

ಬೆಂಗಳೂರು/ಹುಬ್ಬಳ್ಳಿ: ನಾಪತ್ತೆಯಾಗಿದ್ದ ಬೆಂಗಳೂರು ವಿದ್ಯಾರ್ಥಿನಿ ಎಂ.ಕೆ ಪೂಜಿತಾ ಹುಬ್ಬಳ್ಳಿ ರೇಲ್ವೆ ನಿಲ್ದಾಣದಲ್ಲಿ ಸಂಬಂಧಿಕರಿಗೆ ಸಿಕ್ಕಿದ್ದು ನಾಪತ್ತೆ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ.
13 ವರ್ಷದ ಬಾಲಕಿ ಪೂಜಿತಾ ರಾಜಾಜಿನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಳು. ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಉತ್ತರ ಪತ್ರಿಕೆಗೆ ಪೋಷಕರಿಂದ ಸಹಿ ಹಾಕಿಸಿಕೊಂಡು ಬರುವಂತೆ ಶಿಕ್ಷಕರು ಹೇಳಿದ್ದರು. ಇದರಿಂದ ಗಾಬರಿಗೊಂಡ ಪೂಜಿತಾ ಮನೆ ಬಿಟ್ಟು ಹೋಗಿದ್ದಳು.
ಎಂದಿನಂತೆ ಬೆಳಗ್ಗೆ ಶಾಲೆಗೆ ತೆರಳಿದ್ದ ಪೂಜಿತಾ ಸಂಜೆಯಾದರೂ ಮನೆಗೆ ಬಾರದಿದ್ದರಿಂದ ಗಾಬರಿಗೊಂಡು ಪೋಷಕರು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನೋಡಲು ಲಕ್ಷಣವಾಗಿದ್ದ ಹಾಗೂ ಆಟಪಾಠದಲ್ಲಿ ಮುಂದಿದ್ದ ಪೂಜಿತಾ ಇದ್ದಕ್ಕಿದ್ದಂತೆ ಶಾಲೆಯ ಸಮವಸ್ತ್ರದಲ್ಲಿಯೇ ನಾಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು.
ಮುಂಬೈಗೆ ರೈಲಿಯಲ್ಲಿ ಪ್ರಯಾಣಿಸುತ್ತಿದ್ದಾಳೆ ಎಂಬ ಶಂಕೆ ಮೇರೆಗೆ ಹುಬ್ಬಳ್ಳಿಯಲ್ಲಿದ್ದ ಪೂಜಿತಾ ಸಂಬಂಧಿಕರು ಬೆಳಗಿನಿಂದಲೇ ನಗರದ ರೇಲ್ವೆ ನಿಲ್ದಾಣಕ್ಕೆ ಬಂದು ಪೊಲೀಸರ ಸಹಾಯದೊಂದಿಗೆ ಪ್ರತಿಯೊಂದು ರೈಲುಗಳನ್ನು ಪರಿಶೀಲಿಸುತ್ತಿದ್ದಾಗ ರೈಲಿನಲ್ಲಿ ಪೂಜಿತಾ ಪತ್ತೆಯಾಗಿದ್ದಾಳೆ. ಸದ್ಯ ಆಕೆಯನ್ನು ತಮ್ಮ ವಶಕ್ಕೆ ಪಡೆದ ಪೊಲೀಸರು ಕೆಲ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಸಂಬಂಧಿಕರಿಗೆ ಒಪ್ಪಿಸಿದ್ದಾರೆ.
ಹುಬ್ಬಳ್ಳಿಯ ಸಂಬಂಧಿಕರ ಮನೆಯಲ್ಲಿ ಪೂಜಿತಾ ಸುರಕ್ಷಿತವಾಗಿ ಇರುವುದರಿಂದ ಪೂಜಿತಾ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.