ್ಟು ಭಸ್ಮವಾಗಿದೆ.

ಶಿವಾಜಿನಗರದ ಲಾಲಾ ರಸ್ತೆಯಲ್ಲಿರುವ ಸೈನ್ ಬೋರ್ಡ್ ತಯಾರಿಕಾ ಅಂಗಡಿಯಲ್ಲಿ ನಿನ್ನೆ ತಡರಾತ್ರಿ ಸುಮಾರು 3.30ರ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದ್ದು, ಈ ವೇಳೆ  ಅಂಗಡಿಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿಯ ಕೆನ್ನಾಲಿಗೆ ತೀವ್ರಗೊಂಡಿದೆ. ಅಂಗಡಿಯಲ್ಲಿದ್ದ ಸೈನ್ ಬೋರ್ಡ್ ಗೆ ಬಳಕೆ ಮಾಡಲಾಗುವ ವಸ್ತುಗಳು ಸುಟ್ಟುಹೋಗಿದ್ದು,  ಅಂಗಡಿಯ ರೋಲಿಂಗ್ ಶೆಟರ್ ಕಿತ್ತು ಬಂದಿದೆ.

ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರಾದರೂ, ಅಷ್ಟುಹೊತ್ತಿಗಾಗಲೇ ಬೆಂಕಿ ಕೆನ್ನಾಲಿಗೆ ಇಡೀ ಕಟ್ಟಡವನ್ನು  ವ್ಯಾಪಿಸಿತ್ತು. ಅದೃಷ್ಟವಶಾತ್ ವಾಣಿಜ್ಯ ಕಟ್ಟಡವಾದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಇನ್ನು ಇದೇ ಸೈನ್ ಬೋರ್ಡ್ ಅಂಗಡಿಯ ಪಕ್ಕದಲ್ಲಿರುವ ಮೆಡಿಕಲ್ ಸ್ಟೋರ್ ಗೂ ಬೆಂಕಿ ತಗುಲಿದ್ದು, ಅಂಗಡಿಯಲ್ಲಿದ್ದ ಲಕ್ಷಾಂತರ  ಮೌಲ್ಯದ ಔಷಧಿ ಸಾಮಗ್ರಿಗಳು ಅಗ್ನಿಗಾಹುತಿಯಾಗಿದೆ.  ಅಂತೆಯೇ ಪಕ್ಕದಲ್ಲಿದ್ದ ಕಾರು ಕೂಡ ಜಖಂಗೊಂಡಿದ್ದು, ಕಾರಿನ ಅರ್ಧಭಾಗ ಬೆಂಕಿಗಾಹುತಿಯಾಗಿದೆ. ಮೂಲಗಳ ಪ್ರಕಾರ ಅಗ್ನಿ ಅವಘಡ ಸಂಭವಿಸಿದ ಸೈನ್ ಬೋರ್ಡ್ ಅಂಗಡಿ ಮುನ್ನಾ  ಎಂಬುವವರಿಗೆ ಸೇರಿದ್ದಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಶಿವಾಜಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com