
ಬೆಂಗಳೂರು: ರಾಜ್ಯೋತ್ಸವ ಕೊಡುಗೆಯಾಗಿ ನವೆಂಬರ್ 1ರ ವೇಳೆಗೆ ನಮ್ಮ ಮೆಟ್ರೋ ಒಂದನೇ ಹಂತದ ಯೋಜನೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಸುರಂಗ ಕೊರೆಯುವ ಗೋದಾವರಿ ಯಂತ್ರ ಮಂಗಳವಾರ ತನ್ನ ಕೆಲಸ ಪೂರ್ಣಗೊಳಿಸುವುದನ್ನು ಕಂಡು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆಜೆ ಜಾರ್ಜ್, ಗೋದಾವರಿ ತನ್ನ ಕೆಲಸ ಮುಗಿಸಿದೆ. ಇನ್ನು 3-4 ತಿಂಗಳಲ್ಲಿ ಸುರಂಗಗಳನ್ನು ಕೊರೆಯುವ ಕೆಲಸ ಮುಗಿಯಲಿದ್ದು, ಹಳಿ ಹಾಕುವ ಕೆಲಸ ಆರಂಭವಾಗಲಿದೆ. ಹಾಗೆಯೇ, ಪೂರ್ವ-ಪಶ್ಚಿಮ ಕಾರಿಡಾರ್‌ನ ಕೆಲಸ ಸಂಪೂರ್ಣಗೊಂಡಿದ್ದು, 10 ದಿನಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮೆಟ್ರೋ ಮುಕ್ತವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಈ ಮಾರ್ಗದ ಉದ್ಘಾಟನೆಗೆ ಅನುಮತಿ ಕೋರಲಾಗಿದೆ ಎಂದು ತಿಳಿಸಿದರು.
ಕನ್ನಡಿಗರಿಗೆ ರಾಜ್ಯೋತ್ಸವದ ಉಡುಗೊರೆ
ಇನ್ನು 6 ತಿಂಗಳೊಳಗೆ ಪೂರ್ವ-ಪಶ್ಚಿಮ ಕಾರಿಡಾರ್ ಮೆಟ್ರೋದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತಿದ್ದು, ನವೆಂಬರ್‌ನಲ್ಲಿ ಮೊದಲನೇ ಹಂತದ ಮೆಟ್ರೋ ಯೋಜನೆ ಲೋಕಾರ್ಪಣೆ ಮಾಡಿ ರಾಜ್ಯದ ಜನರಿಗೆ ಕನ್ನಡ ರಾಜ್ಯೋತ್ಸವದ ಕೊಡುಗೆ ನೀಡಲಾಗುವುದು ಎಂದು ಜಾರ್ಜ್ ಹೇಳಿದರು. ಇದೇ ವೇಳೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ ಮಾತನಾಡಿ, "ಮೆಟ್ರೋ ಕಾಮಗಾರಿ ವೇಳೆ ಎದುರಾಗುತ್ತಿರುವ ಸವಾಲುಗಳನ್ನು ನಿವಾರಿಸಿ ಕೆಲಸ ಮಾಡಲಾಗುತ್ತಿದೆ. ಪೂರ್ವ-ಪಶ್ಚಿಮ ಕಾರಿಡಾರ್‌ನ ಕೆಲಸಗಳು ಮುಗಿದಿದ್ದು, ರೈಲ್ವೆ ಸುರಕ್ಷತಾ ಆಯುಕ್ತರು ಹೇಳಿದ್ದ ಬದಲಾವಣೆಗಳನ್ನು ಕೂಡ ಮಾಡಲಾಗಿದೆ" ಎಂದು ತಿಳಿಸಿದರು.
ಪಾದಚಾರಿ ಮಾರ್ಗ ಅಭಿವೃದ್ಧಿ
ಮೆಟ್ರೋ ಯೋಜನೆ ಪೂರ್ಣಗೊಂಡ ನಂತರ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ. ಅದರೊಂದಿಗೆ ಪಾದಚಾರಿಗಳು ಹೆಚ್ಚಾಗಲಿದ್ದಾರೆ. ಹೀಗಾಗಿಯೇ ಮೆಟ್ರೋ ನಿಲ್ದಾಣಗಳ ಬಳಿಯ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ನಗರ ಭೂಸಾರಿಗೆ ನಿರ್ದೇಶನಾಲಯ ನಿರ್ದೇಶಕಿ ಮಂಜುಳಾ ತಿಳಿಸಿದ್ದಾರೆ. ಈ ಕುರಿತಂತೆ ಬಿಬಿಎಂಪಿಯೊಂದಿಗೂ ಮಾತುಕತೆ ನಡೆಸಲಾಗಿದೆ. ಅದರೊಂದಿಗೆ ಬಸ್ ನಿಲ್ದಾಣದ ಅಭಿವೃದ್ಧಿ ಮಾಡುವಂತೆಯೂ ಸೂಚಿಸಲಾಗಿದೆ. ಇನ್ನು, ಮೆಜೆಸ್ಟಿಕ್‌ನ ಮೆಟ್ರೋ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ನೈಋತ್ಯ ರೈಲು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು ಪಾದಚಾರಿ ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
Advertisement