ವರದಕ್ಷಿಣೆ ಕಿರುಕುಳ: ಹಿರಿಯರ ಸಂಧಾನದ ವೇಳೆಯಲ್ಲೇ ಮಹಿಳೆ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ನವವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿ ಹಿರಿಯರು ಸಂಧಾನ ಮಾತುಕತೆ ನಡೆಸುತ್ತಿದ್ದಾಗಲೇ ಪಕ್ಕದ ಕೋಣೆಗೆ ತೆರಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಗುಂಟೆ ಸಮೀಪದ ನರಸಿಂಹಯ್ಯ ಲೇಔಟ್‌ನಲ್ಲಿ ಬುಧವಾರ ನಡೆದಿದೆ...
ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)
ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ನವವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿ ಹಿರಿಯರು ಸಂಧಾನ ಮಾತುಕತೆ ನಡೆಸುತ್ತಿದ್ದಾಗಲೇ ಪಕ್ಕದ ಕೋಣೆಗೆ ತೆರಳಿ ನೇಣು  ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಗುಂಟೆ ಸಮೀಪದ ನರಸಿಂಹಯ್ಯ ಲೇಔಟ್‌ನಲ್ಲಿ ಬುಧವಾರ ನಡೆದಿದೆ.

ಮೃತ ಮಹಿಳೆಯನ್ನು ಚಳ್ಳಕೆರೆ ತಾಲ್ಲೂಕು ಚೋಳೂರು ಗ್ರಾಮದ ಮಾನಸ (22) ಎಂದು ಗುರುತಿಸಲಾಗಿದ್ದು, ಪತಿ ಕಾಂತರಾಜು ಮತ್ತು ಆತನ ಪೋಷಕರನ್ನು ಪೀಣ್ಯ ಪೊಲೀಸರು ವಶಕ್ಕೆ  ಪಡೆದಿದ್ದಾರೆ. ಎಂಎಸ್ಸಿ ಪದವೀಧರೆಯಾದ ಮಾನಸ, ಖಾಸಗಿ ಕಂಪೆನಿ ಉದ್ಯೋಗಿ ಕಾಂತರಾಜು ಅವರನ್ನು ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ದಂಪತಿ ನರಸಿಂಹಯ್ಯಲೇಔಟ್‌  ಮೂರನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಒಂದು ತಿಂಗಳು ಸಂಸಾರ ನಡೆಸಿದ ಕಾಂತರಾಜು, ನಂತರ ಪತ್ನಿಯ ಶೀಲ ಶಂಕಿಸಲು ಆರಂಭಿಸಿದ್ದರು. ಈ ವಿಚಾರವಾಗಿ ಗಲಾಟೆ  ಆಗಿ, ಇತ್ತೀಚೆಗೆ ಪತಿ ಕಾಂತರಾಜು ಮಾನಸರನ್ನು ತವರಿಗೆ ಬಿಟ್ಟು ಬಂದಿದ್ದರು. ಅಲ್ಲದೆ, ವಾಪಸ್ ಮನೆಗೆ ಕಳುಹಿಸದಂತೆ ಮಾನಸ ತಂದೆ ಹೊನ್ನಪ್ಪ ಅವರಿಗೂ ಹೇಳಿ ಬಂದಿದ್ದರು ಎಂದು  ಪೊಲೀಸರು ಹೇಳಿದ್ದಾರೆ.

ಇದಾಗಿ 15 ದಿನಗಳ ನಂತರ ಊರಿನ ಹಿರಿಯರ ಜತೆ ಅಳಿಯನ ಮನೆಗೆ ಬಂದ ಮಾನಸ ತಂದೆ ಹೊನ್ನಪ್ಪ, ರಾಜಿ ಪಂಚಾಯ್ತಿ ಮೂಲಕ ದಾಂಪತ್ಯ ಸರಿಪಡಿಸಲು ಯತ್ನಿಸಿದ್ದರು. ಆಗ ಅಳಿಯನಿಗೆ  ಬುದ್ಧಿಹೇಳಿ ಮಾನಸ ಅವರನ್ನು ಅವರ ಬಳಿಯೇ ಬಿಟ್ಟು ಹೋಗಿದ್ದರು. ಆದರೆ, ದಂಪತಿ ನಡುವೆ ಮತ್ತದೇ ವಿಚಾರವಾಗಿ ಗಲಾಟೆ ಮುಂದುವರೆದಿತ್ತು. ಪತ್ನಿ ಇದ್ದರೆ ತಾನು ಇರುವುದಿಲ್ಲ ಎಂದು  ಕಾಂತರಾಜು ಏಪ್ರಿಲ್ 24 ಮನೆ ಬಿಟ್ಟು ಹೋಗಿದ್ದರು. ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ಕಾಂತರಾಜು ತಂದೆ ಶೆಟ್ಟಪ್ಪ, ಚಿಕ್ಕಪ್ಪ ನಾರಾಯಣ ಹಾಗೂ ತಮ್ಮ ನಾಗಣ್ಣ ಅವರು ಮನೆಗೆ ಬಂದು  ಸಂಧಾನದ ಮಾತುಕತೆ ನಡೆಸಿದರು. ಇದೇ ವೇಳೆ ಹೊನ್ನಪ್ಪ ಸಹ ಕೆಲ ಹಿರಿಯ ಸಂಬಂಧಿಗಳ ಜತೆ ಸಂಧಾನ ಮಾತುಕತೆಗೆ ಬಂದಿದ್ದರು.

ಈ ಸಂದರ್ಭದಲ್ಲಿ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಗ ಹೊನ್ನಪ್ಪ, ‘ಮಗಳನ್ನು ಮದುವೆ ಮಾಡಿಕೊಟ್ಟಿದ್ದೇನೆ. ಅವಳು ಈಗ ನಿಮ್ಮ ಹೊಣೆ’ ಎಂದಿದ್ದರು. ಆದರೆ,  ಶೆಟ್ಟಪ್ಪ ಸೊಸೆಯನ್ನು ಮನೆಯಲ್ಲಿಟ್ಟುಕೊಳ್ಳಲು ಒಪ್ಪಿಕೊಂಡಿರಲಿಲ್ಲ. ಇದರಿಂದ ಮನನೊಂದ ಮಾನಸ ಕೂಡಲೇ ಪಕ್ಕದ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಪ್ಪ ಅವರು  ಮಗಳನ್ನು ವಾಪಸ್ ತವರಿಗೆ ಕರೆದುಕೊಂಡು ಹೋಗಲು ಆ ಕೋಣೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಮಾನಸ ತಂದೆ ಹೊನ್ನಪ್ಪ ಅವರು ಪೀಣ್ಯ ಠಾಣೆಗೆ ನೀಡಿದ್ದು, ದೂರಿನ ಸಂಬಂಧ ವರದಕ್ಷಿಣೆ ಸಾವು (ಐಪಿಸಿ 304ಬಿ) ಆರೋಪದಡಿ ಪತಿ ಕಾಂತರಾಜು ಅವರನ್ನು ಪೊಲೀಸರು  ಬಂಧಿಸಿದ್ದಾರೆ. ಅಲ್ಲದೆ ಕಾಂತರಾಜು ತಂದೆ ಶೆಟ್ಟಪ್ಪ, ತಮ್ಮ ನಾಗಣ್ಣ ಹಾಗೂ ಚಿಕ್ಕಪ್ಪ ನಾರಾಯಣ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com