
ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಭೀಕರ ಜೋಡಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವೃದ್ಧ ದಂಪತಿಗಳನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈಯ್ಯಲಾಗಿದೆ.
ಪುಲಕೇಶಿನಗರ ಸಮೀಪದ ಕೋಲ್ಸ್‌ರಸ್ತೆಯಲ್ಲಿರುವ 3 ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದ ಪರ್ವತರಾಜ್(61) ಹಾಗೂ ಚಂದ್ರಕಲಾ(55) ಎಂಬುವವರನ್ನು ದುಷ್ಕರ್ಮಿಗಳು ಚೂರಿಯಿಂದ ಹಲವುಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ಶುಕ್ರವಾರ ರಾತ್ರಿ ಕೊಲೆಯಾಗಿದ್ದು, ಭಾನುವಾರ ಸಂಜೆ ಮೃತದೇಹಗಳು ಪತ್ತೆಯಾಗಿವೆ. ವೃದ್ಧ ದಂಪತಿಗಳ ಪುತ್ರ ಕಿರಣ್ ವಿದೇಶದಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯ ನೆಲಮಹಡಿ, 1 ಮತ್ತು 2ನೇ ಮಹಡಿಯಲ್ಲಿ ವಾಣಿಜ್ಯ ವ್ಯವಹಾರಗಳಿಗೆ ಬಾಡಿಗೆ ನೀಡಲಾಗಿದ್ದು, ಇದರಿಂದ ಬರುತ್ತಿದ್ದ ಹಣದಲ್ಲಿ ಈ ವೃದ್ಧ ದಂಪತಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಥಳೀಯರ ಮಾಹಿತಿಯಂತೆ ಕಳೆದ ಶುಕ್ರವಾರ ಅಂದರೆ ಏಪ್ರಿಲ್ 22ರಂದು ಬೆಳಗ್ಗೆ 8.30ರಲ್ಲಿ 2ನೇ ಮಹಡಿಯಲ್ಲಿರುವವರ ಜತೆಗೆ ದಂಪತಿ ಮಾತನಾಡಿದ್ದರು. ಇದಾದ ನಂತರ ದಂಪತಿಗಳು ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಭಾನುವಾರ ಸಂಜೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬಾಗಿಲು ಮುರಿದು ಮನೆ ಪ್ರವೇಶಿದಾಗ ಅಲ್ಲಿ ಯಾರೂ ಕಂಡಿಲ್ಲ. ಕೊನೆಗೆ ಮಲಗುವ ಕೊಠಡಿ ಬಾಗಿಲು ಮುರಿದಾಗ ಕೊಳೆತ ಸ್ಥಿತಿಯಲ್ಲಿ ವೃದ್ಧ ದಂಪತಿಗಳ ಶವಗಳು ಪತ್ತೆಯಾಗಿದೆ.
ಪರ್ವತರಾಜ್ ಈ ಹಿಂದೆ ಹಳೇ ಪೇಪರ್ ಮಾರಾಟ ಸೇರಿ ಸಣ್ಣಪುಟ್ಟ ವ್ಯವಹಾರ ನಡೆಸುತ್ತಿದ್ದರು. 20 ವರ್ಷಗಳಿಂದ ಕೋಲ್ಸ್ ರಸ್ತೆಯಲ್ಲಿ ವಾಸವಿದ್ದರು. ಮನೆಗೆ ಬಂದಿರುವ ದುಷ್ಕರ್ಮಿಗಳು ನಡುಮನೆಯಲ್ಲಿ ದಂಪತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ನಂತರ ಶವಗಳನ್ನು ಮಲಗುವ ಕೊಠಡಿಗೆ ಎಳೆದೊಯ್ದು ಹಾಕಿದ್ದು, ಹೊರಗಿನಿಂದ ಬೀಗ ಹಾಕಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪರಿಚಿತರ ಕೃತ್ಯ ಶಂಕೆ
ಸ್ಥಳೀಯರು ಹೇಳಿರುವಂತೆ ದಂಪತಿಗಳ ಮನೆಗೆ ಆಗಾಗ ಕೆಲ ಮದುವೆ ದಲ್ಲಾಳಿಗಳು ಆಗಮಿಸುತ್ತಿದ್ದರು. ಹೀಗಾಗಿ ಅವರೇ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಹೇಳಿದ್ದಾರೆ. ಇನ್ನು ದಂಪತಿಗಳು ಹತ್ಯೆಗೀಡಾಗಿರುವುದು ಖಚಿತವಾಗುತ್ತಿದ್ದಂತೆಯೇ ವಿದೇಶದಲ್ಲಿದ್ದ ಅವರ ಮಗನಿಗೆ 2ನೇ ಅಂತಸ್ತಿನಲ್ಲಿ ಬಾಡಿಗೆಗೆ ಇರುವ ಸಾದಿಕ್ ಎನ್ನುವವರು ವಿಚಾರ ಮುಟ್ಟಿಸಿದ್ದಾರೆ. ಅಲ್ಲದೇ ಮೇ 8ರಂದು ತಮ್ಮ ಪೋಷಕರನ್ನು ಕಾಣಲು ಅವರ ಮಗ ಬೆಂಗಳೂರಿಗೆ ಬರುವವರಿದ್ದರು. ಆದರೆ ಅಷ್ಟರಲ್ಲೇ ದುಷ್ಕರ್ಮಿಗಳು ದುಷ್ಕೃತ್ಯ ನಡೆಸಿದ್ದಾರೆ.
ಇನ್ನು ಪೊಲೀಸ್ ಮೂಲಗಳ ಪ್ರಕಾರ ಹಂತಕರು ಮನೆಯೊಳಗೆ ಬಲವಂತವಾಗಿ ಪ್ರವೇಶಿಸಿರುವ ಕುರುಹುಗಳಿಲ್ಲ. ಆದ್ದರಿಂದ ಪರಿಚಿತ ವ್ಯಕ್ತಿಗಳೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಪದೇಪದೆ ಇರಿದು ಹತ್ಯೆ ಮಾಡಿದ್ದಾರೆ. ಹಣಕಾಸು ಅಥವಾ ಆಸ್ತಿ ವಿಚಾರಕ್ಕೆ ಹತ್ಯೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕಟ್ಟಡದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಮನೆಯಲ್ಲಿ ಕಳುವಾಗಿರುವ ವಸ್ತುಗಳ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ. ಸಂಬಂಧಿಕರು ಅಥವಾ ವಿದೇಶದಲ್ಲಿರುವ ಅವರ ಮಗ ನಗರಕ್ಕೆ ಬಂದ ನಂತರ ಆ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಹಂತಕರ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆದಷ್ಟು ಬೇಗ ಬಂಧಿಸಲಾಗುತ್ತದೆ.
-ಸತೀಶ್‌ಕುಮಾರ್ ಡಿಸಿಪಿ, ಪೂರ್ವ ವಿಭಾಗ
Advertisement