ಖಾಸಗಿ ಕಾಲೇಜುಗಳ ಮೇಲೆ ಸಿಐಡಿ ದಾಳಿ (ಸಂಗ್ರಹ ಚಿತ್ರ)
ಖಾಸಗಿ ಕಾಲೇಜುಗಳ ಮೇಲೆ ಸಿಐಡಿ ದಾಳಿ (ಸಂಗ್ರಹ ಚಿತ್ರ)

ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಖಾಸಗಿ ಕಾಲೇಜುಗಳ ಕೈವಾಡ!

ಸತತ 2 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಮೂಲಕ ಕರ್ನಾಟಕ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದ್ದು..

ಬೆಂಗಳೂರು: ಸತತ 2 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಮೂಲಕ ಕರ್ನಾಟಕ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಮಹತ್ವದ  ತಿರುವು ದೊರೆತಿದ್ದು, ಸೋರಿಕೆಯಲ್ಲಿ ಖಾಸಗಿ ಕಾಲೇಜುಗಳ ಕೈವಾಡವಿರುವುದು ಬಹಿರಂಗವಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸೋನಿಯಾ ನಾರಂಗ್ ನೇತೃತ್ವದ ಸಿಐಡಿ ತಂಡ ಶುಕ್ರವಾರ ರಾಜ್ಯದ ವಿವಿಧ ಪ್ರದೇಶಗಳಲ್ಲಿನ ಸುಮಾರು 11 ಖಾಸಗಿ ಕಾಲೇಜುಗಳ  ಮೇಲೆ ದಾಳಿ ಮಾಡಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು, ಬಳ್ಳಾರಿ, ಮಂಗಳೂರು, ಹಾಗೂ ತುಮಕೂರಿನ 11 ಪ್ರತಿಷ್ಠಿತ ಕಾಲೇಜುಗಳ ಮೇಲೆ ದಾಳಿ  ಏಕಕಾಲದಲ್ಲಿ ದಾಳಿ ನಡೆಸಿದ್ದು, ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ ಕೆಲ ಕಾಲೇಜುಗಳ ಸಿಸಿಟಿವಿ ದೃಶ್ಯಾವಳಿಗಳನ್ನು  ಕೂಡ ಅಧಿಕಾರಿಗಳ ವಶಪಡಿಸಿಕೊಂಡಿದ್ದು, ಇನ್ನು 10 ಕಾಲೇಜುಗಳ ಮೇಲೆ ದಾಳಿ ನಡೆಸಲು ಅಧಿಕಾರಿಗಳು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾವ್ಯಾವ ಕಾಲೇಜಿನ ಮೇಲೆ ದಾಳಿ?
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ನಾರಾಯಣ ಕಾಲೇಜು, ಚೈತನ್ಯಾ  ಕಾಲೇಜು, ಯಲಹಂಕದ ದೀಕ್ಷಾ ಕಾಲೇಜು, ಕೆಂಪಾಪುರದ ಪ್ರೆಸಿಡೆನ್ಸಿ, ಸಂಜಯನಗರದ ಬೃಂದಾವನ,  ಕಲ್ಯಾಣನಗರದ ರಾಯಲ್ ಕಾನ್‍ಕರ್ಡ್, ಮಂಗಳೂರಿನ ಎಕ್ಸ್ ಪರ್ಟ್, ಮಹೇಶ್ ಕಾಲೇಜು, ಬಳ್ಳಾರಿಯ ನಾರಾಯಣ, ಚೈತನ್ಯ ಹಾಗೂ ತುಮಕೂರಿನ ದೀಕ್ಷಾ ಕಾಲೇಜುಗಳ ಮೇಲೆ ಶುಕ್ರವಾರಿ  ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸುಳಿವು ನೀಡಿದ ವ್ಯಾಟ್ಸಪ್
‘ಒಳ್ಳೆಯ ಫಲಿತಾಂಶದ ಮೂಲಕ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಈ ಕಾಲೇಜುಗಳು ಅಕ್ರಮಕ್ಕೆ ಕೈ ಜೋಡಿಸಿವೆ ಎಂಬ ಮಾತುಗಳು ಕೇಳಿ ಬಂದಿದ್ದವು.  ಈ ಕಾರಣಕ್ಕೆ ದಾಳಿ ನಡೆಸಿ ಸಿಬ್ಬಂದಿಯ  ಪೂರ್ವಾಪರ ಪರಿಶೀಲಿಸಲಾಗಿದೆ. ಅಲ್ಲದೆ, ಈ ಕಾಲೇಜುಗಳಿಗೆ ಹತ್ತಿರದಲ್ಲಿರುವ ಟ್ಯುಟೋರಿಯಲ್‌ಗಳಿಗೂ ತೆರಳಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.  ಪ್ರಶ್ನೆಪತ್ರಿಕೆ ವಾಟ್ಸಪ್ ಮೂಲಕ ಹೆಚ್ಚಿನವರಿಗೆ ತಲುಪಿರುವುದು ಈ ಕಾಲೇಜುಗಳ ವಿದ್ಯಾರ್ಥಿಗಳಿಂದಲೇ. ಆದರೆ ಮರುಪರೀಕ್ಷೆ ಇದ್ದ ಕಾರಣ ಅವರನ್ನು ವಿಚಾರಣೆ ನಡೆಸುವ ಗೋಜಿಗೆ  ಹೋಗಿರಲಿಲ್ಲ. ಪರೀಕ್ಷೆ ಮುಗಿದ ಬಳಿಕ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕಾಲೇಜುಗಳ ಪಾತ್ರದ  ಬಗ್ಗೆ ಸುಳಿವು ಸಿಕ್ಕಿತು’ ಎಂದು ಅಧಿಕಾರಿಯೊಬ್ಬರು ಮಾಹಿತಿ  ನೀಡಿದ್ದಾರೆ.

ವಿದ್ಯಾರ್ಥಿಗಳೇ ಆತಂಕ ಬೇಡ, ಮತ್ತೆ ಮರು ಪರೀಕ್ಷೆ ಇಲ್ಲ: ಕಿಮ್ಮನೆ ರತ್ನಾಕರ
ಸತತ 2 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದ್ದ ರಸಾಯನ ಶಾಸ್ತ್ರ ಪರೀಕ್ಷೆ ಮುಕ್ತಾಯವಾಗಿದ್ದರೂ, ವಿದ್ಯಾರ್ಥಿಗಳ ಆಂತಕ ಮಾತ್ರ ಇನ್ನೂ ದೂರವಾಗಿಲ್ಲ.  ಮತ್ತೆ ಪ್ರಶ್ವೆ ಪತ್ರಿಕೆ ಸೋರಿಕೆಯಾಗಿದೆ ಎಂದು ಕೆಲ ದುಷ್ಕರ್ಮಿಗಳು ವಾಟ್ಸಪ್ ಮತ್ತು ಎಸ್ ಎಂಎಸ್ ಗಳಲ್ಲಿ ಹಬ್ಬಿಸಿದ್ದ ಮಾಹಿತಿ ಶುಕ್ರವಾರ ವಿದ್ಯಾರ್ಥಿಗಳನ್ನು ನಿಜಕ್ಕೂ ಆತಂಕ್ಕೆ ದೂಡಿತ್ತು. ಅಬ್ಬಾ  ಪರೀಕ್ಷೆ ಮುಗಿಯಿತು ಎಂದು ನೆಮ್ಮದಿಯಾಗಿದ್ದ ವಿದ್ಯಾರ್ಥಿಗಲು ಈ ಸಂದೇಶಗಳನ್ನು ನೋಡುತ್ತಿದ್ದಂತೆಯೇ ಮತ್ತೆ ಮರು ಪರೀಕ್ಷೆಯೇ ಎಂದು ತಲೆ ಮೇಲೆ ಕೈ ಇಡುವಂತಾಗಿತ್ತು. ಆದರೆ ಈ ಎಲ್ಲ  ಊಹೋಪೋಹಗಳಿಗೆ ತೆರೆ ಎಳೆದಿರುವ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಆತಂಕ ಪಡುವ ಅಗತ್ಯವಿಲ್ಲ. ಮರು ಪರೀಕ್ಷೆ ನಡೆಸುವುದಿಲ್ಲ ಎಂದು  ಅಶ್ವಾಸನೆ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com