

ಚಿಕ್ಕಮಗಳೂರು: 10 ಲಕ್ಷ ರುಪಾಯಿಗಾಗಿ ರೌಡಿಗಳನ್ನು ಬಿಟ್ಟು ಯುವಕನನ್ನು ಅಪಹರಣ ಮಾಡಿಸಿದ್ದ ಆರೋಪ ಹೊತ್ತಿದ್ದ ಚಿಕ್ಕಮಗಳೂರು ವಿಭಾಗದ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಣಕ್ಕಾಗಿ ಕಲ್ಲಪ್ಪ ಹಂಡಿಭಾಗ್ ತನ್ನನ್ನು ಮಾಡಿಸಿ 10 ಲಕ್ಷ ರುಪಾಯಿ ಪಡೆದಿದ್ದಾರೆ ಎಂದು ಆರೋಪ ತೇಜಸ್ ಗೌಡ ಎಂಬುವರು ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ನಂತರ ಕಲ್ಲಪ್ಪ ಹಂಡಿಭಾಗ್ ತಲೆಮರಿಸಿಕೊಂಡಿದ್ದರು.
ಕಲ್ಲಪ್ಪ ನಿನ್ನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡಕ್ಕೆ ತೆರಳಿದ್ದು ತಮ್ಮ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ಕಲ್ಲಪ್ಪರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಆಸ್ಪತ್ರೆಯ ವೈದ್ಯರು ಕಲ್ಲಪ್ಪ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಏನಿದು ಘಟನೆ?
ಚಿಕ್ಕಮಗಳೂರಿನ ಹೋಮ್ ಸ್ಟೇವೊಂದರಲ್ಲಿ ತೇಜಸ್ ಗೌಡ ಹಾಗೂ ಸ್ನೇಹಿತರು ಇಸ್ಪೀಟ್ ಆಡುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಪ್ರಕರಣದಲ್ಲಿ ತೇಜಸ್ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಜೈಲಿನಿಂದ ಹೊರಬಂದ ನಂತರ ಜೂನ್ 28ರಂದು ತೇಜಸ್ ನನ್ನು ದುಷ್ಕರ್ಮಿಗಳು ಅಪಹರಿಸಿದ್ದರು.
ಬಳಿಕ ಡಿವೈಎಸ್ಪಿ ಕಲ್ಲಪ್ಪ 10 ಲಕ್ಷ ರುಪಾಯಿ ಹಣ ತಲುಪಿಸುವಂತೆ ದೂರವಾಣಿ ಮೂಲಕ ಸೂಚಿಸಿದ್ದ. ಅದರಂತೆ ತೇಜಸ್ ಸ್ನೇಹಿತ ಪವನ್ 10 ಲಕ್ಷ ರುಪಾಯಿ ಹಣವನ್ನು ತಲುಪಿಸಿದ್ದ. ಹಣ ನೀಡಿದ ನಂತರ ತೇಜಸ್, ಹಂಡಿಬಾಗ್ ವಿರುದ್ಧ ಎಸ್ಪಿ ಅವರಿಗೆ ದೂರು ನೀಡಿದ್ದ. ಅದರಂತೆ ತನಿಖೆ ನಡೆಸಿದಾಗ ಈ ವಿಷಯ ಬಯಲಾಗಿದೆ.