ಬಿಎಂಸಿಟಿ ಬಸ್ ಚಾಲಕ ಮತ್ತು ನಿರ್ವಾಹಕ (ಟಿಎನ್ ಐಇ ಚಿತ್ರ)
ಬಿಎಂಸಿಟಿ ಬಸ್ ಚಾಲಕ ಮತ್ತು ನಿರ್ವಾಹಕ (ಟಿಎನ್ ಐಇ ಚಿತ್ರ)

ಕುಡಿಯಲು ನೀರಿಲ್ಲ; ಮೂತ್ರ ವಿಸರ್ಜನೆಗೆ ಟೈಮಿಲ್ಲ; ಬಿಎಂಟಿಸಿ ಸಿಬ್ಬಂದಿಗೆ ಅನಾರೋಗ್ಯ ಸಮಸ್ಯೆ

ಪ್ರಸಕ್ತ ಸಾಲಿನ ಬಿರು ಬೇಸಿಗೆ ಜನ ಜೀವನದ ಮೇಲೆ ಭಾರಿ ಹೊಡೆತವನ್ನೇ ನೀಡಿದ್ದು, ರಣ ಬಿಸಿಲ ಹೊಡೆತದಿಂದಾಗಿ ಬಿಎಂಟಿಸಿ ಬಸ್ ಚಾಲಕರು ಆಸ್ಪತ್ರೆ ಪಾಲಾಗುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ...
Published on

ಬೆಂಗಳೂರು: ಪ್ರಸಕ್ತ ಸಾಲಿನ ಬಿರು ಬೇಸಿಗೆ ಜನ ಜೀವನದ ಮೇಲೆ ಭಾರಿ ಹೊಡೆತವನ್ನೇ ನೀಡಿದ್ದು, ರಣ ಬಿಸಿಲ ಹೊಡೆತದಿಂದಾಗಿ ಬಿಎಂಟಿಸಿ ಬಸ್ ಚಾಲಕರು ಆಸ್ಪತ್ರೆ ಪಾಲಾಗುತ್ತಿರುವ  ವಿಚಾರ ಇದೀಗ ಬೆಳಕಿಗೆ ಬಂದಿದೆ.

ರಣ ಬಿಸಿಲು ಒಂದೆಡೆಯಾದರೆ, ಮತ್ತೊಂದೆಡ ಬಸ್ ಎಂಜಿನ್ ನ ತಾಪವನ್ನು ತಡೆದುಕೊಂಡು ಸತತ 8 ಗಂಟೆಗಳ ಕಾಲ ಬಸ್ ಚಲಾಯಿಸುವ ಅನಿವಾರ್ಯತೆಯಲ್ಲಿ ಚಾಲಕರು ಇದ್ದು, ಬಿಸಿಲು  ಮತ್ತು ತಾಪಮಾನ ತಡೆಯಲಾಗದೇ ಕೆಲ ಚಾಲಕರು ಆಸ್ಪತ್ರೆ ಪಾಲಾಗಿದ್ದಾರೆ. ಸಮಸ್ಯೆ ಎಂದರೆ ಬೆಂಗಳೂರಿನ ಬಿಸಿ ಟ್ರಾಫಿಕ್ ನಡುವೆ ಸತತ 8 ಗಂಟೆಗಳ ಕಾಲ ಬಸ್ ಚಾಲನೆ ಮಾಡುವ  ಚಾಲಕರು ಆಗಾಗ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ ಎಂದು ಹೆಚ್ಚಾಗಿ ನೀರು ಸೇವನೆ ಮಾಡುವುದಿಲ್ಲ. ಹೀಗಾಗಿ ಬೇಸಿಗೆಯ ರಣ ಬಿಸಿಲಿನಲ್ಲಿ ನೀರಿಲ್ಲದೇ ಬಸ್ ಚಲಾಯಿಸುವುದರಿಂದ  ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದಕ್ಕೆ ಉಪ್ಪು ಸುರಿಯುವಂತೆ ಬಸ್ ಬ್ರೇಕ್ ಸಮಸ್ಯೆ ಕೂಡ ಚಾಲಕರು ಬೆಂಗಳೂರಿನ ಟ್ರಾಫಿಕ್ ಯುಕ್ತ ರಸ್ತೆಗಳಲ್ಲಿ ಹೈರಾಣಾಗುವಂತೆ ಮಾಡಿದೆ.

ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಅಂದರೆ ಬೇಸಿಗೆ ಆರಂಭವಾದಾಗಿನಿಂದ ದೊಡ್ಡ ದೊಡ್ಡ ಆಸ್ಪತ್ರೆಗಳಾದ ವಿಕ್ಟೋರಿಯಾ, ಬೌರಿಂಗ್ ಮತ್ತು ಎಂಎಸ್ ರಾಮಯ್ಯ ಆಸ್ಪತ್ರೆಗೆ  ಅನಾರೋಗ್ಯದಿಂದ ದಾಖಲಾಗುತ್ತಿರುವ ಬಿಎಂಟಿಸಿ ಬಸ್ ಚಾಲಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಂಎಸ್ ರಾಮಯ್ಯ  ಆಸ್ಪತ್ರೆಯ ವೈದ್ಯ ದಿಶಾ ಕುಮಾರ್ ಅವರು, ಸಾಮಾನ್ಯ ವರ್ಷದ ಇತರೆ ತಿಂಗಳಿಗೆ ಹೋಲಿಕೆ ಮಾಡಿದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಬಿಎಂಟಿಸಿ  ಚಾಲಕರ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಮಂದಿ ಜಠರ ಸಂಬಂಧಿತ ಸಮಸ್ಯೆಗಳಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮುಖವಾಗಿ ಹೊಟ್ಟೆ ನೋವು, ಡಯೇರಿಯಾ ಮತ್ತು ವಾಂತಿ ಬಳಲುತ್ತಿರುವ  ಚಾಲಕರ ಸಂಖ್ಯೆಯೇ ಹೆಚ್ಚು. ಇದಲ್ಲದೆ ಹಲವು ಮಂದಿಯಲ್ಲಿ ನಿರ್ಜಲೀಕರಣ ಮತ್ತು ಹೀಟ್ ಸ್ಟ್ಕೋಕ್ ಸಮಸ್ಯೆಗಳು ಕೂಡ ಕಂಡುಬಂದಿವೆ.

ಇಂತಹುದೇ ಅಭಿಪ್ರಾಯವನ್ನು ಬೌರಿಂಗ್ ಆಸ್ಪತ್ರೆಯ ವೈದ್ಯ ಪ್ರೊ.ರವಿ ಆರ್ ಅವರು ವ್ಯಕ್ತಪಡಿಸಿದ್ದು, ಇಲ್ಲಿ ಬಹುತೇಕ ಚಾಲಕರು ನೀರಿಗೆ ಸಂಬಂಧಿಸಿದ ಸೋಂಕಿನಿಂದ ಆಸ್ಪತ್ರೆಗೆ  ದಾಖಲಾಗುತ್ತಿದ್ದಾರೆ. ಇದಲ್ಲದೆ ಉಸಿರಾಟದ ಸಮಸ್ಯೆ, ಅಸ್ತಮಾ ಮತ್ತು ಅಲರ್ಜಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಚಾಲಕರ ಈ ಅನಾರೋಗ್ಯದ ಸಮಸ್ಯೆಗಳ ಬಗ್ಗೆ ಸ್ವತಃ ಬಿಎಂಟಿಸಿ ಚಾಲಕರೇ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದು, ಶಾಂತಿನಗರ ಮಾರ್ಗವಾಗಿ ಸಂಚರಿಸುವ ಬಿಎಂಟಿಸಿ  ನಿರ್ವಾಹಕ ಸೋಮು ರಾಥೋಡ್ ಅವರು, ನಾವು ಸಂಚರಿಸುವ ಮಾರ್ಗದಲ್ಲಿ ಅತ್ಯಂತ ಹೆಚ್ಚು ಜನ ಪ್ರಯಾಣಿಸುತ್ತಾರೆ. ಹೀಗಾಗಿ ಈ ಮಾರ್ಗದ ಬಸ್ ಗಳಲ್ಲಿ ಯಾವಾಗಲೂ ಜನ ತುಂಬಿರುತ್ತಾರೆ.  ಕಾಲಿಡಲೂ ಕೂಡ ಜಾಗವಿಲ್ಲದ ರೀತಿಯಲ್ಲಿ ಜನ ತುಂಬಿದ್ದು, ಬಿರು ಬೇಸಿಗೆ ನಡುವೆ ಅವರನ್ನು ತಳ್ಳಿಕೊಂಡು ಕಾರ್ಯ ನಿರ್ವಹಿಸುವಾಗ ನಿಜಕ್ಕೂ ನರಕದ ದರ್ಶನವಾಗುತ್ತದೆ. ಆದರೂ ಅನಿವಾರ್ಯವಾಗಿ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಲೇಬೇಕು ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com