ನೋಟಿಸ್ ನೀಡಿ ವಿವಾದ ಮೈಮೇಲೆ ಎಳೆದುಕೊಂಡ ಸರ್ಕಾರ!

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಪ್ರತಿಭಟನಾ ನಿರತ ಉಪನ್ಯಾಸಕರಿಗೆ ಷೋಕಾಸ್ ನೋಟಿಸ್ ಜಾರಿ ಮಾಡುವ ಮೂಲಕ ರಾಜ್ಯ ಸರ್ಕಾರ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಫ್ರೀಡಂ ಪಾರ್ಕ್ ನಲ್ಲಿ ಉಪನ್ಯಾಸಕರ ಪ್ರತಿಭಟನೆ (ಸಂಗ್ರಹ ಚಿತ್ರ)
ಫ್ರೀಡಂ ಪಾರ್ಕ್ ನಲ್ಲಿ ಉಪನ್ಯಾಸಕರ ಪ್ರತಿಭಟನೆ (ಸಂಗ್ರಹ ಚಿತ್ರ)

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಪ್ರತಿಭಟನಾ ನಿರತ ಉಪನ್ಯಾಸಕರಿಗೆ  ಷೋಕಾಸ್ ನೋಟಿಸ್ ಜಾರಿ ಮಾಡುವ ಮೂಲಕ ರಾಜ್ಯ ಸರ್ಕಾರ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಮೌಲ್ಯಮಾಪನ ಬಹಿಷ್ಕರಿಸಿ 6.30 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಲಕ್ಷಿಸಿರುವ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಏಕೆ ದಾಖಲಿಸಬಾರದು ಎಂದು ಕಾರಣ ಕೇಳಿ  ನೋಟಿಸ್ ನೀಡಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.  ಈಗಾಗಲೇ ಶಿಕ್ಷಕರಿಗೆ ನೋಟಿಸ್ ನೀಡಲು ಸರ್ಕಾರ ಎಲ್ಲ ರೀತಿ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

"ಒಂದು ವೇತನ ಬಡ್ತಿ ಹಾಗೂ ವಿಶೇಷ ಭತ್ಯೆ ನೀಡಲು ತೆಗೆದುಕೊಂಡಿರುವ ನಿರ್ಧಾರಕ್ಕೆ ಸರ್ಕಾರ ಅಚಲವಾಗಿದೆ. ಈ ಕುರಿತಂತೆ ಉಪನ್ಯಾಸಕರ ಜತೆಗೆ ಇನ್ಯಾವುದೇ ಮಾತುಕತೆಯೂ ಇಲ್ಲ  ಎಂದು ಸ್ಪಷ್ಟಪಡಿಸಿರುವ ಸಚಿವ ಕಿಮ್ಮನೆ, ‘ಪ್ರತಿಭಟನೆ ಬಿಟ್ಟು ಮೌಲ್ಯಮಾಪನಕ್ಕೆ ಹಾಜರಾಗಿ’ ಎಂದು ಹೇಳಿದ್ದಾರೆ.

ಆದರೆ ಮೌಲ್ಯಮಾಪನಕ್ಕೆ ಹಾಜರಾಗದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿ ನೋಟಿಸ್ ನೀಡಿದ್ದ ಶಿಕ್ಷಣ ಇಲಾಖೆ ಇದೀಗ ಸಂಕಷ್ಟಕ್ಕೀಡಾಗಿದ್ದು, ಅನುದಾನಿತ ಹಾಗೂ ಅನುದಾನ  ರಹಿತ ಕಾಲೇಜು ಉಪನ್ಯಾಸಕರ ಮೂಲಕ ಮೌಲ್ಯಮಾಪನ ಮಾಡಿಸುವ ತಂತ್ರ ಸರ್ಕಾರಕ್ಕೆ ತಿರುಗುಬಾಣವಾಗಿದೆ. ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜು ಉಪನ್ಯಾಸಕರು ಕೂಡ  ಇದೀಗ ಶಿಕ್ಷಕರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಸರ್ಕಾರದ ಕ್ರಮ ಇದೀಗ ಅದಕ್ಕೆ ತಿರುಗುಬಾಣವಾಗಿ ಪರಿಣಮಿಸಿದೆ. ಸ್ವಾತಂತ್ರ್ಯ ಉದ್ಯಾನಕ್ಕೆ ಭೇಟಿ ನೀಡಿದ ಅನುದಾನಿತ ಹಾಗೂ  ಅನುದಾನ ರಹಿತ ಕಾಲೇಜು ಉಪನ್ಯಾಸಕರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯರು, ಕುಮಾರ್ ನಾಯಕ್ ವರದಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಸಮ್ಮತಿಯಿದೆ.  ಮೌಲ್ಯಮಾಪನಕ್ಕೆ ನಮ್ಮ ಸಂಘದ ಸದಸ್ಯರು ಕೂಡ ಬೆಂಬಲ ನೀಡುವುದಿಲ್ಲ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆಗೆ ತಿಳಿಸಿದ್ದಾರೆ.

"ಯೂ ಟರ್ನ್ ಸಚಿವ ಕಿಮ್ಮನೆ" ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು
ಇದೇ ವೇಳೆ ಸರ್ಕಾರದ ಎಚ್ಚರಿಕೆಗೆ ಮಣಿಯದ ಉಪನ್ಯಾಸಕರ ಸಂಘವು, ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವುದೇ ಕಠಿಣ ಕ್ರಮ ತೆಗೆದುಕೊಂಡರೂ ಎದುರಿಸಲು  ಸಿದ್ಧರಿದ್ದೇವೆ ಮತ್ತು ಮಾತು ತಪ್ಪಿದ ಸರ್ಕಾರದ ವಿರುದ್ಧ ನಮ್ಮ ಅಹೋರಾತ್ರಿ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ. ಬುಧವಾರ ನಡೆದ ಮೊದಲ ಸಭೆಯಲ್ಲಿಯೇ ಎರಡು  ವೇತನ ಬಡ್ತಿ ಕೊಡಿಸುವುದಾಗಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಭರವಸೆ ನೀಡಿದ್ದರು. ಆದರೆ ಈಗ ತಾವೇ ಹೇಳಿಕೆ ಬದಲಿಸಿ, ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಉಪನ್ಯಾಸಕರ  ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಆರೋಪಿಸಿದ್ದಾರೆ.

ಪರ್ಯಾಯ ವ್ಯವಸ್ಥೆಗೆ ತಯಾರಿ
ಈತನ್ಮಧ್ಯೆ ಪಿಯು ಉಪನ್ಯಾಸಕರ ಪ್ರತಿಭಟನೆ ನಿಲ್ಲದ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯು ಪರ್ಯಾಯ ವ್ಯವಸ್ಥೆ ಬಗ್ಗೆ ತಯಾರಿ ಆರಂಭಿಸಿದೆ. ನೋಟಿಸ್ ಜಾರಿ ಬಳಿಕವೂ  ಪ್ರತಿಭಟನೆ ಹಿಂತೆಗೆದುಕೊಳ್ಳದಿದ್ದರೆ ಅನಿವಾರ್ಯವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಸುಮಾರು 7 ಸಾವಿರ ಉಪನ್ಯಾಸಕರು ಈ  ಪರ್ಯಾಯ ವ್ಯವಸ್ಥೆಗೆ ಲಭ್ಯರಿದ್ದಾರೆ ಎಂದು ತಿಳಿದುಬಂದಿದ್ದು, ಹೊಸದಾಗಿ ಆಯ್ಕೆಯಾದ ಹಾಗೂ ಈ ಪ್ರತಿಭಟನೆಯಲ್ಲಿ ಸೇರದ ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ಸೆಳೆಯಲು ಸರ್ಕಾರ  ನಿರ್ಧರಿಸಿದೆ. ಇದಲ್ಲದೇ ಉಪನ್ಯಾಸಕರ ಸಂಘದ ಅಧ್ಯಕ್ಷ  ತಿಮ್ಮಯ್ಯ ಪುರ್ಲೆಯ ನಾಯಕತ್ವ ಸಹಿಸದ ಕೆಲ ಉಪನ್ಯಾಸಕರ ಸಂಘಗಳು ಪ್ರತಿಭಟನೆಯಿಂದ ದೂರ ಉಳಿದಿವೆ. ಅವರನ್ನು  ಮೌಲ್ಯಮಾಪನಕ್ಕೆ ಬಳಸಿಕೊಳ್ಳುವ ಚಿಂತನೆ ಸರ್ಕಾರದಿಂದ ನಡೆದಿದೆ.

ಪರಿಷತ್ ಸದಸ್ಯರ ಮೇಲೆ ಚಪ್ಪಲಿ ಎಸೆತ

ಪಿಯು ಉಪನ್ಯಾಸಕರ ಸಂಘವು ಪ್ರತಿಭಟನೆ ನಡೆಸುತ್ತಿರುವ ಫ್ರೀಡಂ ಪಾರ್ಕ್ ಗೆ ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಅರುಣ್ ಶಹಾಪೂರ್, ಎಸ್.ವಿ. ಸಂಕನೂರ ಹಾಗೂ  ಅಮರನಾಥ್ ಪಾಟೀಲ್ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಉಪನ್ಯಾಸಕರು ಅವರ ಮೇಲೆ ಚಪ್ಪಲಿ ಎಸೆದು ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ  ವ್ಯಕ್ತಪಡಿಸಿದರು.

ಪ್ರತಿಭಟನೆ ವಾಪಸ್ ಸಾಧ್ಯತೆ
ಪಿಯು ಮೌಲ್ಯಮಾಪನಕ್ಕೆ ಅಡ್ಡಿಪಡಿಸಿರುವ ಆರೋಪ ಇರುವ ಹಿನ್ನೆಲೆಯಲ್ಲಿ ಉಪನ್ಯಾಸಕರು ಬ೦ಧನಕ್ಕೆ ಒಳಗಾಗುವ ಸಾಧ್ಯತೆ ಇರುವುದರಿ೦ದ ಶನಿವಾರ ಪ್ರತಿಭಟನೆ ವಾಪಸ್ ಪಡೆಯುವ  ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com