
ಬೆಂಗಳೂರು: ತನ್ನ ಮದುವೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೇ ನೊಂದ ನವ ವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ.
ಬನಶಂಕರಿ ಸಮೀಪದ ಕಾವೇರಿನಗರದಲ್ಲಿ ಸೋಮವಾರ ರಾತ್ರಿ ದೆಹಲಿ ಮೂಲದ ಅವ್ರಕಾ (31) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವ್ರಕಾ ಹೇರ್ ಕಟಿಂಗ್ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮೂಲತಃ ದೆಹಲಿ ಮೂಲದ ಅವ್ರಕಾ 3 ತಿಂಗಳ ಹಿಂದಷ್ಟೇ ಡಾರ್ಜಿಲಿಂಗ್ ಮೂಲದ ಶಾಂತಿ ಎಕ್ಕಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರ ಪತ್ನಿ ಕೂಡ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ಅವ್ರಕಾ ತನ್ನ ಮದುವೆಗೆ ಓರ್ವ ಫೈನಾನ್ಷಿಯರ್ ನಿಂದ ಸಾಲ ಮಾಡಿದ್ದ. ಆದರೆ ಸಾಲವನ್ನು ತೀರಿಸಲಾಗಿರಲಿಲ್ಲ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ.
ಇದಕ್ಕೂ ಮೊದಲು ದಂಪತಿಗಳ ನಡುವೆ ಮದುವೆಗಾಗಿ ಊರಿಗೆ ಹೋಗಿ ಬರುವ ವಿಚಾರದ ಸಂಬಂಧ ಜಗಳವಾಗಿತ್ತು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement