
ಬೆಂಗಳೂರು: ಮಾಲ್ ಆಗಲಿ, ಕಾಂಪ್ಲೆಕ್ಸ್ ಆಗಲಿ ಸಜೀವ ರಾಜಕಾಲುವೆ ಮೇಲಿನ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಬುಧವಾರ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿರುವ ಅವರು, 2011ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ತೀರ್ಪು ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನಿರ್ದೇಶನವನ್ನು ಸರ್ಕಾರ ಅನುಸರಿಸುತ್ತಿದೆ. ಒತ್ತುವರಿ ಕಾರ್ಯದಲ್ಲಿ ಯಾವುದೇ ರೀತಿಯ ತಾರತಮ್ಯವನ್ನು ಮಾಡಲಾಗುತ್ತಿಲ್ಲ. ಒತ್ತುವರಿಯಲ್ಲಿ ಬಡವರು, ಶ್ರೀಮಂತರು ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ.
ಬೆಳ್ಳಂದೂರು ಬಳಿ ಪ್ರೆಸ್ಟೀಜ್ ಕಂಪನಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರೆಸ್ಟೀಜ್ ಕಂಪನಿ ಸರ್ಕಾರ ಆಸ್ತಿಯಾದ ಭೂಮಿಯನ್ನು ದೊಡ್ಡಮಟ್ಟದಲ್ಲಿ ಒತ್ತುವರಿ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜಾಜಿನಗರದಲ್ಲಿರುವ ಓರಿಯನ್ ಮಾಲ್ ಒತ್ತುವರಿ ತೆರವು ಕಾರ್ಯದಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವ ಕುರಿತಂತೆ ಮಾತನಾಡಿರುವ ಅವರು, ಈ ಕುರಿತಂತೆ ಮಾಹಿತಿ ಪರಿಶೀಲನೆ ನಂತರವಷ್ಟೇ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಬೆಳ್ಳಂದೂರು ಕೆರೆ ಬಳಿ ಪ್ರೆಸ್ಟೀಜ್ ಕಂಪನಿ ಮಾಡಿಕೊಂಡಿರುವ ಒತ್ತುವರಿ ಭೂಮಿಯನ್ನು ನೋಡಿ ಆಶ್ಚರ್ಯವಾಯಿತು. 100 ಅಡಿಯಿದ್ದ ಭೂಮಿ ಇದೀಗ ಕೇವಲ 10 ಅಡಿಯಿದೆ. ಪರಿಶೀಲನೆ ನಂತರ ಒತ್ತುವರಿಯನ್ನು ತೆರವುಗೊಳಿಸುವಂತೆ ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ, ಬಿಲ್ಡರ್ಸ್ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.
ಕಂದಾಯ ಬಿಡಿಎ, ಬಿಬಿಎಂಪಿ ಅಧಿಕಾರಿಗಳು ಹಾಗೂ ಜನರ ಮಧ್ಯೆ ಹೊಂದಾಣಿಕೆಯಲ್ಲಿ ಸಮಸ್ಯೆಯುಂಟಾಗುತ್ತಿದ್ದು, ಇದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾಗುತ್ತಿವೆ. ಕೆಲ ಅಧಿಕಾರಿಗಳು ಹಣವನ್ನು ಪಡೆಯುತ್ತಿರುವುದಾಗಿ ದೂರುಗಳು ಕೇಳಿಬರುತ್ತಿವೆ. ರಾಜಕಾಲುವೆಯಿಂದ ಹೊರತಾದ ಕಟ್ಟಡಗಳನ್ನು ಒಡೆಯುವುದಿಲ್ಲ. ಯಾರಾದರೂ ಹಣವನ್ನು ಕೇಳಿದರೆ ಜನರು ಕೊಡಬಾರದು ಎಂದು ಹೇಳಿದ್ದಾರೆ.
Advertisement