ಬೆಂಗಳೂರು: ಬೆಂಗಳೂರಿನಲ್ಲಿ ಉಬರ್ ಟ್ಯಾಕ್ಸಿ ಚಾಲಕರೊಬ್ಬರಿಂದ 200 ರುಪಾಯಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲೆ ಮಂಗಳವಾರ ನಾಲ್ವರು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರಿ) ಆರ್.ಹಿತೇಂದ್ರ ಅವರು ಮಾರ್ಕೆಟ್ ಸಂಚಾರಿ ಠಾಣೆಯ ನಾಲ್ವರು ಸಿಬ್ಬಂದಿಗಳನ್ನು ಅಮಾನತು ಮಾಡಿ ಇಂದು ಆದೇಶ ಹೊರಡಿಸಿದ್ದಾರೆ.
ಹೆಡ್ ಕಾನ್ಸ್ಟೇಬಲ್ ಜಗದೀಶ್, ಪೇದೆಗಳಾದ ಅರುಣ್, ಯೋಗೇಂದ್ರ, ಅನಂತಕುಮಾರ್ ಅಮಾನತು ಗೊಂಡವರು. ಕ್ಯಾಬ್ ಚಾಲಕನಿಂದ 200 ರು. ಲಂಚ ಪಡೆದಿದ್ದ ಪೊಲೀಸರು ರಸೀದಿ ನೀಡಿರಲಿಲ್ಲ. ಕ್ಯಾಬ್ನಲ್ಲಿದ್ದ ಪ್ರಯಾಣಿಕರು ಇದರ ಫೋಟೋ ತೆಗೆದು ಆಯುಕ್ತ ಹಿತೇಂದ್ರ ಅವರಿಗೆ ಕಳುಹಿಸಿದ್ದರು.
ಆರ್.ಹಿತೇಂದ್ರ ಅವರು ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಎಸ್.ಗಿರೀಶ್ ಅವರಿಗೆ ಸೂಚನೆ ನೀಡಿದ್ದರು. ಗಿರೀಶ್ ಅವರು ಈ ಬಗ್ಗೆ ವರದಿ ನೀಡಿದ್ದು, ಲಂಚ ಪಡೆದಿರುವುದು ಸಾಬೀತಾಗಿತ್ತು. ವರದಿಯ ಅನ್ವಯ ನಾಲ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.