
ಬೆಂಗಳೂರು: ಅಪರಾಧ ತಡೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಒಳಗೊಂಡಿರುವ 222 ನೂತನ 'ಹೊಯ್ಸಳ' ಪೊಲೀಸ್ ಗಸ್ತು ವಾಹನಗಳು ಶನಿವಾರದಿಂದ ತಮ್ಮ ಸಂಚಾರವನ್ನು ಆರಂಭಿಸಲಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಅವರು, ನೂತನ 222 ಹೊಸ ವಾಹನಗಳು ಶನಿವಾರದಿಂದ ನಗರದಲ್ಲಿ ಕಾರ್ಯನಿರ್ವಹಿಸಲಿದೆ. ಗಸ್ತು ವ್ಯವಸ್ಥಾ ವಾಹನಗಳು ಪೊಲೀಸ್ ಮೆಗಾಸಿಟಿ ಪೊಲೀಸಿಂಗ್ ಯೋಜನೆಯಡಿಯಲ್ಲಿ ನೂತನ ಗಸ್ತು ವಾಹನಗಳು ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಪೊಲೀಸ್ ಇಲಾಖೆಯೇ ವಾಹನಗಳ ನಿಯಂತ್ರಣವನ್ನು ನೋಡಿಕೊಳ್ಳಲಿದೆ. ಮೆಗಾಸಿಟಿ ಪೊಲೀಸಿಂಗ್ ಯೋಜನೆಯಡಿಯಲ್ಲಿ 222 ಮಾರುತಿ ಎರ್ಟಿಗಾ- ಎಲ್ ಡಿ 1 ವಾಹನಗಳನ್ನು ಖರೀದಿಸಲಾಗಿದೆ. ಯೋಜನೆಯಡಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಅನ್ನು ರು. 4.38 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೇಲ್ಜರ್ಜೆಗೇರಿಸಲಾಗಿದೆ.
ನಗರ ಪೊಲೀಸ್ ಘಟಕದ ಎಲ್ಲಾ ಹೊಯ್ಸಳ ವಾಹನಗಳನ್ನು ಕೇಂದ್ರೀಕರಿಸಿ. ಪೊಲೀಸ್ ಆಯುಕ್ತರ ಕಚೇರಿ ಕಮಾಂಡ್ ಸೆಂಟರ್ ಅಧೀನಕ್ಕೆ ಒಳಪಡಿಸಲಾಗಿದೆ. ಆದರೆ, ಈ ವಾಹನಗಳನ್ನು ಪ್ರತ್ಯೇಕ ಹೊಯ್ಸಳ ನಿಯಂತ್ರಣ ಕೊಠಡಿಯಿಂದಲೇ ನಿಯಂತ್ರಿಸಲಾಗುತ್ತದೆ. ಸಿವಿಲ್ ವೃಂದದ ಒಬ್ಬ ಎಎಸ್ಐ ಅಥವಾ ಮುಖ್ಯ ಪೇದೆ ದರ್ಜೆಯ ಅಧಿಕಾರಿಗಳು ಉಸ್ತುವಾರಿಯಲ್ಲಿ ವಾಹನವಿರುತ್ತದೆ. ಪ್ರತಿ ಪಾಳಿಗೆ ಒಬ್ಬ ಚಾಲಕ, ಸಹಾಯಕ ಸಿಬ್ಬಂದಿ ಇರಲಿದ್ದಾರೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ದಿಷ್ಟ ಸ್ಥಳಗಳಿಗೆ ವಾಹನ ನಿಲುಗಡೆ ಮಾಡಲಾಗುತ್ತದೆ. ನಿಯಂತ್ರಣ ಕೊಠಡಿಯಿಂದ ನಿಸ್ತಂತು ಅಥವಾ ಮೊಬೈಲ್ ಡೇಟಾ ಟರ್ಮಿನಲ್ (ಎಂಡಿಟಿಸಿ) ಸಂದೇಶದ ಮೇರೆಗೆ ವಾಹನ ಕಾರ್ಯ ಪ್ರವೃತ್ತವಾಗಲಿದೆ ಎಂದು ಹೇಳಿದ್ದಾರೆ.
ಕಮಾಂಡ್ ಸೆಂಟರ್ ನಿಂದ ಸಂದೇಶ ಬರುವವರೆಗೂ ವಾಹನಗಳು ತೆರಳುವುದಿಲ್ಲ. ಒಂದು ವೇಳೆ ತುರ್ತು ಪರಿಸ್ಥಿತಿ ಎದುರಾಗಿದ್ದೇ ಆದರೆ, ಸ್ಥಳೀಯ ವಾಹನಗಳು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡುವುದು. ಪ್ರತಿ ನಾಲ್ಕು ಘಂಟೆಗಳಿಗೊಮ್ಮೆ ವಾಹನಗಳ ಸ್ಥಳಗಳು ಬದಲಾಗುತ್ತಿರುತ್ತದೆ. ಹೊಯ್ಸಳ ವಾಹನದಲ್ಲಿರುವ ಸಿಬ್ಬಂದಿಗಳು ಘಟನಾ ಸ್ಥಳದ ಫೋಟೋ ತೆಗೆದು ಹಾಗೂ ಪರಿಸ್ಥಿತಿಯನ್ನು ಅವಲೋಕಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ವರದಿಯನ್ನು ಸಲ್ಲಿಸುತ್ತಾರೆ. ಇದರಂತೆ ಅತ್ಯಾಧುನಿಕ ವಾಹನಗಳು ನಗರದಲ್ಲಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಯೋಜನೆಯಡಿಯಲ್ಲಿ ಮತ್ತೆ 200 ವಾಹನಗಳನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ವಾಹನಗಳಲ್ಲಿ ತಂತ್ರಜ್ಞಾನ ಬಳಕೆ
ವಾಹನಗಳನ್ನು ಟ್ರಿನಿಟಿ ಮೊಬೈಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಥರ್ಡ್ ವೇವ್ ಕಂಪನಿ ತಯಾರು ಮಾಡಿದ್ದು, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮೊಬೈಲ್ ಡಾಟಾ ಟರ್ಮಿನಲ್ ಉಪಕರಣಗಳನ್ನು ಎಲ್ಲಾ ಹೊಯ್ಸಳ ವಾಹನಗಳಿಗೆ ಅಳವಡಿಸಲಾಗಿದೆ. ಕಮಾಂಡ್ ಸೆಂಟರ್ ಗಳು ವಾಹನಗಳನ್ನು ಸಂಪರ್ಕಿಸಲು ಇದು ಸಹಕಾರಿಯಾಗಲಿದೆ. ಸಾಮಾಜಿಕ ಜಾಲತಾಣಗಳ ಸಂದೇಶಗಳು, ಇ-ಮೇಲ್ ಮತ್ತು ಎಸ್ಎಂಎಸ್ ಮೂಲಕ ಡಯಲ್- 100 ವಿಭಾಗಕ್ಕೆ ಬರುವ ಎಲ್ಲಾ ದೂರುಗಳನ್ನು ಎಂಡಿಟಿ ಮೂಲಕ ಸಮೀಪದ ಹೊಯ್ಸಳ ವಾಹನಕ್ಕೆ ರವಾನಿಸಲಾಗುತ್ತದೆ. ನಂತರ ವಾಹನಗಳು ಕಾರ್ಯಪ್ರವೃತ್ತಿಗೊಳ್ಳುತ್ತದೆ ಎಂದು ಮೇಘರಿಕ್ ಅವರು ಹೇಳಿದ್ದಾರೆ.
Advertisement