
ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್ ನ ಸುರಂಗಮಾರ್ಗ ಸಂಚಾರಕ್ಕೆ ಸಿದ್ಧವಾಗಿದ್ದು, ಇದೇ ಶುಕ್ರವಾರದಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಮತ್ತು ಸಿಎಂ ಸಿದ್ದರಾಮಯ್ಯ ಅವರಿಂದ ಹಸಿರು ನಿಶಾನೆ ದೊರೆಯಲಿದೆ.
ನಮ್ಮ ಮೆಟ್ರೋ ಒಂದನೇ ಹಂತದ ಪೂರ್ವ-ಪಶ್ಚಿಮ ಕಾರಿಡಾರ್‌ನ 4.82 ಕಿ.ಮೀ. ಉದ್ದದ ಸುರಂಗ ಮಾರ್ಗದ ಉದ್ಘಾಟನೆ ದಿನಾಂಕವನ್ನು ಬಿಎಂಆರ್‌ಸಿಎಲ್ ಮತ್ತೆ ಬದಲಿಸಿದೆ. ಈ ಮೊದಲು ನಿಗದಿಯಾಗಿದ್ದಂತೆ ಮೇ 4ರ ಬದಲು ಇದೇ ಶುಕ್ರವಾರವೇ ಅಂದರೆ ಏಪ್ರಿಲ್ 29ರಂದು ಸುರಂಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದೆ. ಏಪ್ರಿಲ್ 30ರಿಂದ ನೇರಳೆ ಮೆಟ್ರೋ (ಪೂರ್ವ-ಪಶ್ಚಿಮ ಕಾರಿಡಾರ್)ಮಾರ್ಗದಲ್ಲಿ ಮೆಟ್ರೋ ರೈಲು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಆ ಮೂಲಕ ಇದು ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗ ಎಂಬ ಖ್ಯಾತಿಗೂ ಪಾತ್ರವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಏಪ್ರಿಲ್ 29ರಂದು ಸಂಜೆ 6 ಗಂಟೆಗೆ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಕಟಣೆ ತಿಳಿಸಿದೆ. ಸುರಂಗ ಮಾರ್ಗದ ಸಂಚಾರ ಆರಂಭಗೊಂಡರೆ ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ಒಟ್ಟು 18 ಕಿ.ಮೀ. ಉದ್ದದ ಮಾರ್ಗದಲ್ಲಿ ಸಂಪೂರ್ಣ ಸಂಚಾರ ಸಾಧ್ಯವಾಗಲಿದೆ.
ಈ ಮೊದಲು ಬಿಎಂಆರ್ ಸಿಎಲ್ ಏಪ್ರಿಲ್ 14 ಮತ್ತು ಮೇ 4ರಂದು ಮಾರ್ಗ ಉದ್ಘಾಟನೆ ಮಾಡುವುದಾಗಿ ಪ್ರಕಟಿಸಿತ್ತು. ಆದರೆ ಏಪ್ರಿಲ್ 14ರಂದು ನಡೆಯುವ ಸಮಾರಂಭಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಈ ಮಾರ್ಗದ ನಿರ್ಮಾಣಕ್ಕೆ ಸಾಲ ನೀಡಿರುವ ಜಪಾನ್ ಮತ್ತು ಫ್ರಾನ್ಸ್ ಬ್ಯಾಂಕ್‌ಗಳ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮೇ 4ಕ್ಕೆ ಮುಂದೂಡಲಾಗಿತ್ತು. ಆದರೆ ಬಿಎಂಆರ್‌ಸಿಎಲ್ ಇದೀಗ ಮತ್ತೆ ದಿಢೀರನೆ ತನ್ನ ನಿರ್ಧಾರ ಬದಲಿಸಿ, ಏಪ್ರಿಲ್ 29ಕ್ಕೆ ಉದ್ಘಾಟನೆ ದಿನಾಂಕವನ್ನು ಮರುನಿಗದಿ ಮಾಡಿದೆ.
33 ನಿಮಿಷದಲ್ಲಿ 18 ಕಿ.ಮೀ. ಸಂಚಾರ
ಸುರಂಗ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಪೂರ್ವ-ಪಶ್ಚಿಮ ಕಾರಿಡಾರ್‌ನ 18.10 ಕಿ.ಮೀ. ಉದ್ದದ ಮಾರ್ಗವನ್ನು ಕೇವಲ 33 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಇಷ್ಟು ಉದ್ದದ ಮಾರ್ಗ ಸಂಚಾರಕ್ಕೆ 40 ರು. ಪ್ರಯಾಣ ದರ ನಿಗದಿ ಮಾಡುವ ಸಾಧ್ಯತೆಯಿದೆ.
ಸುರಂಗ ಮಾರ್ಗದ ನಿಲ್ದಾಣಗಳು:
ಮಿನ್ಕ್ಸ್ ಚೌಕ (ಕಬ್ಬನ್ ಉದ್ಯಾನ), ವಿಧಾನಸೌಧ, ಸರ್ ಎಂ.ವಿಶ್ವೇಶ್ವರಯ್ಯ (ಸೆಂಟ್ರಲ್ ಕಾಲೇಜ್), ಕೆಂಪೇಗೌಡ ಇಂಟರ್‌ಸೆಕ್ಷನ್ (ಮೆಜೆಸ್ಟಿಕ್) ಮತ್ತು ನಗರ ರೈಲು ನಿಲ್ದಾಣ
Advertisement