
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಬಾರ್ ಮತ್ತು ರೆಸ್ಟೋರೆಂಟ್ ಗಳ ಕಾರ್ಯಾವಧಿಯನ್ನು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಅವರು 2 ದಿನಗಳ ಮಟ್ಟಿಗೆ ವಿಸ್ತರಿಸಿದ್ದಾರೆ.
ಡಿಸೆಂಬರ್ 31 ಹಾಗೂ ಜನವರಿ 1ರ ಮಧ್ಯರಾತ್ರಿ 2 ಗಂಟೆಗಳ ವರೆಗೂ ಬಾರ್ ಮತ್ತು ರೆಸ್ಟೋರೆಂಟ್ ಗಳ ಕಾರ್ಯಾವಧಿ ವಿಸ್ತರಣೆಗೆ ಅನುಮತಿ ನೀಡಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಾರ್ ಮತ್ತು ರೆಸ್ಟೋರೆಂಟ್ ಗಳು, ಮನರಂಜನಾ ಕ್ಲಬ್ ಗಳು, ಹೊಟೆಲ್ ಗಳು ರಾತ್ರಿ 2 ಗಂಟೆಗಳ ವರೆಗೂ ಕಾರ್ಯ ನಿರ್ವಹಿಸಬಹುದು ಎಂದು ಹೇಳಿದ್ದಾರೆ.
ಅಂತೆಯೇ ಸಂಭ್ರಮಾಚರಣೆ ಸೋಗಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಅಸಭ್ಯವಾಗಿ ನಡೆದುಕೊಂಡರೆ ಅಥವಾ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಅಂತಹವ ಸಂಸ್ಥೆ ಹಾಗೂ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
2017ರ ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಪ್ರತೀ ವರ್ಷದಂತೆ ಈ ಬಾರಿಯೂ ಸಂಭ್ರಮಾಚರಣೆಯ ಕೇಂದ್ರ ಬಿಂದುವಾಗಿರುವ ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯಲ್ ಸ್ಟ್ಗೀಟ್ ಗಳು ಈಗಾಗಲೇ ಹೊಸ ವರ್ಷವನ್ನು ಸ್ವಾಗತಿಸಲು ಸಿಂಗಾರಗೊಳ್ಳುತ್ತಿವೆ.
Advertisement