ಉದ್ಯಾನ ನಗರಿಯಲ್ಲಿ ದಾಖಲೆ ಬಿಸಿಲು; ಭಾನುವಾರ 39.2 ಡಿಗ್ರಿ ದಾಖಲು
ಬೆಂಗಳೂರು: ಉದ್ಯಾನನಗರಿ ಎಂದು ಖ್ಯಾತಿಯಾಗಿರುವ ಬೆಂಗಳೂರಿನಲ್ಲಿ ಮತ್ತೆ ದಾಖಲೆ ಉಷ್ಣಾಂಶ ದಾಖಲಾಗಿದ್ದು, ಭಾನುವಾರ ಬರೊಬ್ಬರಿ 39.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಭಾನುವಾರದ ಬೆಂಗಳೂರಿನ ಉಷ್ಣಾಂಶ 85 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದು, 85 ವರ್ಷಗಳ ಹಿಂದೆ ಅಂದರೆ 1931ರ ಏಪ್ರಿಲ್ 30ರಂದು ನಗರದಲ್ಲಿ 38.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದು ಈ ವರೆಗಿನ ಏಪ್ರಿಲ್ ತಿಂಗಳ ಗರಿಷ್ಠ ಉಷ್ಣಾಂಶವಾಗಿತ್ತು. ಆದರೆ ನಿನ್ನೆ ಬೆಂಗಳೂರಿನಲ್ಲಿ 39.2 ಡಿಗ್ರಿ ಉಷ್ಣಾಂಶ ದಾಖಲಾಗುವುದರೊಂದಿಗೆ ಈ ಹಿಂದಿನ ದಾಖಲೆಯನ್ನು ಮುರಿದಿದೆ.
ಹವಾಮಾನ ಇಲಾಖೆ ಮೂಲಗಳ ಪ್ರಕಾರ ಭಾನುವಾರ ಮಧ್ಯಾಹ್ನ 2.30 ರಿಂದ 4 ಗಂಟೆಯ ಅವಧಿಯಲ್ಲಿ ಈ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಬಿಸಿಲಿನ ಪ್ರಮಾಣ 38–39 ಡಿಗ್ರಿ ಸೆಲ್ಸಿಯಸ್ ಸಮೀಪದಲ್ಲಿಯೇ ಇರುವ ಲಕ್ಷಣಗಳಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಗರ ಮಾತ್ರವಲ್ಲ, ರಾಜ್ಯದ ವಿವಿಧೆಡೆ ಒಡಿಶಾ ಮತ್ತು ಜಾರ್ಖಂಡ್ ರೀತಿಯಲ್ಲಿ ಬಿಸಿಗಾಳಿ ಕಾಣಿಸಿಕೊಳ್ಳಲಿದೆ’ ಎಂದು ಹವಾಮಾನ ಇಲಾಖೆಯ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ತಿಳಿಸಿದ್ದಾರೆ.
‘ಸಾಮಾನ್ಯವಾಗಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಕಡೆಯಿಂದ ಬೀಸುವ ಗಾಳಿ ತೇವಾಂಶ ಹೊತ್ತು ತರುತ್ತದೆ. ಆದರೆ ಈ ಬಾರಿ ಆ ಗಾಳಿಯಲ್ಲಿ ತೇವಾಂಶವಿಲ್ಲದ ಕಾರಣ ಬಿಸಿಲಿನ ಧಗೆ ಹೆಚ್ಚು ಎನಿಸುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಕಟ್ಟಡಗಳು ಮತ್ತು ರಸ್ತೆಗಳಿಗೂ ಕಾಂಕ್ರೀಟ್ ಬಳಕೆ, ವಾಹನಗಳ ಮತ್ತು ಜನಸಂಖ್ಯೆ ದಟ್ಟಣೆಯಂತಹ ಹಲವು ಕಾರಣಗಳಿಂದ ಬಿಸಿಲು ಅಧಿಕವಾಗುತ್ತಿದೆ. ಕಳೆದ ಕೆಲ ದಿನಗಳ ವಾತಾವರಣ ಗಮನಿಸಿದರೆ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಲಕ್ಷಣಗಳಿವೆ’ ಎಂದು ಗೀತಾ ಅಗ್ನಿ ಹೋತ್ರಿ ಅಭಿಪ್ರಾಯಪಟ್ಟರು.
ಒಟ್ಟಾರೆ ಉದ್ಯಾನ ನಗರಿ ಮತ್ತು ರಾಜಧಾನಿ ಬೆಂಗಳೂರು ಮತ್ತೊಂದು ಬಿರು ಬೇಸಿಗೆಗೆ ಸಾಕ್ಷಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ