ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರು ದೇಶದ ಮೂರನೇ ಅಸುರಕ್ಷಿತ ನಗರಿ; ಚೆನ್ನೈ ನಗರ ಸುರಕ್ಷಿತ
ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈ ನಂತರ ಬೆಂಗಳೂರು ನಗರ ದೇಶದಲ್ಲಿ ಮೂರನೇ ಅಸುರಕ್ಷಿತ ನಗರ ಎಂಬ ಕುಖ್ಯಾತಿಗೆ...
ಬೆಂಗಳೂರು: ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈ ನಂತರ ಬೆಂಗಳೂರು ನಗರ ದೇಶದಲ್ಲಿ ಮೂರನೇ ಅಸುರಕ್ಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ 35 ಸಾವಿರದ 576 ಅಪರಾಧ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ 1.73 ಲಕ್ಷ ಮತ್ತು ಮುಂಬೈಯಲ್ಲಿ 42 ಸಾವಿರದ 940 ಅಪರಾಧ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಂತರ ಕೋಲ್ಕತ್ತಾ(23 ಸಾವಿರದ 990), ಹೈದರಾಬಾದ್(16,965) ಮತ್ತು ಚೆನ್ನೈಯಲ್ಲಿ ಕಳೆದ ವರ್ಷ| 13 ಸಾವಿರದ 422 ಅಪರಾಧ ಪ್ರಕರಣಗಳು ದಾಖಲಾಗಿವೆ. ಚೆನ್ನೈ ನಗರ ದೇಶದಲ್ಲಿಯೇ ಸುರಕ್ಷಿತ ನಗರ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶ ಹೇಳುತ್ತದೆ.
ದೇಶದ 53 ನಗರಗಳಲ್ಲಿ ಬೆಂಗಳೂರು ನಗರದಲ್ಲಿ ಕಳೆದ ವರ್ಷ 188 ಕೊಲೆ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ 464 ಮತ್ತು ಪಾಟ್ನಾದಲ್ಲಿ 232 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 2015ರಲ್ಲಿ 112 ಅತ್ಯಾಚಾರ ಪ್ರಕರಣಗಳು ನಡೆದಿವೆ. 777 ಅಪಹರಣ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದ್ದರೆ, ದೆಹಲಿಯಲ್ಲಿ 6 ಸಾವಿರದ 630, ಮುಂಬೈಯಲ್ಲಿ ಸಾವಿರದ 583 ಪ್ರಕರಣಗಳು ದಾಖಲಾಗಿವೆ.
ಐಟಿ ರಾಜಧಾನಿ ಸೈಬರ್ ಕ್ರೈಮ್ ಕೇಂದ್ರ: ದೇಶದ ಐಟಿ ರಾಜಧಾನಿ ಬೆಂಗಳೂರು ಅತಿ ಹೆಚ್ಚಿನ ಸೈಬರ್ ಕ್ರೈಮ್ ಗೆ ಕುಖ್ಯಾತಿ ಪಡೆದಿದೆ. ಕಳೆದ ವರ್ಷ ಇಲ್ಲಿ ಸಾವಿರದ 41 ಸೈಬರ್ ಕ್ರೈಮ್ ಗಳು ದಾಖಲಾಗಿದ್ದು, ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಇದು ಹೆಚ್ಚಾಗಿದೆ. ನಂತರದ ಸ್ಥಾನಗಳಲ್ಲಿ ಹೈದರಾಬಾದ್(354 ಪ್ರಕರಣಗಳು), ಕೋಲ್ಕತ್ತಾ(111 ಕೇಸು), ದೆಹಲಿ(90), ಮುಂಬೈ(26), ಚೆನ್ನೈ(29) ಪ್ರಕರಣಗಳು ದಾಖಲಾಗಿವೆ. ನಗರಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಪರಾಧ ಪ್ರಕರಣಗಳು ಏರಿಕೆಯಾಗಲು ಕಾರಣ ಹೆಚ್ಚೆಚ್ಚು ಘಟನೆಗಳು ಬೆಳಕಿಗೆ ಬರುತ್ತಿರುವುದು. ಪೊಲೀಸ್ ಠಾಣೆಯಲ್ಲಿ ಹೆಚ್ಚೆಚ್ಚು ದೂರುಗಳು ಬಂದು ಕೇಸು ದಾಖಲಾಗುತ್ತಿವೆ. ಹೀಗೆ ಕೇಸು ದಾಖಲಾಗುವುದರಿಂದ ಅಪರಾಧಗಳ ಪ್ರಮಾಣ ಕಡಿಮೆಯಾಗಬಹುದು ಎನ್ನುತ್ತಾರೆ ಪೊಲೀಸರು.
ವರದಕ್ಷಿಣೆ ಕಿರುಕುಳ: ಬೆಂಗಳೂರು ನಗರದಲ್ಲಿ ವರದಕ್ಷಿಣೆ ಕಿರುಕುಳ ಮತ್ತ ಸಾವಿನ ಪ್ರಕರಣಗಳು ನಡೆಯುವುದು ಹೆಚ್ಚು ಎನ್ನುತ್ತಾರೆ ಸೈಬರ್ ಕ್ರೈಮ್ ದಾಖಲೆಗಳು. ವರದಕ್ಷಿಣೆ ಕಿರುಕುಳ ಕಾಯ್ದೆಯಡಿ 714 ಕೇಸುಗಳು ದಾಖಲಾಗುತ್ತಿವೆ. ಬೆಂಗಳೂರು ನಂತರ ಜೆಮ್ ಶೆಡ್ ಪುರ(157), ಪಾಟ್ನಾ(151)ಗಳಿವೆ. ಮೆಟ್ರೋ ನಗರಗಳಲ್ಲಿ 17 ಕೇಸುಗಳು ಮತ್ತು ಚೆನ್ನೈಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ 3 ಕೇಸುಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ 54 ಕೇಸುಗಳು ದಾಖಲಾಗಿವೆ. ಈ ವಿಷಯದಲ್ಲಿ ದೆಹಲಿ ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ. ದೆಹಲಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ 100 ಕೇಸುಗಳು 2015ರಲ್ಲಿ ದಾಖಲಾಗಿವೆ.
ಕಳೆದ ವರ್ಷ ಬೆಂಗಳೂರಿನಲ್ಲಿ ವೇಗ ಮತ್ತು ಅಜಾಗರೂಕತೆ ಚಾಲನೆಯಿಂದ 784 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೆಟ್ರೋ ನಗರಿಗಳಲ್ಲಿ ದೆಹಲಿಯಲ್ಲಿ ಅತಿ ಹೆಚ್ಚು ಸಾವಿರದ 339 ಪ್ರಕರಣಗಳು ಮತ್ತು ಚೆನ್ನೈಯಲ್ಲಿ 897 ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪ್ರಕರಣಗಳು ದಾಖಲಾಗಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ