

ಕೊಳ್ಳೆಗಾಲ (ಚಾಮರಾಜನಗರ): ರಾಜ್ಯದಲ್ಲಿ ಸಂಭವಿಸಿರುವ ಭೀಕರ ಬರಗಾಲದ ಛಾಯೆ ಇದೀಗ ಮಕ್ಕಳ ಬಿಸಿಯೂಟದ ಮೇಲೂ ಬಿದ್ದಿದ್ದು, ನೀರಿನ ಅಭಾವಕ್ಕೆ ಬಿಸಿಯೂಟ ಸ್ಥಗಿತಗೊಳ್ಳಲಿದೆಯೇ ಎಂಬ ಹಲವು ಅನುಮಾನಗಳು ಮೂಡತೊಡಗಿವೆ.
ರಾಜ್ಯದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಬಿಸಿಯೂಟ ತಯಾರಿಸಲು ಇದೀಗ ನೀರಿನ ಸಮಸ್ಯೆ ಎದುರಾಗಿದೆ. ಹಲವು ಶಾಲೆಗಳಲ್ಲಿ ಪಡಿತರವಿದ್ದರೂ ಆಹಾರ ತಯಾರಿಸಲು ನೀರು ದೊರಕುತ್ತಿಲ್ಲ. ಹೀಗಾಗಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸಮಸ್ಯೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬುಡಕಟ್ಟು ಪ್ರದೇಶಗಳಲ್ಲಿ ಬೇಸಿಗೆ ಕಾಲದ ರಜೆಯಲ್ಲಿಯೂ ಮಕ್ಕಳಿಗೆ ಬಿಸಿಯೂಟವನ್ನು ನೀಡಬೇಕೆಂದು ನಿಯಮವನ್ನು ಹೇರಲಾಗಿದೆ. ಹೀಗಾಗಿ ಕೆಲವು ಪ್ರದೇಶಗಳ ಶಿಕ್ಷಕರು ಇದೀಗ ಮಣ್ಣಿನ ನೀರನ್ನು ಶುದ್ಧೀಕರಿಸಿ 30 ಮಕ್ಕಳಿಗಾಗುವಷ್ಟು ಆಹಾರವನ್ನು ತಯಾರು ಮಾಡುತ್ತಿದ್ದಾರೆ.
ಬರ ಛಾಯೆ ಇದೀಗ ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದ ಜನತೆ ಮೇಲೆ ತೀವ್ರವಾಗಿ ಪರಿಣಾಮ ಬೀರಿದ್ದು, ಇಲ್ಲಿನ ಮಕ್ಕಳಿಗೆ ಸಿಗುವ ಬಿಸಿಯೂಟ ಸ್ಥಗಿತಗೊಳ್ಳಲು ಕೊನೆಯ ಹಂತದಲ್ಲಿದೆ. ಒಂದು ವೇಳೆ ಸರ್ಕಾರ ನೀರಿನ ಟ್ಯಾಂಕರ್ ಗಳ ಮೂಲಕ ಅಥವಾ ಮಳೆಯಾದರೆ ಮಾತ್ರ ಸಮಸ್ಯೆ ಬಗೆಹರಿಯಬಹುದಾಗಿದೆ.
ಇನ್ನು ಮುಡುಗನನೆ ಬಾವಿಯಲ್ಲಿನ ನೀರು 30 ಅಡಿಗೆ ಇಳಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದು ಕೂಡ ಬತ್ತಿ ಹೋಗುವ ಸಾಧ್ಯಗಳಿವೆ. ಈ ಬಾವಿಯ ನೀರನ್ನೇ ಬಿಸಿಯೂಟ ತಯಾರು ಮಾಡಲು ಬಳಸಿಕೊಳ್ಳಲಾಗುತ್ತಿತ್ತು. ಬಾವಿಯ ನೀರು ಇನ್ನು 6-7 ದಿನಗಳ ಕಾಲ ಬಳಕೆಗೆ ಬರಬಹುದು ಎಂದು ಶಿಕ್ಷಕ ವೀರಪ್ಪ ಅವರು ಹೇಳಿದ್ದಾರೆ.
ಒಂದು ವೇಳೆ ಬಾವಿ ನೀರು ಬತ್ತಿಹೋದರೆ, ಮಕ್ಕಳಿಗೆ ಬಿಸಿಯೂಟ ನೀಡಲು ಸಾಧ್ಯವಾಗುವುದಿಲ್ಲ. ಶಾಲೆಯಿಂದ ಮನೆಗೆ 7 ಕಿ.ಮೀ ಇದೆ. ತಿಂಗಳಿಗೊಮ್ಮೆ ಕತ್ತೆ ಮೇಲೆ ಹೊರಿಸಿಕೊಂಡು ಧಾನ್ಯಗಳನ್ನು ತರಲಾಗುತ್ತದೆ. ತರಕಾರಿಗಳನ್ನು ನಾನೇ ಹೊತ್ತು ತರುತ್ತೇನೆ. ಆದರೆ, ಇದೀಗ ನೀರಿನ ಸಮಸ್ಯೆ ಎದುರಾಗಿದ್ದು, ಅಸಹಾಯಕರಾಗುತ್ತಿದ್ದೇವೆಂದು ಹೇಳಿದ್ದಾರೆ.
2 ಬಿಂದಿಗೆ ನೀರು ತರಲು ಮಹಿಳೆಯರು 6 ಕಿ.ಮೀ ದೂರ ನಡೆದು ಹೋಗಬೇಕು. ಇನ್ನು ಸ್ನಾನ ಮಾಡಬೇಕೆಂದರೆ ಅರಣ್ಯ ಪ್ರದೇಶದ ಒಳಗೆ ಹೋಗಬೇಕು. ಇಲ್ಲಿನ ಜನ 10 ದಿನಕ್ಕೊಮ್ಮೆ ಸ್ನಾನ ಮಾಡುವಂತಾಗಿದೆ ಎಂದು ಸ್ಥಳೀಯ ಚಿಕ್ಕ ಮಡು ಎಂಬುವವರು ಹೇಳಿಕೊಂಡಿದ್ದಾರೆ.
ಇನ್ನು ಇದೇ ಪರಿಸ್ಥಿತಿ ಅರಣ್ಯ ಪ್ರದೇಶದ ಸುತ್ತಮುತ್ತಲಿರುವ ದೊಡ್ಡನ್ನೆ, ಕೊಕಬರೆ, ಥೋಕೆರೆ ಮತ್ತು ಇನ್ನಿತರೆ ಹಳ್ಳಿಗಳಲ್ಲಿಯೂ ಇದೆ.
ಈ ಪ್ರದೇಶದಲ್ಲಿ ನಿರ್ಮಿತವಾಗಿರುವ ಸೌರಶಕ್ತಿಚಾಲಿತ ಪಂಪ್ ಗಳು ಕೂಡ ತುಸ್ಲಿಕೆರೆ ಮತ್ತು ಇಂಡಿಗನಥ ಗ್ರಾಮದ ಹಳ್ಳಿಯ ಜನತೆಗೆ ನೀರು ಸಿಗುವ ಸಲುವಾಗಿ ಎನ್ ಜಿಒಗಳ ಸಹಾಯದಿಂದ ನಿರ್ಮಿತವಾಗಿದೆ. ಕುಂಬಡಿಕಿ ಮತ್ತು ದೊಡ್ಡನ್ನೆ ಹಳ್ಳಿಗಳಲ್ಲಂತೂ ರಸ್ತೆಗಳ ಸಂಪರ್ಕವೇ ಇಲ್ಲ. ಇನ್ನು ಶಾಲೆಯಲ್ಲಿ ತಡವಾದರೆ ಇಲ್ಲಿನ ಶಿಕ್ಷಕರು ಶಾಲೆಯಲ್ಲಿಯೇ ಉಳಿಯಬೇಕಾಗುತ್ತದೆ. ಇಲ್ಲದೇ ಹೋದರೆ ಮಲ್ಲೆಮಹದೇಶ್ವರ ಬೆಟ್ಟ ತಲುಪಲು 7-10 ಕಿಮೀ ಗಟ್ಟಲೆ ನಡೆದು ಹೊಗಬೇಕಾಗುತ್ತದೆ ಎಂದು ಇಂಡಿಗನಾಥ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ರಾಘವೇಂದ್ರ ಅವರು ಹೇಳಿದ್ದಾರೆ.
ಈ ಪ್ರದೇಶ ಅರಣ್ಯ ರಕ್ಷಿತ ಪ್ರದೇಶವಾಗಿದ್ದು, ಬೋರ್ವೆಲ್ ಕೊರೆತಕ್ಕೆ ನಿಷೇಧ ಹೇರಲಾಗಿದೆ. ರಸ್ತೆಗಳಲ್ಲಿ ಸೋಲಾರ್ ಮೂಲಕ ವಿದ್ಯುತ್ ನ್ನು ನೀಡಲಾಗುತ್ತಿದೆ. ಆದರೆ, ರಾತ್ರಿ ವೇಳೆಯಲ್ಲಿ ಮಾತ್ರ ರಸ್ತೆಯಲ್ಲಿ ಬೆಳಕಿರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.
ಜಿಲ್ಲಾ ಆಡಳಿತ ಮಂಡಳಿ ಮಕ್ಕಳಿಗೆ ಬಿಸಿಯೂಟ ಒದಗಿಸಲು ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡಲಿದೆ. ಅರಣ್ಯ ಕಾಯ್ದೆಗಳ ನಿಯಮದಿಂದಾಗಿ ಬೋರ್ವೆಲ್ ಕೊರತಕ್ಕೆ ಹಾಗೂ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭಾರತಿ ಅವರು ಹೇಳಿದ್ದಾರೆ.