

ಮಂಡ್ಯ: ಪ್ರತಿಭಟನಾಕಾರರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರೆ ಹೆಚ್ಚು ಸುದ್ದಿಯಾಗುತ್ತಾರೆ. ಜಾತಿಯಾಧಾರಿತ ಮೀಸಲಾತಿ ವಿರೋಧಿಸಿ ಇತ್ತೀಚೆಗೆ ವಿಜಯವಾಡದಲ್ಲೊಬ್ಬ ಎಂಜಿನಿಯರಿಂಗ್ ಪದವೀಧರ ಮೊಬೈಲ್ ಟವರ್ ಹತ್ತಿ ಪ್ರತಿಭಟನೆ ನಡೆಸಿದ್ದ. ನಂತರ ಅವನನ್ನು ಕೆಳಗಿಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಹೀಗೆ ಕೆಲವರು ಸರ್ಕಾರದ, ಅಧಿಕಾರಿಗಳ ಗಮನ ಸೆಳೆಯಲು ಬೇರೆ ಬೇರೆ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಾರೆ.
ಇಂದು ಮಂಡ್ಯದಲ್ಲಿ ಆಗಿದ್ದು ಇದೇ ರೀತಿ. ನೌಕರಿ ಖಾಯಂ ಮಾಡಲು ಆಗ್ರಹಿಸಿ ಕೈಯಲ್ಲಿ ವಿಷದ ಬಾಟಲಿ ಹಿಡಿದು ಕ್ರೇನ್ ಕಂಬ ಹತ್ತಿ ನಾಲ್ವರು ನೌಕರರು ಪ್ರತಿಭಟನೆ ನಡೆಸುತ್ತಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಕೆಎಂ ದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ನಾಲ್ವರು ನೌಕರರು ಕ್ರೇನ್ ಕಂಬ ಹತ್ತಿ ಕುಳಿತು ಕೆಲಸ ಖಾಯಂ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಮಗೆ ಖಾಯಂ ಕೆಲಸ ನೀಡಬೇಕೆಂದು ಆಗ್ರಹಿಸಿ ಕಳೆದ 2 ತಿಂಗಳಿನಿಂದ ನೌಕರರಾದ ಸಂತೋಷ್, ಮಹಾದೇವು, ಮಹಾದೇವಸ್ವಾಮಿ, ಮಧು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಇಂದು ಗಮನ ಸೆಳೆಯುವ ಮಟ್ಟಕ್ಕೆ ತಲುಪಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ದೌಡಾಯಿಸಿದ್ದು, ನೌಕರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ.