ಬೆಂಗಳೂರಿನಲ್ಲಿ ಈ ವರ್ಷ ಇಷ್ಟೊಂದು ಬಿಸಿಲು ಏಕೆ?

ರಾಜಧಾನಿ ಬೆಂಗಳೂರಿನ ಜನರ ಬಾಯಲ್ಲೀಗ ಬಿರು ಬಿಸಿಲಿನದ್ದೇ ವಿಷಯ. ಅಬ್ಬಾ, ಎಷ್ಟೊಂದು ಸುಡುವ ಬಿಸಿಲು ಅಂತ ಕಳೆದೊಂದು ತಿಂಗಳಿನಿಂದ ಜನರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನರ ಬಾಯಲ್ಲೀಗ ಬಿರು ಬಿಸಿಲಿನದ್ದೇ ವಿಷಯ. ಅಬ್ಬಾ, ಎಷ್ಟೊಂದು ಸುಡುವ ಬಿಸಿಲು ಅಂತ ಕಳೆದೊಂದು ತಿಂಗಳಿನಿಂದ ಜನರು ಚಡಪಡಿಸುತ್ತಿದ್ದಾರೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಹವಾಮಾನ ಹಿತಕರ ಎಂದು ಹಿಂದಿನಿಂದಲೂ ಕೇಳಿಬರುತ್ತಿರುವ ಮಾತು. ಆದರೆ ಈ ವರ್ಷ ಬೆಂಗಳೂರಿಗರು ಇದುವರೆಗೆ ಕಂಡಿರದಷ್ಟು ಬಿಸಿಲಿನ ಧಗೆಯನ್ನು ಅನುಭವಿಸುತ್ತಿದ್ದಾರೆ. ಮೋಡದ ರಚನೆಯಾಗದೆ ಒಣ ವಾತಾವರಣ ಹೊಂದಿರುವುದು ಈ ವರ್ಷ ಇಷ್ಟೊಂದು ಬಿಸಿಲಿಗೆ ಕಾರಣವೆಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಗರಿಷ್ಠ ತಾಪಮಾನ 36.5 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಈ ವರ್ಷ 37.2 ಡಿಗ್ರಿ ಸೆಲ್ಸಿಯಸ್ ನಷ್ಟಾಗಿದ್ದು, 0.7 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗಿದೆ.2006ರಿಂದ ರಾಜಧಾನಿಯಲ್ಲಿ ಸರಾಸರಿ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು, 2011ರಲ್ಲಿ ಮಾತ್ರ 35 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು.

ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ಸರಾಸರಿ ತಾಪಮಾನ 35ರಿಂದ 36 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. 1971ರಿಂದ 2000ದವರೆಗೆ ಉಷ್ಣಾಂಶ 34.1 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಉಪ ನಿರ್ದೇಶಕ ಬಿ.ಪುಟ್ಟಣ್ಣ ತಿಳಿಸಿದ್ದಾರೆ.

ಇನ್ನು ಕೆಲ ದಿನಗಳಲ್ಲಿ ಹಗುರ ಮಳೆ ಬೀಳಬಹುದು. ಕಳೆದ ವರ್ಷ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಸುಮಾರು ಮಳೆಯಾಗಿತ್ತು. ಹಾಗಾಗಿ ಈ ವರ್ಷದಷ್ಟೇ ಬಿಸಿಲು ಇದ್ದಿದ್ದರೂ ಆಗಾಗ ಮಳೆ ಬೀಳುತ್ತಿದ್ದರಿಂದ ಸೆಖೆಯ ಅನುಭವ ಅಷ್ಟಾಗಿ ಆಗುತ್ತಿರಲಿಲ್ಲ ಎನ್ನುತ್ತಾರೆ ಪುಟ್ಟಣ್ಣ.
ಆದರೆ ಬೆಂಗಳೂರು ನಗರದಲ್ಲಿ ಈ ತಿಂಗಳ ಗರಿಷ್ಟ ಉಷ್ಣಾಂಶ ದಾಖಲಾಗಬೇಕಾಗಿದೆ.

ಕೆಲವೊಮ್ಮೆ ಬೇರೆ ಸಂಸ್ಥೆಗಳು ನೀಡುವ ಹವಾಮಾನ ವರದಿ ಜನರಲ್ಲಿ ಗೊಂದಲವನ್ನುಂಟುಮಾಡುತ್ತದೆ. ಈ ತಿಂಗಳು ನಗರದ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗೆ ತಲುಪಿಲ್ಲ ಎಂದು ಪುಟ್ಟಣ್ಣ ಸ್ಪಷ್ಟಪಡಿಸಿದರು.

ಉಷ್ಣಾಂಶ ಅಧಿಕವಾಗುತ್ತಿರುವುದರಿಂದ ಬೆಂಕಿ ಅನಾಹುತಗಳು ಹೆಚ್ಚಾಗುತ್ತವೆ ಎನ್ನುತ್ತಾರೆ ತಜ್ಞರು. ಬೇಸಿಗೆಯ ಬಿರು ಬಿಸಿಲಿನಲ್ಲಿ ಅಗ್ನಿ ಅನಾಹುತಗಳು ಸಾಮಾನ್ಯ.ಈ ವರ್ಷ ಬಿಸಿಲಿಗೆ ಅಗ್ನಿ ಶಾಮಕ ಇಲಾಖೆ ಎಚ್ಚರಿಕೆ ನೀಡಿದೆ. ಉಷ್ಣಾಂಶ ಹೆಚ್ಚಾಗುತ್ತಿದ್ದಂತೆ ಕಸ ಹಾಕುವ ಸ್ಥಳಗಳು, ಸ್ಟೋರ್ ರೂಂ ಮತ್ತು ಕೆಲವು ಕಚೇರಿಗಳು ಬೇಗನೆ ಅಗ್ನಿಗೆ ಸಿಲುಕುತ್ತವೆ.

ಕೆಲವೊಮ್ಮೆ ಪೈಂಟ್ ಗಳು ಕೂಡ ಹಳೆಯದಾದರೆ ಸಾಕಷ್ಟು ನಷ್ಟವುಂಟಾಗುತ್ತವೆ.ಜನರೇಟರ್ ಗಳು ಅಗ್ನಿ ಆಕಸ್ಮಿಕಕ್ಕೆ ಕಾರಣವಾಗುತ್ತವೆ. ಹಾಗಾಗಿ ನಿರ್ವಹಣೆ ಅತಿ ಮುಖ್ಯ ಎನ್ನುತ್ತಾರೆ ಅಗ್ನಿ ಮತ್ತು ತುರ್ತು ಇಲಾಖೆಯ ಮಾಜಿ ಉಪ ನಿರ್ದೇಶಕ ಬಿ.ಕೆ.ಹಂಪಗೋಲ್.

ಕಳೆದ ಮಂಗಳವಾರ ನಗರದ ಚಾನ್ಸರಿ ಪೆವಿಲಿಯನ್ ಹೊಟೇಲ್ ನಲ್ಲಿ ಅಗ್ನಿ ಆಕಸ್ಮಿಕವುಂಟಾಗಿ ಸುಮಾರು 200 ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಮೊನ್ನೆ ಬುಧವಾರ ಚರ್ಚ್ ಸ್ಟ್ರೀಟ್ ನಲ್ಲಿ ಬೆಂಕಿ ಹತ್ತಿ ಉರಿದುಕೊಂಡಿತ್ತು. ಮಾರ್ಚ್ 27ರಂದು 13 ಸಣ್ಣಪುಟ್ಟ ಅಗ್ನಿ ಅವಘಡಗಳು ನಡೆದಿರುವ ವರದಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com