4 ತಿಂಗಳಿಂದ ಸಿಗದ ಸಂಬಳ: ಹಿರಿಯ ಅಧಿಕಾರಿ ಮುಂದೆ ಮಹಿಳಾ ಹೋಂ ಗಾರ್ಡ್ ಆತ್ಮಹತ್ಯೆ ಯತ್ನ

ಕಳೆದ ನಾಲ್ಕು ತಿಂಗಳಿಂದ ಸಂಬಳ ಸಿಗದೇ ನೊಂದಿದ್ದ ಮಹಿಳಾ ಗೃಹ ರಕ್ಷಕ ಸಿಬ್ಬಂದಿಯೊಬ್ಬರು ಸಂಚಾರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ...
ಸುಮತಿ
ಸುಮತಿ

ಬೆಂಗಳೂರು: ಕಳೆದ ನಾಲ್ಕು ತಿಂಗಳಿಂದ ಸಂಬಳ ಸಿಗದೇ ನೊಂದಿದ್ದ ಮಹಿಳಾ ಗೃಹ ರಕ್ಷಕ ಸಿಬ್ಬಂದಿಯೊಬ್ಬರು ಸಂಚಾರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಸುಮತಿ ಆತ್ಮಹತ್ಯೆಗೆ ಯತ್ನಿಸಿದ ಹೋಂ ಗಾರ್ಡ್ ಸಿಬ್ಬಂದಿಯಾಗಿದ್ದಾರೆ. ಸುಮತಿ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಕಾರ್ಯ ನಿರ್ವಹಿಸುತ್ತಿದ್ದರು.

ಗುರುವಾರ ಸಂಜೆವರೆಗೂ ಆಯುಕ್ತರ ಕಚೇರಿ ಬಳಿ ಕೆಲಸ ಮಾಡಿ, ಸಂಜೆ ಸಂಚಾರಿ ವಿಭಾಗದ ಡಿಸಿಪಿ ಅಭಿಷೇಕ್ ಗೋಯೆಲ್ ಮುಂದೆ ಹೋಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮಾತಿನ ನಡುವೆ ಸುಮತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಕ್ಷಣವೇ ಅಧಿಕಾರಿಗಳು ಸುಮತಿಯನ್ನು ತಡೆದು ಸಮಾಧಾನ ಪಡಿಸಿದ್ದಾರೆ. ಇತ್ತೀಚೆಗೆ ಸಂಚಾರಿ ವಿಭಾಗದ ಡಿಸಿಪಿ ಆಗಿ ನೇಮಕಗೊಂಡಿರುವ ಅಭಿಷೇಕ್ ಗೋಯೆಲ್ ಈ ಘಟನೆಯಿಂದ ಆಘಾತಕ್ಕೊಳಗಾದರು ಎಂದು ಮೂಲಗಳು ತಿಳಿಸಿವೆ.

ಕಳೆದ ಆರು ವರ್ಷಗಳಿಂದ ಬೆಂಗಳೂರು ಪೊಲೀಸರ ಜೊತೆ ಕೆಲಸ ಮಾಡುತ್ತಿದ್ದೇನೆ, ಕಳೆದ ನಾಲ್ಕು ತಿಂಗಳಿಂದ 1 ರೂಪಾಯಿ ಸಂಬಳ ಬಂದಿಲ್ಲ, ಮಗನ ಶಾಲೆಯ ಫೀಸ್ ಮತ್ತು ಮನೆ ನಿರ್ವಹಣೆಗಾಗಿ ಈಗಾಗಲೇ 35 ಸಾವಿರ ರೂ ಸಾಲ ಪಡೆದಿದ್ದೇನೆ. ನಾನು ಆತ್ಮಹತ್ಯೆಗೆ ಯತ್ನಿಸಿದ್ದು ನಿಜ ಎಂದು ಹೇಳಿರುವ ಸುಮತಿ, ಈ ವಿಷಯ ಬಹಿರಂಗ ಪಡಿಸಿರುವುದಕ್ಕೆ ನನ್ನನ್ನ ಕೆಲಸದಿಂದ ಕಿತ್ತು ಹಾಕುವ ಸಾಧ್ಯತೆಗಳಿವೆ ಎಂಬ ಆತಂಕ ವ್ಯಕ್ತ ಪಡಿಸಿದ್ದಾರೆ.

ಸುಮತಿ ಅವರು 12 ಸಾವಿರ ಸಂಬಳ ಪಡೆಯುತ್ತಿದ್ದು, ತುಂಬಾ ಬಡ ಕುಟುಂಬದವರಾಗಿದ್ದು, ತನ್ನ ಪೊಲೀಸ್ ಸ್ನೇಹಿತರ ಬಳಿ ಸಾಲ ಮಾಡಿದ್ದಾರೆಂದು ಪೊಲೀಸರೊಬ್ಬರು ತಿಳಿಸಿದ್ದಾರೆ.

ಗೃಹರಕ್ಷಕ ಸಿಬ್ಬಂದಿಯಾದರೂ ಸುಮತಿ ಸಂಚಾರಿ ಪೊಲೀಸರಿಗೆ ಸರಿಸಮವಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಲವು ಪ್ರಶಸ್ತಿಗಳನ್ನು ಸಹ ಸುಮತಿ ಪಡೆದಿದ್ದಾರೆ. ಜೀವನದಲ್ಲಿ ಹಲವು ರೀತಿಯ ಸಮಸ್ಯೆ ಎದುರಿಸಿದ್ದೇನೆ. ಆದರೆ ಯಾವತ್ತೂ ಸಾಯುವ ಯೋಚನೆ ಮಾಡಿರಲಿಲ್ಲ, ಇದಗೇ ಮೊದಲ ಬಾರಿ ಹತಾಶಳಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದೆ ಎಂದು ಸುಮತಿ ತಿಳಿಸಿದ್ದಾರೆ.

ಇನ್ನೂ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಅಭಿಷೇಕ್ ಗೋಯೆಲ್, ಘಟನೆ ಬಗ್ಗೆ ನನಗೇನು ತಿಳಿದಿಲ್ಲ, ಆದರೆ ಹೋಂ ಗಾರ್ಡ್ಸ್ ಸಿಬ್ಬಂದಿಗೆ ವೇತನ ನೀಡುವುದರಲ್ಲಿ ವಿಳಂಬವಾಗುತ್ತಿದೆ. ಶೀಘ್ರವೇ ಈ ಸಮಸ್ಯೆಗೆ ಬಗೆಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com