

ಬೆಂಗಳೂರು: ಮುಂದಿನ ವರ್ಷದಿಂದ ವೃತ್ತಿಪರ ಶಿಕ್ಷಣ ನೀಡುವ ಕಾಲೇಜಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಸಿಇಟಿ ಬರೆಯುವ ಅವಕಾಶ ಇರಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕನ್ನಡದಲ್ಲಿ ಸಿಇಟಿ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದು ಸರ್ಕಾರದಿಂದ ಅನುಮತಿ ಪಡೆಯುವುದಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿರುವ ವರದಿಯ ಪ್ರಕಾರ ಕೆಇಎ 2017 ರ ಸಿಇಟಿ ಯನ್ನು ಕನ್ನಡದಲ್ಲಿ ನಡೆಸುವುದರ ಬಗ್ಗೆ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದು, ಸರ್ಕಾರದ ಪ್ರತಿಕ್ರಿಯೆ ಬಂದ ಬಳಿಕ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಗೊಳ್ಳಲಿದೆ.
ಕನ್ನಡದಲ್ಲಿ ಸಿಇಟಿ ನಡೆಸುವುದಕ್ಕೆ ಯುಪಿಎಸ್ ಸಿ ಪರೀಕ್ಷೆಯ ಮಾದರಿ ಸ್ಫೂರ್ತಿಯಾಗಿದ್ದು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಯುಪಿಎಸ್ ಸಿ ಪರೀಕ್ಷೆಗಳನ್ನು ಬರೆಯುವುದಕ್ಕೆ ಅವಕಾಶ ಇರುವಂತೆ ಸಿಇಟಿಯನ್ನು ಕನ್ನಡದಲ್ಲಿ ಬರೆಯುವುದಕ್ಕೆ ಅವಕಾಶ ಮಾಡಿಕೊಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದ್ದು ಕನ್ನಡದಲ್ಲಿ ಪರೀಕ್ಷೆ ನಡೆಸುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗಾಗಿ ಅರ್ಜಿ ತುಂಬುವ ವೇಳೆ ಪರೀಕ್ಷೆ ಬರೆಯಲು ಇಚ್ಛಿಸುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು, ಒಮ್ಮೆ ಭಾಷೆಯನ್ನು ಆಯ್ಕೆ ಮಾಡಿಕೊಂಡ ನಂತರ ಅದನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ಕೆಇಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.