ಪಂಚಾಯಿತಿ ಸಮರ: ಗೆದ್ದ ಪ್ರಮುಖರು

ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಗಣ್ಯರ ಸಂಬಂಧಿಗಳು ಕಣಕ್ಕೆ ಇಳಿದಿದ್ದರಿಂದ ಈ ಬಾರಿಯ ಚುನಾವಣೆ ಅತ್ಯಂತ ಗಮನ ಸೆಳೆದಿತ್ತು...
ಗೆದ್ದ ಪ್ರಮುಖರ ಸಂಬಂಧಿಗಳು (ಸಂಗ್ರಹ ಚಿತ್ರ)
ಗೆದ್ದ ಪ್ರಮುಖರ ಸಂಬಂಧಿಗಳು (ಸಂಗ್ರಹ ಚಿತ್ರ)

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಗಣ್ಯರ ಸಂಬಂಧಿಗಳು ಕಣಕ್ಕೆ ಇಳಿದಿದ್ದರಿಂದ ಈ ಬಾರಿಯ ಚುನಾವಣೆ ಅತ್ಯಂತ ಗಮನ ಸೆಳೆದಿತ್ತು. ಶಾಸಕರು, ಸಂಸದರ ಸಂಬಂಧಿಕರು ಹೆಚ್ಚಾಗಿ ಕಣದಲ್ಲಿದ್ದು, ಇವರ ಪೈಕಿ ಹಲವರು ಗೆಲವು ಸಾಧಿಸಿದ್ದಾರೆ.

ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಗಣ್ಯರ ಪಟ್ಟಿ ಇಂತಿದೆ.
ಮಾಜಿ ಸಂಸದ ಎಚ್​.ವಿಶ್ವನಾಥ್​ ಪುತ್ರ ಅಮಿತ್​ ಅವರು ಮೈಸೂರು ಜಿಲ್ಲೆ ಭೇರ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಶಾಸಕ ಹೆಚ್ ವೈ ಮೆಟಿ ಪುತ್ರಿ ಭಾಯಕ್ಕ ಅವರು  ಐಹೊಳೆ ಜಿ.ಪಂ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ. ರಾಮನಾಥಪುರ ಜಿ.ಪಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿವ ಮಂಜು ಪತ್ರ ಮಂಥರ್ ಗೌಡ ಗೆಲುವು ಸಾಧಿಸಿದ್ದರೆ, ಚಿಕ್ಕೋಡಿಯ  ನಾಗರಮೊನ್ನೋಳಿ ಜಿ.ಪಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಂಸದ ರಮೇಶ್ ಕತ್ತಿ ಪುತ್ರ ಪವನ್ ಕತ್ತಿ ಅವರ ಜಯ ದಾಖಲಿಸಿದ್ದಾರೆ.

ಉಳಿದಂತೆ ಹುಕ್ಕೇರಿಯ ಅಮ್ಮಣ  ಜಿ.ಪಂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾಜಿ ಸಚಿವ ಉಮೇಶ್ ಕತ್ತಿ ಪುತ್ರ ನಿಕಿಲ್ ಕತ್ತಿಗೆ ಜಯ ಒಲಿದಿದ್ದು, ಹಾಸನ ಜಿಲ್ಲೆ ಬೆಳಗೋಡು ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ  ಸ್ಪರ್ಧಿಸಿದ್ದ ಶಾಸಕ ಎಚ್.ಕೆ. ಕುಮಾರಸ್ವಾಮಿ ಪತ್ನಿ ಚಂಚಲಾ ಅವರು ಗೆಲುವು ಸಾಧಿಸಿದ್ದಾರೆ. ಅಂತೆಯೇ ಮಂಡಿಕಲ್ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್  ಶಾಸಕ ಸುಧಾಕರ್​ ಅವರ ತಂದೆ ಕೇಶವರೆಡ್ಡಿ ಜಯಭೇರಿ ಬಾರಿಸಿದ್ದಾರೆ.

ಸಚಿವ ಆಂಜನೇಯ ಸೊಸೆಗೆ ಜಯ
ತಾಳ್ಯ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿವ ಆಂಜನೇಯ ಅವರ ಸೊಸೆ ಸವಿತಾ ಅವರು ಗೆಲುವು ದಾಖಲಿಸಿದ್ದರೆ, ಹೊಳಲೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಸ್.  ಈಶ್ವರಪ್ಪ ಪುತ್ರ ಕಾಂತೇಶ್​ ಗೆಲುವು ಸಾಧಿಸಿದ್ದಾರೆ. ಕೊಪ್ಪಳ ಜಿಲ್ಲೆ ಲೇಬಗೇರಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಪುತ್ರ ಗವಿಸಿದ್ದೇಶ್ವರ್​ ಕೂಡ ಗೆಲುವು ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com