
ಬೆಂಗಳೂರು: ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗ ಪೂರ್ವ-ಪಶ್ಚಿಮ ಕಾರಿಡಾರ್‌ನ ಒಟ್ಟು 18 ಕಿ.ಮೀ. ಉದ್ದದ ಮಾರ್ಗದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗವೆಂಬ ಖ್ಯಾತಿಗಳಿಸಿರುವ ಪೂರ್ವ-ಪಶ್ಚಿಮ ಕಾರಿಡಾರ್ ನ ಸುರಂಗ ಮಾರ್ಗ ನೆಲಮಟ್ಟದಿಂದ 60 ಅಡಿ ಆಳದಲ್ಲಿದೆ. ಇದೇ ಮೊದಲ ಬಾರಿಗೆ ಅಷ್ಟು ಆಳದಲ್ಲಿ ಮೆಟ್ರೋ ರೈಲು ಸಂಚರಿಸುತ್ತಿದ್ದು, ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣ 53 ಅಡಿಯಷ್ಟು ಆಳದಲ್ಲಿದೆ. ಅದೇ ರೀತಿ ಉತ್ತರ-ದಕ್ಷಿಣ ಕಾರಿಡಾರ್‌ನ ನಿಲ್ದಾಣ 80 ಅಡಿ ಆಳದಲ್ಲಿದೆ.
ರೈಲು ಹೋಗಲು ಮತ್ತು ಬರಲು ಜೋಡಿ ಸುರಂಗ ಮಾರ್ಗಗಳಿದ್ದು, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ 10 ನಿಮಿಷಕ್ಕೊಂದು ರೈಲು ಓಡಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದ್ದು, ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ 15 ರೈಲುಗಳು ಸಂಚಾರ ನಡೆಸಲಿವೆ ಎಂದು ತಿಳಿದುಬಂದಿದೆ. ಒಟ್ಟು 18.10 ಕಿ.ಮೀ. ಉದ್ದದ ಪ್ರಯಾಣಕ್ಕೆ 40 ರು. ಟಿಕೆಟ್ ದರವನ್ನು ನಿಗದಿಪಡಿಸಲಾಗಿದ್ದು 34 ರು. ಮೌಲ್ಯದ ಸ್ಮಾರ್ಟ್ ಕಾರ್ಡ್ ಅನ್ನೂ ಕೂಡ ಬಿಡುಗಡೆ ಮಾಡಲಾಗಿದೆ.
ಈ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳಿದ್ದು, ಸುರಂಗದ ಸುತ್ತಳತೆ ಸುಮಾರು 6 ಮೀ.ನಷ್ಟಿದೆ. ನಿಲ್ದಾಣಗಳಲ್ಲಿ ಶೌಚಾಲಯ, ವಾಹನ ನಿಲುಗಡೆ ವ್ಯವಸ್ಥೆಗೆ ಅನುವು ಮಾಡಲಾಗಿದೆ.
80 ಕಿ.ಮೀ. ಸ್ಪೀಡ್
ಸುರಂಗ ಮಾರ್ಗದಲ್ಲಿ ಗಂಟೆಗೆ 80 ಕಿ.ಮೀ. ವೇಗವಾಗಿ ಮೆಟ್ರೋ ರೈಲು ಚಾಲನೆ ಮಾಡಲು ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ. ತಿರುವುಗಳಲ್ಲಿ ರೈಲಿನ ವೇಗ ಗಂಟೆಗೆ 35-40 ಕಿ.ಮೀ.ನಷ್ಟು ಇರಲಿದೆ. ಆದರೆ, ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಕೇವಲ 1ರಿಂದ 1.5 ಕಿ.ಮೀ. ಅಂತರ ಇರುವುದರಿಂದ, ವೇಗವನ್ನು ಹೆಚ್ಚಿಸಿ ನಿಲ್ದಾಣ ಬಂದಾಗ ರೈಲು ನಿಲ್ಲಿಸಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ, ಸುರಂಗ ಮಾರ್ಗದಲ್ಲಿ ರೈಲುಗಳು 38-40 ಕಿ.ಮೀ. ವೇಗವಾಗಿ ಸಂಚರಿಸಲಿವೆ ಎಂದು ಬಿಬಿಎಂಆರ್ ಸಿಎಲ್ ಆಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಯಾಣಿಕರ ಸೇವೆಗೆ ‘ಮೆಟ್ರೊ ಬೈಕ್’ಗಳು ಲಭ್ಯ
ಇನ್ನು ಮೆಟ್ರೋ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗಾಗಿಯೇ ಬಿಎಂಆರ್ ಸಿಎಲ್ ಮೆಟ್ರೋ ಬೈಕ್ ಗಳನ್ನು ಬಾಡಿಗೆಗೆ ನೀಡಲು ಸಿದ್ಧವಾಗಿದ್ದು, ಇಂತಿಷ್ಟು ಬಾಡಿಗೆ ಹಣ ನೀಡಿ ಪ್ರಯಾಣಿಕರು ಬೈಕ್ ಗಳನ್ನು ಕಚೇರಿ ಅಥವಾ ಮನೆಗೆ ಒಯ್ಯಬಹುದಾಗಿದೆ. ಇನ್ನೆರಡು ವಾರಗಳಲ್ಲಿ ನಗರದ ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ‘ಬಾಡಿಗೆ ಬೈಕ್’ ಲಭ್ಯವಾಗಲಿದ್ದು, ಬೈಯಪ್ಪನಹಳ್ಳಿ, ಟ್ರಿನಿಟಿ, ಇಂದಿರಾನಗರ, ಮಂತ್ರಿ ನಿಲ್ದಾಣ, ಪೀಣ್ಯ ನಿಲ್ದಾಣಗಳಲ್ಲಿ 30 ದ್ವಿಚಕ್ರವಾಹನಗಳು ಬಾಡಿಗೆಗೆ ದೊರೆಯಲಿವೆ. ಪ್ರಯಾಣಿಕರು ಗುರುತಿನ ಚೀಟಿ ನೀಡಿ ಬೈಕ್ ಬಾಡಿಗೆಗೆ ಪಡೆಯಬಹುದು. ಮೂರು ಕಿ.ಮೀ. ದೂರದ ಪ್ರಯಾಣಕ್ಕೆ ರು.20 ಬಾಡಿಗೆ ನಿಗದಿಪಡಿಸಲಾಗಿದೆ. ಬಾಡಿಗೆಯ ಅವಧಿ ಅರ್ಧ ಗಂಟೆಯಾಗಿದ್ದು, ಬಳಿಕದ ಪ್ರತಿ ಕಿ.ಮೀ.ಗೆ ಹೆಚ್ಚುವರಿಯಾಗಿ ರು.3 ಪಾವತಿಸಬೇಕು ಎಂದು ಎಂದು ಬಿಎಂಆರ್ ಸಿಎಲ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement