ಬೆಂಗಳೂರು: ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಕಾರ್ಯಾಗಾರದಲ್ಲಿ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ನಡೆಸುತ್ತಿರುವ ಪ್ರತಿಭಟನೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯಾದ್ಯಂತ ವ್ಯಾಪಕ ಹೋರಾಟ ನಡೆಸುತ್ತಿರುವ ಎಬಿವಿಪಿ ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಸಹಾಕಾರ ಚಳುವಳಿ ಆರಂಭಿಸಿದೆ. ಇನ್ನು ಇಂದು ಬೆಂಗಳೂರಿನ ಮಹಾರಾಣಿ ಕಾಲೇಜಿನಿಂದ ಎಬಿವಿಪಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮರೆವಣಿಗೆ ಹಮ್ಮಿಕೊಂಡಿದ್ದರು. ಮೆರವಣಿಗೆಯಲ್ಲಿ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಹಾರಾಣಿ ಕಾಲೇಜಿನಿಂದ ಆರಂಭವಾದ ಮೆರವಣಿಗೆ ಮೈಸೂರು ಬ್ಯಾಂಕ್ ಸರ್ಕಲ್ ವರೆಗೂ ನಡೆಯಿತು.
ಹೀಗಾಗಿ ಈ ಭಾಗದ ರಸ್ತೆಗಳಲ್ಲಿ ವ್ಯಾಪಕ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನ ಸವಾರರು ತೀವ್ರ ಪರದಾಡುವಂತಾಗಿತ್ತು. ಬೃಹತ್ ಮೆರವಣಿಗೆ ನಡೆಯುವ ಕುರಿತು ಮುನ್ಸೂಚನೆ ಪಡೆದ ಪೊಲೀಸರು ವ್ಯಾಪಕ ಭದ್ರತೆ ನೀಡಿದ್ದರು. ಈ ನಡುವೆ ಮೆರವಣಿಗೆ ಸರ್ಕಾರಿ ಕಲಾ ಕಾಲೇಜು ಬಳಿ ಆಗಮಿಸುತ್ತಿದ್ದಂತೆಯೇ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದ ಆರೋಪದ ಮೇರೆಗೆ ಅದೇ ಕಾಲೇಜಿನ ವಿದ್ಯಾರ್ಥಿ ಸಚಿನ್ ರಾಥೋಡ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
Advertisement