ಸದಸ್ಯತ್ವಕ್ಕೆ 1.5 ಲಕ್ಷ ಸಂಗ್ರಹ, ಸರ್ಕಾರಕ್ಕೆ ನೀಡುವ ಬಾಡಿಗೆ ಮಾತ್ರ 10 ರು.!

ಸದಸ್ಯತ್ವಕ್ಕೆ ಬರೊಬ್ಬರಿ 1.5 ಲಕ್ಷ ಸಂಗ್ರಹ ಮಾಡುವ ಮಹಿಳಾ ಮಣಿಗಳ ಖ್ಯಾತ ಲೇಡಿಸ್ ಕ್ಲಬ್ ವೊಂದು ಸರ್ಕಾರಕ್ಕೆ ಕೇವಲ 10 ರು. ಮಾತ್ರ ಬಾಡಿಗೆ ನೀಡುತ್ತಿರುವ ವಿಚಾರ ಮಾಹಿತಿ ಹಕ್ಕು ಅರ್ಜಿಯಿಂದಾಗಿ ಬಹಿರಂಗಗೊಂಡಿದೆ...
ಚಿನ್ನಸ್ವಾಮಿ ಕ್ರೀಡಾಂಗಣ, ಲೇಡಿಸ್ ಕ್ಲಬ್ ಹಾಗೂ ಗಾಲ್ಫ್ ಕ್ಲಬ್ ಗಳು (ಸಂಗ್ರಹ ಚಿತ್ರ)
ಚಿನ್ನಸ್ವಾಮಿ ಕ್ರೀಡಾಂಗಣ, ಲೇಡಿಸ್ ಕ್ಲಬ್ ಹಾಗೂ ಗಾಲ್ಫ್ ಕ್ಲಬ್ ಗಳು (ಸಂಗ್ರಹ ಚಿತ್ರ)

ಬೆಂಗಳೂರು: ಸದಸ್ಯತ್ವಕ್ಕೆ ಬರೊಬ್ಬರಿ 1.5 ಲಕ್ಷ ಸಂಗ್ರಹ ಮಾಡುವ ಮಹಿಳಾ ಮಣಿಗಳ ಖ್ಯಾತ ಲೇಡಿಸ್ ಕ್ಲಬ್ ವೊಂದು ಸರ್ಕಾರಕ್ಕೆ ಕೇವಲ 10 ರು. ಮಾತ್ರ ಬಾಡಿಗೆ ನೀಡುತ್ತಿರುವ ವಿಚಾರ  ಮಾಹಿತಿ ಹಕ್ಕು ಅರ್ಜಿಯಿಂದಾಗಿ ಬಹಿರಂಗಗೊಂಡಿದೆ.

ಬೆಂಗಳೂರಿನಲ್ಲಿ 10 ರು. ಬಾಡಿಗೆಗೆ ಫುಟ್ ಪಾತ್ ಮೇಲಿನ ಒಂದಡಿ ಜಾಗ ಸಿಗುವುದೇ ಕಷ್ಟ ಅಂತಹುದರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ಖ್ಯಾತ ಲೇಡಿಸ್ ಕ್ಲಬ್  ವೊಂದು ತನ್ನ 1,697.75 ಅಡಿ ಜಾಗಕ್ಕೆ ಸರ್ಕಾರಕ್ಕೆ ಕೇವಲ 10 ರುಪಾಯಿ ಬಾಡಿಗೆ ನೀಡುತ್ತಿದೆ. ಈ ಆಶ್ಚರ್ಯಕರ ಮಾಹಿತಿ ಆರ್ ಟಿಐ ಮೂಲಕ ಬಹಿರಂಗವಾಗಿದೆ. ಮಾಹಿತಿ ಹಕ್ಕು ಕಾಯ್ದೆ  ಮೂಲಕ ದೊರೆತಿರುವ ಮಾಹಿತಿಗಳ ಪ್ರಕಾರ 1968ರಲ್ಲಿ ಇನ್ ಫೆಂಟ್ರಿ ರಸ್ತೆಯಲ್ಲಿ ಸ್ಥಾಪನೆಯಾದ ಈ ಲೇಡಿಸ್ ಕ್ಲಬ್ ಸರ್ಕಾರ ತನಗೆ ನೀಡಿರುವ ಬರೊಬ್ಬರಿ 1,697.75 ಅಡಿ ಜಾಗಕ್ಕೆ ವಾರ್ಷಿಕ 120  ರು. ಬಾಡಿಗೆ ನೀಡುವಂತೆ 50 ವರ್ಷಗಳ ಅವಧಿಯವರೆಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಕ್ಲಬ್ ನ ಅವಧಿ 2018ಕ್ಕೆ ಕೊನೆಗೊಳ್ಳಲಿದೆ. ಈ ಪ್ರತಿಷ್ಠಿತ ಲೇಡಿಸ್ ಕ್ಲಬ್ ನ ಸದಸ್ಯತ್ವಕ್ಕೇ 1.50 ಲಕ್ಷ ರು.ಗಳನ್ನು ಸಂಗ್ರಹಿಸುತ್ತದೆ ಎಂದು ತಿಳಿದುಬಂದಿದೆ.

ಕೇವಲ ಇದೊಂದೇ ಅಲ್ಲ ನಗರದ ಹಲವು ಕ್ಲಬ್ ಗಳು ಇದೇ ರೀತಿಯಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ದುಬಾರಿ ಜಾಗವನ್ನು ಭೋಗ್ಯಕ್ಕೆ ಪಡೆದಿದ್ದು, ಕೋಟ್ಯಂತರ ಲಾಭ ಮಾಡಿಕೊಂಡು ಸರ್ಕಾರಕ್ಕೆ  ಮಾತ್ರ ಚಿಲ್ಲರೆ ಕಾಸಿನ ಬಾಡಿಗೆ ನೀಡುತ್ತಿವೆ. ಇಂತಹ ಸಂಸ್ಥೆಗಳ ಪೈಕಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ಗಾಲ್ಫ್ ಸ್ಟೇಡಿಯಂ ನಂತಹ ಪ್ರತಿಷ್ಠಿತ ಸಂಸ್ಥೆಗಳು ಕೂಡ ಸೇರಿವೆ.  ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ ಸರ್ಕಾರಕ್ಕೆ ವಾರ್ಷಿಕ 19 ಸಾವಿರ ರು. ನೀಡುತ್ತಿದೆ. ಅಂದರೆ ತಿಂಗಳಿಗೆ 1, 600 ರು. ಮಾತ್ರ. ಆದರೆ ಇಲ್ಲಿ ಸದಸ್ಯತ್ವಕ್ಕಾಗಿ  ಮಾತ್ರ 10 ಲಕ್ಷ ಹಣ ನೀಡಬೇಕು.

ಅಂತೆಯೇ ಗಾಲ್ಫ್ ಕ್ಲಬ್ ವಾರ್ಷಿಕ ತನ್ನ 60 ಎಕರೆ ಪ್ರದೇಶಕ್ಕೆ ವಾರ್ಷಿಕ 15 ಸಾವಿರ ನೀಡುತ್ತಿದೆ. ಇಲ್ಲಿ ಸದಸ್ಯತ್ವ ಪಡೆಯಲು 14 ಲಕ್ಷ ಹಣ ಸಂದಾಯ ಮಾಡಬೇಕು. ಅಂತೆಯೇ ಪ್ರತಿಷ್ಠಿತ  ವಿಂಡ್ಸರ್ ಮ್ಯಾನರ್ ವಾರ್ಷಿಕ 25 ಸಾವಿರ ರು.ಮಾತ್ರ ನೀಡುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ರಸ್ತೆಯಲ್ಲಿರುವ ಈ ಸಂಸ್ಥೆಗಳು ಕೋಟಿ-ಕೋಟಿ ಬೆಲೆ ಬಾಳುವ ಜಾಗವನ್ನು ಇಷ್ಟು  ಕಡಿಮೆ ಮೊತ್ತಕ್ಕೆ ಬಾಡಿಗೆ ಪಡೆದು ಸದಸ್ಯತ್ವದ ಹೆಸರಲ್ಲಿ ಕೋಟಿ ಕೋಟಿ ಹಣ ಬಾಚುತ್ತಿವೆ. ಆದರೂ ಈ ಬಗ್ಗೆ ದಶಕಗಳಿಂದಲೂ ಸರ್ಕಾರವಾಗಲಿ ಅಥವಾ ಬಿಬಿಎಂಪಿ ಅಧಿಕಾರಿಗಳಾಗಲಿ  ತಲೆಕೆಡಿಸಿಕೊಳ್ಳದೇ ಇರುವುದು ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಆರ್ ಟಿಐ ಕಾರ್ಯಕರ್ತ ಮರಿಲಿಂಗೇಗೌಡ ಮಾಲಿ ಪಾಟೀಲ್ ಎಂಬುವವರು ಸಲ್ಲಿಸಿದ್ದ ಅರ್ಜಿಯಿಂದಾಗಿ ಈ ವಿಚಾರಗಳು ಬಹಿರಂಗವಾಗಿದ್ದು, ಕೋಟಿ ಕೋಟಿ ಬೆಲೆ ಬಾಳುವ ಈ ಜಾಗಗಳನ್ನು  ಇಷ್ಟು ಕಡಿಮೆ ಮೊತ್ತಕ್ಕೆ ನೀಡಿ ಬಳಿಕ ಆ ಒಪ್ಪಂದಗಳನ್ನು ನವೀಕರಿಸದೇ ನಿರ್ಲಕ್ಷ್ಯ ತೋರಿರುವ ಸರ್ಕಾರದ ವಿರುದ್ಧ ಅವರು ಕಿಡಿಕಾರಿದ್ದಾರೆ. ಈ ಸಂಸ್ಥೆಗಳೇನೂ ಸಾಮಾಜಿಕ ಸೇವಾ  ಕಾರ್ಯಕ್ರಮಗಳಲ್ಲಿ ತೊಡಗಿಲ್ಲ. ಕೇವಲ ವಾಣಿಜ್ಯಾತ್ಮಕ ಉದ್ದೇಶಕ್ಕಾಗಿ ಮಾತ್ರ ಈ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸದಸ್ಯತ್ವದಿಂದ ಕೋಟಿ ಕೋಟಿ ಹಣ ಬಾಚುತ್ತಿವೆ. ಹೀಗಾಗಿ ಕೂಡಲೇ   ಒಪ್ಪಂದವನ್ನು ಹೊಸ ಮಾರುಕಟ್ಟೆ ದರಗಳೊಂದಿಗೆ ನವೀಕರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com