ಮಂಗಳೂರು: ಮಡಿಕೇರಿಯ ದಿಡ್ಡಳ್ಳಿಯಲ್ಲಿ ಬುಡಕಟ್ಟು ಜನಾಂಗದವರನ್ನು ಉಚ್ಛಾಟಿಸಿರುವ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಸಲಿಲ್ಲ ಎಂದು ಕನ್ನಡ ಚಿತ್ರ ನಟ ಚೇತನ್ ಆರೋಪಿಸಿದ್ದಾರೆ.
ನಿನ್ನೆ ಮಂಗಳೂರು ಸಮೀಪ ಬಿಜ್ಜೋಡಿಯಲ್ಲಿ ಮಾತನಾಡಿದ ಅವರು, ನಿಷೇಧಾತ್ಮಕ ಆದೇಶ ವಿಧಿಸುವ ಮೂಲಕ ರಾಜ್ಯ ಸರ್ಕಾರ ಪ್ರತಿಭಟನಾಕಾರರ ಪ್ರಯತ್ನಗಳನ್ನು ತಡೆಹಿಡಿಯುತ್ತಿದೆ ಎಂದು ಆರೋಪಿಸಿದರು.
ಬುಡಕಟ್ಟು ಜನಾಂಗದವರ ಪ್ರತಿಭಟನೆ ಸಾಂವಿಧಾನಿಕ ಹಕ್ಕುಗಳನ್ನು ಎಂದಿಗೂ ಮೀರಿ ಹೋಗಿಲ್ಲ. ಸರ್ಕಾರದ ಎಲ್ಲಾ ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಬುಡಕಟ್ಟು ಜನಾಂಗದವರ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ನಿಷೇಧ ಆದೇಶವನ್ನು ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದರು.
ಮಾನವೀಯತೆಯಿಲ್ಲದೆ ಬದುಕುವುದರಲ್ಲಿ ಯಾವುದೇ ಅರ್ಥವಿಲ್ಲ. ಕೆಳಮಟ್ಟದಲ್ಲಿರುವ ಬುಡಕಟ್ಟು ಜನಾಂಗದವರಿಗೆ ನ್ಯಾಯ ಸಿಗಬೇಕಿದೆ. ತುಳಿತಕ್ಕೊಳಗಾಗಿರುವ ಸಮುದಾಯದ ಮತ್ತು ಬುಡಕಟ್ಟು ಜನಾಂಗದವರ ಅಭಿವೃದ್ಧಿ ಸರ್ಕಾರದ ಮುಖ್ಯ ಅಜೆಂಡವಾಗಬೇಕು ಎಂದು ಒತ್ತಾಯಿಸಿದರು.